ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಿಸಲು ಯತ್ನ

| Published : May 03 2024, 01:02 AM IST

ಸಾರಾಂಶ

ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಿಸಲು ಮುಂದಿನ ಸಂಪುಟ ವಿಸ್ತರಣೆಯಲ್ಲಿ ಪ್ರಾಮಾಣಿಕವಾಗಿ ಒತ್ತಾಯ ಮಾಡುತ್ತೇನೆ. ಉಳಿದ ಸ್ಥಾನಮಾನಗಳಿಗೂ ಆದ್ಯತೆ ನೀಡಲಾಗುವುದು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡಿಸಲು ಮುಂದಿನ ಸಂಪುಟ ವಿಸ್ತರಣೆಯಲ್ಲಿ ಪ್ರಾಮಾಣಿಕವಾಗಿ ಒತ್ತಾಯ ಮಾಡುತ್ತೇನೆ. ಉಳಿದ ಸ್ಥಾನಮಾನಗಳಿಗೂ ಆದ್ಯತೆ ನೀಡಲಾಗುವುದು ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

ನಗರದ ಸೋಲಾಪುರ್ ಬೈಪಾಸ್‌ ಬಳಿ ಇರುವ ಹಾಮುಲಾಲ ದೇವಸ್ಥಾನದ ಪಕ್ಕದಲ್ಲಿ ಗುರುವಾರ ನಡೆದ ಬಂಜಾರಾ ಸ್ವಾಭಿಮಾನ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಬಂಜಾರಾ ಸಮುದಾಯದ ಒಗ್ಗಟ್ಟು ನೋಡಿ ಸಂತೋಷವಾಗಿದ್ದು, ನಿಮ್ಮ ಬದುಕನ್ನು ಕಟ್ಟಿಕೊಡುವ ಕೆಲಸ ನಾವು ಮಾಡಿದ್ದೇವೆ. ನೀವು ಶ್ರಮ ಜೀವಿಗಳು, ಗಟ್ಟಿಗರು. ಬಸವಣ್ಣನವರ ಕಾಯಕ ಪರಂಪರೆಯಂತೆ ಇದ್ದೀರಿ. ನಿಮ್ಮ ಸಂಸ್ಕೃತಿ ಬಿಟ್ಟಿಲ್ಲ ಎಂದರು.

ಬಂಜಾರ ಮೀಸಲಾತಿ ಕೊಡಿಸುವಲ್ಲಿ ಇಂದಿರಾಗಾಂಧಿ, ದೇವರಾಜ ಅರಸು ಅವರ ಶ್ರಮ. ಇತ್ತೀಚೆಗೆ ತಾಂಡಾ ಅಭಿವೃದ್ಧಿ ಯೋಜನೆಗಳಿಂದ ನಿಮ್ಮ ಏಳಿಗೆಗೆ ಯತ್ನಿಸಿದ್ದೇವೆ. ಸಿದ್ದರಾಮಯ್ಯರು ಇಲ್ಲಿನ ನಿಡೋಣಿಗೆ ಬಂದಾಗ ಅಲ್ಲೇ ಸೇವಾಲಾಲರ ಜಯಂತಿ ಘೋಷಣೆ ಮಾಡಲಾಗಿತ್ತು. ಹಾಗೆಯೇ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಬದಲಾಯಿಸಿದ್ದು, ಕಾಂಗ್ರೆಸ ಸರ್ಕಾರ ಎಂದು ಹೇಳಿದರು.

ಮಾಜಿ ಜಿಪಂ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಅಂಬೇಡ್ಕರ್ ಅವರಿಂದ ನಾವು ಮೀಸಲಾತಿ ಪಡೆದು ಅನುಕೂಲವಾಗಿದೆ. ನಾವು ಸುಶಿಕ್ಷತರಾಗಿ ಬದುಕುತ್ತಿದ್ದೇವೆ. ಕರ್ನಾಟಕದಲ್ಲಿ ಅತೀ ಹೆಚ್ಚು ಬಂಜಾರಾ ಸಮುದಾಯವಿದೆ. ಇಲ್ಲಿ ಐದು ಸಾವಿರ ತಾಂಡಾಗಳಿವೆ. ಈ ಲೋಕಸಭೆ ಚುನಾವಣೆಯಲ್ಲಿ ನಾವು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕು ಎಂದರು.

ಮುಖಂಡ ಬಿ.ಬಿ.ಲಮಾಣಿ ಮಾತನಾಡಿ, ನಾವು ಲಂಬಾಣಿಗರು ಸ್ವಾಭಿಮಾನಿಗಳಿದ್ದೇವೆ. ನಮಗೆ ಅಧಿಕಾರ ಸಿಗಬೇಕಾದರೆ ನಾವು ಸಂಘಟಿತರಾಗಬೇಕು. ನಮಗೆ ಆಗಿರುವ ಅನ್ಯಾಯ ಸರಿಯಾಗಬೇಕು. ನಮಗೆ ಮಂತ್ರಿ, ನಿಗಮ ಸ್ಥಾನ, ರಾಜ್ಯಸಭೆಯಲ್ಲಿ ಆದ್ಯತೆ ಸಿಗಬೇಕು. ನಮಗೆ ಎಂ.ಬಿ.ಪಾಟೀಲರು ಬೆನ್ನೆಲುಬಾಗಿದ್ದಾರೆ. ಅವರು ನಮ್ಮ ಅಳಲಿಗೆ ಸ್ಪಂದಿಸುತ್ತಾರೆ ಎಂದು ಹೇಳಿದರು.

ಅಭ್ಯರ್ಥಿ ಪ್ರೊ.ರಾಜು ಆಲಗೂರ್ ಮಾತನಾಡಿ, ಬಂಜಾರಾ ಸಮುದಾಯದ ಜೊತೆ ಯಾವತ್ತೂ ಇರುತ್ತೇನೆ. ಬಿಜೆಪಿಯವರಂತೆ ನಾನು ನಡೆದುಕೊಳ್ಳುವುದಿಲ್ಲ. ನೀವು ದೊಡ್ಡ ಸಮುದಾಯ. ನಿಮ್ಮ ಮತಗಳು ನನಗೆ ಬಂದರೆ ನನ್ನ ಗೆಲುವನ್ನು ತಡೆಯಲು ಜಿಗಜಿಣಗಿಯವರಿಂದ ಸಾಧ್ಯವಿಲ್ಲ. ನಿಮಗೆಲ್ಲ ನಾನು ಋಣಿಯಾಗಿರುವೆ ಎಂದು ಹೇಳಿದರು.

ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಕೌಶಲ್ಯ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, ಹಿರಿಯ ಮುಖಂಡ ಡಿ.ಎಲ್. ಚವ್ಹಾಣ, ವಾಮನ್ ಚವ್ಹಾಣ, ರಾಜು ಜಾಧವ, ಮಲ್ಲಿಕಾರ್ಜುನ ನಾಯಕ, ಶ್ರೀದೇವಿ ಉತ್ಲಾಸರ, ಶಂಕರ ಚವ್ಹಾಣ, ಎಂ. ಎಸ್. ನಾಯಕ, ಡಾ.ಗಂಗಾಧರ ಸಂಬಣ್ಣಿ, ಸುರೇಶ ರಾಠೋಡ, ಶೇಖರ ನಾಯಕ, ರವಿ ಜಾಧವ, ರಾಜು ಚವ್ಹಾಣ ಮುಂತಾದವರು ಇದ್ದರು.