ಸಾರಾಂಶ
ಮೊಗಳ್ಳಿ ಚಳವಳಿಯಿಂದ ದೂರವನ್ನು ಕಾಪಾಡಿಕೊಂಡು ಬರಹವನ್ನು ಹುಚ್ಚನಂತೆ ಮೆಚ್ಚಿಕೊಂಡಿದ್ದರು
ಕನ್ನಡಪ್ರಭ ವಾರ್ತೆ ಮೈಸೂರು
ಲೇಖಕ ಮೊಗಳ್ಳಿ ಗಣೇಶ್ ಅವರು ಜಗತ್ತಿನ ಶ್ರೇಷ್ಠ ಕಥೆಗಾರ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ.ಎಂ.ಎಸ್. ಶೇಖರ್ ತಿಳಿಸಿದರು.ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ಕರ್ನಾಟಕ ಜಾನಪದ ಸಂಶೋಧಕರ ಸಂಘ ಸಹಯೋಗದಲ್ಲಿ ಮಾನಸಗಂಗೋತ್ರಿ ಬುದ್ಧವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಮೊಗಳ್ಳಿ ಗಣೇಶ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೊಗಳ್ಳಿ ಚಳವಳಿಯಿಂದ ದೂರವನ್ನು ಕಾಪಾಡಿಕೊಂಡು ಬರಹವನ್ನು ಹುಚ್ಚನಂತೆ ಮೆಚ್ಚಿಕೊಂಡಿದ್ದರು. ಅಸಾಧಾರಣ ಜಿನೀಯಸ್. ಅನನ್ಯ ಕಥೆಗಾರ. ಬುಗುರಿ ಜಗತ್ತಿನ ಶ್ರೇಷ್ಟ ಕತೆ. ಪಿ. ಲಂಕೇಶರ ತೀವ್ರ ಪ್ರಭಾವಳಿ ಇತ್ತು. ಹೀಗಾಗಿಯೇ ಕನ್ನಡದ ತಕಾರಾರು ಕಡೆ ಪಯಣಿಸಿದರು. ಯಾರನ್ನಾದರೂ ಟೀಕಿಸುವ ಎದೆಗಾರಿಕೆ ಲಂಕೇಶ್ ಗರಡಿಯಿಂದ ಪಡೆದುಕೊಂಡಿದ್ದರು ಎಂದರು. ದಕ್ಕಬೇಕಾದ ಪ್ರಶಸ್ತಿಗಳು, ಸ್ಥಾನಮಾನಗಳು ಸಿಗದಿದ್ದಾಗ ಕುಪಿತನಾಗುತ್ತಿದ್ದ. ವಿಮರ್ಶಕರು ಕಡೆಗಣಿಸಿದ್ದರ ಬಗ್ಗೆ ಸಿಟ್ಟಿತ್ತು. ಆತ ಜಗತ್ತಿನ ಕಥೆಗಾರನಾದರೂ ಜಾತಿ ವ್ಯವಸ್ಥೆ, ಸಾಮಾಜಿಕ, ಧಾರ್ಮಿಕ ಸಂಗತಿಗಳು ತಡೆಯಾಗಿದ್ದವು. ಆತನ ಎದೆಗೂಡಿನಲ್ಲಿ ನಿಗಿನಿಗಿ ಕೆಂಡದ ವಿಚಾರಗಳಿದ್ದವು ಎಂದು ಅವರು ಹೇಳಿದರು.ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು ಮಾತನಾಡಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮೊಗಳ್ಳಿ ಗಣೇಶ್ ನನ್ನ ಗುರುಗಳಾಗಿದ್ದರು. 2ನೇ ವರ್ಷ ಓದುವಾಗ ಜನಪದ ಗದ್ಯಕಥನವನ್ನು ಬೋಧಿಸುತ್ತಿದ್ದರು. ಮೈಸೂರು ವಿವಿಯಲ್ಲಿ ಕೆಲಸ ಮಾಡಬೇಕೆಂಬ ಅವರ ಆಸೆ ಈಡೇರಲಿಲ್ಲ ಎಂದರು.ಅತ್ಯುತ್ತಮ ಕತೆಗಾರ, ವಿದ್ವಾಂಸ ಎನಿಸಿಕೊಂಡರು. ನಾನಾ ಕಾರಣಗಳಿಂದ ಕೆಲಸ ಸಿಗದಿದ್ದಕ್ಕೆ ಸಿಟ್ಟಿತ್ತು, ಹೃದಯವಂತಿಕೆಯೂ ಇತ್ತು. ಮಾನಸಗಂಗೋತ್ರಿಯಲ್ಲಿ ಪಾಠ ಮಾಡುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದರು. ಈಚೆಗಿನ ವರ್ಷಗಳಲ್ಲಿ 2 ಬಾರಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದರು ಎಂದು ಅವರು ಸ್ಮರಿಸಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ವಿಜಯಲಕ್ಷ್ಮೀ ಕರಿಕಲ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಜಾನಪದ ಸಂಶೋಧಕರ ಸಂಘದ ಅಧ್ಯಕ್ಷ ಕಲ್ಲಹಳ್ಳಿ ಕುಮಾರ್, ಡಾ. ಮಂಜು ಮೊದಲಾದವರು ಇದ್ದರು.