ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಪ್ರಯತ್ನ

| Published : Jul 15 2024, 01:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ, ಈ ವರ್ಷದ ಹಂಗಾಮಿನಲ್ಲಿ ಕಬ್ಬು ನುರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ, ಈ ವರ್ಷದ ಹಂಗಾಮಿನಲ್ಲಿ ಕಬ್ಬು ನುರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ಕಾರ್ಮಿಕರಿಗೆ ಸಚಿವರು ಭರವಸೆ ನೀಡಿದರು. ಪರಿಶೀಲನೆ ವೇಳೆ ಕಾರ್ಮಿಕರು ಸಚಿವರನ್ನು ಕಾರ್ಖಾನೆ ಉಳಿಸಿ ಎಂದು ಕೈಮುಗಿದು ಬೇಡಿಕೊಂಡರು. ಈ ಘಟನೆ ನೋಡಿದವರ ಕರಳು ಚುರ್‌ ಎನ್ನುವಂತಿತ್ತು. ಅಷ್ಟೇ ಅಲ್ಲ, ಈ ಪ್ರಸಂಗ ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯೂ ಆಗಿತ್ತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈತರು, ಕಾರ್ಖಾನೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ರೈತ ಮುಖಂಡರು ಮತ್ತು ಎಂಜಿನಿಯರಿಂಗ್ ಕಂಪನಿ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ಪಡೆದ ಸಚಿವರು, ಕಾರ್ಖಾನೆ ಪುನಾರಂಭದ ಹಲವಾರು ಮಾರ್ಗೋಪಾಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ನ್ಯೂನ್ಯತೆಗಳಿಂದ ಕಾರ್ಖಾನೆ ಸಂಕಷ್ಟಕ್ಕೆ:

ಈ ವೇಳೆ ಮಾತನಾಡಿದ ನಾನಾ ಮುಖಂಡರು, ಸಹಕಾರಿ ತತ್ವದಲ್ಲಿ ಪ್ರಾರಂಭವಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಗಲಗಲಿ ಭಾಗದ ರೈತರ ಜೀವನಾಡಿಯಾಗಿದೆ. ಕಳೆದ 30 ವರ್ಷಗಳಿಂದ ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಕೇವಲ ಜೋಳ, ಕಾಳು, ಕಡಿ, ಒಣ ಬೇಸಾಯಕ್ಕೆ ಸೀಮಿತರಾಗಿದ್ದ ಇಲ್ಲಿನ ರೈತರು ಕಾರ್ಖಾನೆ ಪ್ರಾರಂಭವಾದಾಗಿನಿಂದ ಕಬ್ಬು ಬೆಳೆಯುವ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಸುಧಾರಿಸುವಂತೆ ಮಾಡಿದೆ. ಆದರೆ, ಇತ್ತೀಚಿಗೆ ಪೈಪೋಟಿ, ಆಡಳಿತ ಮಂಡಳಿಯಲ್ಲಿ ವೃತ್ತಿಪರತೆ ಕೊರತೆ ಹಾಗೂ ಕೆಲವು ನ್ಯೂನ್ಯತೆಗಳಿಂದಾಗಿ ಕಾರ್ಖಾನೆ ಸಂಕಷ್ಟದ ಸುಳಿಗೆ ಸಿಲುಕಿದೆ. 2017 ಯೋಜನೆ ಐಜಾಕ್ ಪುಣೆ ಕಂಪನಿಗೆ ಬಾಯ್ಲರ್ ಪ್ಯಾಕೇಜ್ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಆದರೆ, ನಂತರ ಈ ಕಾಮಗಾರಿಯನ್ನು ಪುಣೆಯ ಎಸ್.ಎಸ್.ಎಂಜಿನಿಯರಿಂಗ್ ಕಂಪನಿಗೆ ನೀಡಿದ ನಂತರ 2023 ಮಾ.04 ರಂದು ಬಾಯ್ಲರ್ ಘಟಕದ ಇಎಸ್‌ಪಿ ವಿಭಾಗದಲ್ಲಿ ಸ್ಪೋಟಗೊಂಡು ಮೂರು ಜನ ಸಾವಿಗೀಡಾಗಿದ್ದರು. ಬಳಿಕ ಅದೇ ಕಂಪನಿ 2024 ಜುಲೈ 4 ರಂದು ಬಾಯ್ಲರ್ ಪ್ರಥಮ ಇಎಸ್‌ಪಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಿತ್ತು. ಆದರೆ ಮತ್ತೆ ಜುಲೈ 7ರಂದು ಇಎಸ್‌ಪಿ ಕುಸಿತವಾಗಿದೆ. ಇದರಿಂದಾಗಿ ರೈತರು ಮತ್ತು ಕಾರ್ಮಿಕರು ಕಾರ್ಖಾನೆಯ ಪುನಾರಂಭದ ಕುರಿತು ಭರವಸೆ ಕಳೆದುಕೊಂಡಿದ್ದಾರೆ. ಕಾರ್ಖಾನೆಯ ಸಾಮರ್ಥ್ಯ ವಿಸ್ತರಣ ಘಟಕ ನಿಗದಿತ ಅವಧಿಯಲ್ಲಿ ಕಾರ್ಯ ಆರಂಭಿಸದ ಕಾರಣ ಬಹುದೊಡ್ಡ ತೊಂದರೆಯಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಾರ್ಖಾನೆ ಪುನಾರಂಭಿಸುವ ಕುರಿತು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಈವಾರ ಎಸ್.ಎಸ್. ಎಂಜಿನಿಯರ್ಸ್‌ನ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಈಗಾಗಲೇ ಸಚಿವರಾದ ಎಚ್.ಕೆ.ಪಾಟೀಲ, ಆರ್.ಬಿ.ತಿಮ್ಮಾಪುರ, ಶಾಸಕ ಜೆ.ಟಿ.ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ ಮತ್ತಿತರ ಮುಖಂಡರೊಂದಿಗೆ ಸಿಎಂ ಭೇಟಿಯಾಗಿದೆ. ಕಾರ್ಖಾನೆಗೆ ನೆರವಾಗಲು ಮೃದುಸಾಲ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಕಾರ್ಖಾನೆ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಧೈರ್ಯ ತುಂಬಿದರು.ಅಲ್ಲದೇ, ಈ ಸಭೆಯಲ್ಲಿಯೇ ಪುಣೆಯ ಎಸ್.ಎಸ್.ಎಂಜಿನಿಯರ್ಸ್ ಕಂಪನಿಯ ಮಾಲಿಕ ಎಸ್.ಬಿ.ಬರ್ಡ್ ಅವರ ಜೊತೆ ಮೊಬೈಲಿನಲ್ಲಿ ಮಾತನಾಡಿದ ಸಚಿವರು, ಮುಂದಿನ ಹಂಗಾಮಿನಲ್ಲಿ ಕಬ್ಬು ನುರಿಸಲು ಇರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.ಈ ವೇಳೆ ಬೀಳಗಿ ಶಾಸಕ ಜೆ.ಟಿ.ಪಾಟೀಲ, ಕಾರ್ಖಾನೆ ಉಪಾಧ್ಯಕ್ಷ ಎ.ಪಿ.ಲೆಂಕೆಣ್ಣವರ, ನಿರ್ದೇಶಕರಾದ ಎ.ಬಿ.ದೇಸಾಯಿ, ಬಿ.ಡಿ.ಪಾಟೀಲ, ಎಸ್.ಟಿ.ಪಾಟೀಲ ಲಿಂಗನೂರ, ಗುರಲಿಂಗಪ್ಪ ಅಂಗಡಿ, ರಮೇಶ ಜಕರಡ್ಡಿ, ಮುಖಂಡರಾದ ಕೆ.ಎಚ್.ಮುಂಬಾರೆಡ್ಡಿ, ಬಸವರಾಜ ದೇಸಾಯಿ, ಜಿ.ಡಿ.ದೇಸಾಯಿ, ಕಾಳಗಿ ಶೆಟ್ಟರ, ಸುತ್ತಮುತ್ತ ಗ್ರಾಮಸ್ಥರು. ಎಸ್.ಎಸ್.ಎಂಜಿನಿಯರ್ ಯೋಜನೆ ಉಪಾಧ್ಯಕ್ಷ ಅನಿರುದ್ಧ ಕುಲಕರ್ಣಿ, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಜಯರಾಮ ಆಚಾರ್ಯ, ಪ್ರಭಾರ ವ್ಯವಸ್ಥಾಪಕ ಎಂ.ಬಿ.ಶೆಟ್ಟಿ, ಮುಖ್ಯ ಲೆಕ್ಕಾಧಿಕಾಧಿಕಾರಿ ಎಸ್.ಬಿ.ಗೋಟಖಿಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.------------------------------------

ಕೋಟ್‌

ಕಾರ್ಖಾನೆ ಪುನಾರಂಭಿಸುವ ಕುರಿತು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಈವಾರ ಎಸ್.ಎಸ್. ಎಂಜಿನಿಯರ್ಸ್‌ನ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಚರ್ಚಿಸಲಾಗುವುದು. ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾರ್ಖಾನೆಗೆ ನೆರವಾಗಲು ಮೃದುಸಾಲ ನೀಡುವಂತೆ ಮನವಿ ಸಲ್ಲಿಸಲಾಗಿದೆ.

ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವರು.