10 ಸೀಟಿಗಾಗಿ ಕಾನೂನುಶಾಲೆಗೆ ಉಚಿತ 10 ಎಕ್ರೆ!

| Published : Oct 29 2024, 12:52 AM IST

ಸಾರಾಂಶ

ರಾಜಧಾನಿಯಲ್ಲಿನ ‘ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿ’ (ಎನ್‌ಎಲ್‌ಎಸ್‌ಐಯು)ಯಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಾತಿನಿಧ್ಯಕ್ಕಾಗಿ ಕಾನೂನು ಸಂಘರ್ಷ ನಡೆಯುತ್ತಿರುವ ಹಂತದಲ್ಲೇ ರಾಜ್ಯ ಸರ್ಕಾರ ಮತ್ತೆ ಈ ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರು. ಬೆಲೆಬಾಳುವ 7 ಎಕರೆ ಜಾಗವನ್ನು ಮುಫತ್ತಾಗಿ ನೀಡಿದೆ!

ಲಿಂಗರಾಜು ಕೋರಾಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜಧಾನಿಯಲ್ಲಿನ ‘ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯಾ ಯೂನಿವರ್ಸಿಟಿ’ (ಎನ್‌ಎಲ್‌ಎಸ್‌ಐಯು)ಯಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ ಸೂಕ್ತ ಪ್ರಾತಿನಿಧ್ಯಕ್ಕಾಗಿ ಕಾನೂನು ಸಂಘರ್ಷ ನಡೆಯುತ್ತಿರುವ ಹಂತದಲ್ಲೇ ರಾಜ್ಯ ಸರ್ಕಾರ ಮತ್ತೆ ಈ ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರು. ಬೆಲೆಬಾಳುವ 7 ಎಕರೆ ಜಾಗವನ್ನು ಮುಫತ್ತಾಗಿ ನೀಡಿದೆ!

ಇದಕ್ಕೆ ಪ್ರತಿಯಾಗಿ, ಕೇವಲ 10 ಕಾನೂನು ಪದವಿ ಸೀಟುಗಳನ್ನು ಕನ್ನಡಿಗರಿಗೆ ನೀಡುವ ಸದರಿ ಯೂನಿವರ್ಸಿಟಿಯ ಭರವಸೆಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ!!

- ಹೌದು. ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಎನ್‌ಎಲ್‌ಎಸ್‌ಐಯುಗೆ ಸರ್ಕಾರ 23 ಎಕರೆ ನೀಡಿದ್ದು, ವಿವಿ ಅಲ್ಲಿ ಕಾರ್ಯಾಚರಿಸುತ್ತಿದೆ. ಇದರ ಬದಲಾಗಿ, ಕನ್ನಡಿಗರಿಗೆ ಶೇ. 25ರಷ್ಟು ಸೀಟು ಮೀಸಲಿಡಬೇಕು ಎಂಬ ಸರ್ಕಾರದ ಬೇಡಿಕೆಗೆ ವಿವಿ ಕ್ಯಾರೆ ಎನ್ನುತ್ತಿಲ್ಲ. ಕನ್ನಡದ ಮಕ್ಕಳಿಗೆ ಲಭ್ಯವಾಗಬೇಕಾದ ನ್ಯಾಯಯುತ ಸೀಟುಗಳನ್ನೂ ನೀಡುತ್ತಿಲ್ಲ.

ಆದಾಗ್ಯೂ ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇವಲ 10 ಸೀಟು ಪಡೆಯುವ ಭರವಸೆ ಪಡೆದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ 7 ಎಕರೆ ಜಮೀನನ್ನು ಈ ಲಾ ಯೂನಿವರ್ಸಿಟಿಗೆ ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವಿಚಿತ್ರ ಎಂದರೆ, ಈ ಕನ್ನಡಿಗರ ವಿರೋಧಿ ಧೋರಣೆಗೆ ಆಕ್ಷೇಪವೆತ್ತದ ರಾಜ್ಯ ಸರ್ಕಾರ, ಕಾನೂನು ವಿವಿ ಕೊಟ್ಟಷ್ಟೇ ಸೀಟಿಗೆ ತೃಪ್ತಿಪಟ್ಟು 7 ಎಕರೆ ಜಾಗ ನೀಡಲು ತೀರ್ಮಾನಿಸಿದೆ ಎಂದು ಸರ್ಕಾರದ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ.

ಈಡೇರದ ಶೇ.25ರ ಬೇಡಿಕೆ:

ರಾಜ್ಯ ಸರ್ಕಾರದಿಂದ 23 ಎಕರೆ ಭೂಮಿ ಪಡೆದು ಆರಂಭಗೊಂಡ ಕಾನೂನು ಶಾಲೆಯು ಒಟ್ಟಾರೆ ಸೀಟುಗಳಲ್ಲಿ ಕನಿಷ್ಠ ಶೇ.25ರಷ್ಟು ಸೀಟುಗಳನ್ನು (ಮೆರಿಟ್‌ ಹಾಗೂ ಇತರೆ ಮೀಸಲಾತಿ ಆಧಾರದಲ್ಲಿ ರಾಜ್ಯದ ವಿದ್ಯಾರ್ಥಿಗಳು ಪಡೆದ ಸೀಟುಗಳನ್ನು ಹೊರತುಪಡಿಸಿ) ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕೆಂಬ ಬಹುದಿನಗಳ ಬೇಡಿಕೆ ಇನ್ನೂ ಈಡೇರಿಲ್ಲ.

ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಏಳು ಎಕರೆ ಜಾಗವನ್ನು ರಾಷ್ಟ್ರೀಯ ಕಾನೂನು ಶಾಲೆಗೆ ಹಸ್ತಾಂತರಿಸುವ ತೀರ್ಮಾನವನ್ನು ಕೂಡಲೇ ಮರುಪರಿಶೀಲಿಸಬೇಕು. ಈ ಜಾಗವನ್ನು ಹಸ್ತಾಂತರಿಸುವ ಮುನ್ನ ಆ ಸಂಸ್ಥೆಯೊಂದಿಗೆ ಸ್ಥಳೀಯ ಕನ್ನಡದ ವಿದ್ಯಾರ್ಥಿಗಳಿಗೆ ಶೇ.25ರ ಪ್ರಾತಿನಿಧ್ಯವನ್ನು ಕಲ್ಪಿಸಲು ಸೂಕ್ತ ಒಡಂಬಡಿಕೆ ಮಾಡಿಕೊಂಡು, ಪ್ರತಿವರ್ಷ ಈ ಪ್ರಾತಿನಿಧ್ಯವನ್ನು ಮುಂದುವರೆಸಿ ಕನ್ನಡಿಗರ ಹಿತ ಕಾಯುವ ಕೆಲಸವಾಗಬೇಕು ಎಂದು ಕೋರಿದ್ದಾರೆ.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್‌ ಅವರು ಮಾತನಾಡಿ, ಮೆರಿಟ್‌ ಹಾಗೂ ಇನ್ನಿತರೆ ಮೀಸಲಾತಿ ಆಧಾರದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿರುವ ಶೇ.25ರಷ್ಟು ಸೀಟುಗಳ ವ್ಯಾಪ್ತಿಗೆ ಪರಿಗಣಿಸುವ ಕಾನೂನು ಯಾವ ರಾಜ್ಯದಲ್ಲೂ ಇಲ್ಲ. ಆದರೆ, ಕರ್ನಾಟಕದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯವರು ಇಂತಹ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಸಮರ್ಥ ಕಾನೂನು ಹೋರಾಟ ನಡೆಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

16 ಎಕರೆಗೆ ಪ್ರಸ್ತಾವನೆ:

ನಾಗರಬಾವಿ ಬಳಿ ಇರುವ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ತನ್ನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಲು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಹೆಚ್ಚುವರಿಯಾಗಿ ಇನ್ನೂ 16 ಎಕರೆ ಭೂಮಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಿ ಪರಿಶೀಲಿಸಿ ಸೂಕ್ತ ಜಾಗ ನೀಡಲು ಸರ್ಕಾರ ಸೂಚಿಸಿತ್ತು.

ಆದರೆ, ಈಗಾಗಲೇ ಇರುವ ಕ್ಯಾಂಪಸ್‌ ಜಾಗದಲ್ಲಿ ನೂರಾರು ಎಕರೆ ಭೂಮಿಯನ್ನು ಬೇರೆ ಸಂಸ್ಥೆಗಳಿಗೆ ನೀಡಲಾಗಿದೆ. ಇದೇ ರೀತಿ ನೀಡುತ್ತಾ ಹೋದರೆ ಮೂಲ ಬೆಂಗಳೂರು ವಿವಿಗೇ ಸ್ಥಳಾವಕಾಶದ ಕೊರತೆ ಎದುರಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ಬಳಿಕ ಸರ್ಕಾರ, ಕನಿಷ್ಠ 7 ಎಕರೆ ಜಾಗ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿತ್ತು. ಸರ್ಕಾರದ ಸೂಚನೆ ತಿರಸ್ಕರಿಸಲಾಗದ ಬೆಂಗಳೂರು ವಿಶ್ವವಿದ್ಯಾಲಯವು ಸಿಂಡಿಕೇಟ್‌ ಸಭೆಯಲ್ಲಿ ಕೆಲ ಸದಸ್ಯರ ವಿರೋಧದ ನಡುವೆಯೂ ಅನಿವಾರ್ಯವಾಗಿ ಇದಕ್ಕೆ ಒಪ್ಪಿಗೆ ಪಡೆದು ಸರ್ಕಾರಕ್ಕೆ ನಡಾವಳಿ ಕಳುಹಿಸಿತ್ತು. ಇದರ ಆಧಾರದ ಮೇಲೆ ಸರ್ಕಾರ 7 ಎಕರೆ ಜಾಗವನ್ನು ಕಾನೂನು ಶಾಲೆಗೆ ನೀಡಲು ಮುಂದಾಗಿದೆ.