ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಸಾರ್ವಜನಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್.ಯು.ಸಿ.ಐ) ಪದಾಧಿಕಾರಿಗಳು ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನಾ ಸಪ್ತಾಹ ನಡೆಸಿದರು.ಬಿಹಾರದಲ್ಲಿ ನವೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದರ ಪೂರ್ವಭಾವಿ ತಯಾರಿಯಾಗಿ ಚುನಾವಣಾ ಆಯೋಗವು ಎಸ್‌ಐಆರ್ ಎಂಬ ಹೆಸರಿನ ಮತಪಟ್ಟಿ ಪರಿಷ್ಕರಣೆಯ ಕಾರ್ಯಕ್ಕೆ ಕೈಹಾಕಿದೆ. ಈ ಹಿಂದೆ ಆಯೋಗ ರಾಜ್ಯದಲ್ಲಿ 7.89 ಕೋಟಿ ಮತದಾರರು ಇದ್ದಾರೆ ಎಂದು ಹೇಳಿತ್ತು. ಈಗ ಮೊದಲ ಕರಡು ಪರಿಷ್ಕೃತ ಪಟ್ಟಿಯಲ್ಲಿ 65 ಲಕ್ಷ ಹೆಸರುಗಳನ್ನು ತೆಗೆದು 7.24 ಕೋಟಿ ಎಂದು ತೋರಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೆ ಹೋದರೆ ಅಂತಹವರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ದೂರಿದರು.
ಮೃತರು, ವಲಸೆ ಹೋದವರು, ಪೌರತ್ವದ ದಾಖಲೆ ನೀಡಲಾಗದವರನ್ನು ಪಟ್ಟಿಯಲ್ಲಿ ಸೇರಿಸಿಲ್ಲ ಎಂಬುದು ಚುನಾವಣಾ ಆಯೋಗದ ಸಮರ್ಥನೆ. ಪಟ್ಟಿಯಲ್ಲಿ ಹೆಸರಿಲ್ಲದೆ ಹೋದರೆ, ಮತದಾನದ ಹಕ್ಕು ಮಾತ್ರ ಹೋಗುವುದಿಲ್ಲ, ಅದು ವಾಸ್ತವದಲ್ಲಿ ಪೌರತ್ವವನ್ನೇ ನಿರಾಕರಿಸಿದಂತಾಗುತ್ತದೆ. ಮತಪಟ್ಟಿಯಲ್ಲಿ ಮೃತರು ಎಂದು ಘೋಷಿತರಾದವರೇ ಸ್ವತಃ ಆಯೋಗದ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ ಘಟನೆಗಳು ಈ ಪರಿಷ್ಕರಣಾ ಕಾರ್ಯದ ಪೊಳ್ಳುತನ ಬಯಲು ಮಾಡಿದೆ ಎಂದು ಅವರು ಕಿಡಿ ಕಾರಿದರು.ಪೌರತ್ನದ ಮಾನದಂಡ ಗುರುತಿಸುವುದು ಚುನಾವಣಾ ಆಯೋಗದ ಮುಖ್ಯ ಕರ್ತವ್ಯ. ಬದಲಾಗಿ, ಈ ಹಿಂದೆ, ತಾನೇ ಸೂಚಿಸಿರುವ ಗುರುತಿನ ದಾಖಲೆಗಳ ಮೂಲಕ ನಿಖರ ಮತದಾರರ ಪಟ್ಟಿ ತಯಾರಿಸಿ ಅದರ ಆಧಾರದ ಮೇಲೆ ಮುಕ್ತ, ನ್ಯಾಯನಮ್ಮತ ಚುನಾವಣೆ ನಡೆಸುವುದು ಎಂಬುದನ್ನು ಗಮನಿಸಬೇಕು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ, ಎಸ್‌ಐಆರ್ ಮೂಲಕ ಆಯೋಗ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಇದರಿಂದ ಉಂಟಾಗುವ ಪರಿಣಾಮ ವಿನಾಶಕಾರಿಯಾಗಿವೆ. ಇಂದು ಕೋಟ್ಯಾಂತರ ಕೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಸಾಮಾನ್ಯ. ದುಡಿಯುವವರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ದಾಖಲೆಗಳನ್ನು ಹಿಡಿದುಕೊಂಡು ದಿನಗಟ್ಟಲೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಆಳುವ ಬಂಡವಾಳಶಾಹಿ ವರ್ಗ ಜನರ ನಡುವೆ ಒಡಕನ್ನುಂಟು ಮಾಡಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಅದಕ್ಕಾಗಿಯೇ, ಈ ಪ್ರಸಕ್ತ ಸಮಯದಲ್ಲಿ ತಮ್ಮ ಗುರುತು, ಪೌರತ್ನವನ್ನು ಕಳೆದುಕೊಳ್ಳುವ ಭೀತಿಯನ್ನು ಅದು ನಾಗರಿಕರಲ್ಲಿ ಬಿತ್ತಿದೆ. ತನ್ನ ಈ ಹುನ್ನಾರದಲ್ಲಿ ಅದು ಯಶಸ್ವಿಯಾದರೆ ಬಂಡವಾಳಶಾಹಿ ಶೋಷಣೆ ಅನಿರ್ಬಂಧಿತವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ದೂರಿದರು.ಈ ಷಡ್ಯಂತ್ರ ಪ್ರತಿರೋಧಿಸಲು ಪ್ರಜ್ಞಾಪೂರ್ವಕ ಸಂಘಟಿತ ಹೋರಾಟದ ಅಗತ್ಯವಿದೆ. ಆಳುವ ಪಕ್ಷಗಳ ಜನವಿರೋಧಿ ಸ್ವರೂಪವನ್ನು ನಾವು ಗುರುತಿಸಬೇಕು. ಈ ಅರಿವನ್ನು ಮೂಡಿಸುವುದು ಮತ್ತು ವಿಶಾಲ ಜನ ಚಳವಳಿ ಮತ್ತು ಜನ ಸಮಿತಿಗಳನ್ನು ರೂಪಿಸಬೇಕು. ಮತದಾರರ ಹಕ್ಕನ್ನು ಕಸಿದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಸ್. ಸಂಧ್ಯಾ, ಜಿ.ಎನ್. ಸೀಮಾ, ಎಚ್.ಎನ್. ಹರೀಶ್, ಟಿ.ಆರ್. ಸುನಿಲ್, ಸುಮಾ, ಬಸವರಾಜ್, ಚಂದ್ರಕಲಾ, ಆಸಿಯಾ ಬೇಗಂ, ನೀತುಶ್ರೀ, ರಣಜಿತ್ ಧೂಪದ್, ಪುಷ್ಪಾ, ಪೂರ್ಣಿಮಾ ನಿತಿನ್, ಸ್ವಾತಿ, ಹೇಮಾಲತಾ ಮೊದಲಾವರು ಇದ್ದರು.