ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ನಗರ ಯೋಜನಾ ಪ್ರಾಧಿಕಾರಕ್ಕೆ ಸ್ಥಳೀಯ ಸಂಸ್ಥೆ (ನಗರಸಭೆ)ಯ ಪ್ರತಿನಿಧಿಯಾಗಿ ನಾಮನಿರ್ದೇಶನಗೊಂಡಿರುವ ತಮಗೆ ಸಭೆಗೆ ಆಹ್ವಾನಿಸದೇ ಪ್ರಾಧಿಕಾರ ಅನ್ಯಾಯವೆಸಗಿದೆ ಎಂದು ಎಂದು ಆರೋಪಿಸಿ ನಗರಸಭಾ ಸದಸ್ಯ ಹಾಗೂ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಎಚ್.ಪಿ.ಸತೀಶ್ ಕುಮಾರ್ ಆಹೋರಾತ್ರಿ ಪ್ರತಿಭಟಿಸಿದರು.ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯ ಕಾರ್ಯದರ್ಶಿ ನೀಡಿದ ಭರವಸೆಯೊಂದಿಗೆ ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ಹಿಂಪಡೆದರು.
ನಗರ ಯೋಜನಾ ಪ್ರಾಧಿಕಾರ ಕಚೇರಿ ಮುಂಭಾಗ ಗುರುವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ನಗರಸಭೆಯ ಕೌನ್ಸಿಲ್ ಸಭೆಯಲ್ಲಿ ಬಹುಮತದಿಂದ ಆಯ್ಕೆಗೊಂಡಿರುವ ನನ್ನನ್ನು ಪರಿಗಣಿಸದೇ ಗುರುವಾರ ಸಭೆ ಆಯೋಜಿಸಿದ್ದಾರೆ. ನನಗೆ ಅಪಮಾನ ಮಾಡುವ ಮೂಲಕ ನನ್ನ ಅಧಿಕಾರವನ್ನು ಮೊಟುಕುಗೊಳಿಸಲು ಹುಣಸೂರು ನಗರ ಯೋಜನಾ ಪ್ರಾಧಿಕಾರ ಮುಂದಾಗಿರುವುದು ಖಂಡನೀಯವೆಂದರು.2024ರ ಅಕ್ಟೋಬರ್ 10ರಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯನಾಗಿ ನಾನು ಮತದಾನದ ಮೂಲಕ ಬಹುಮತದಿಂದ ಆಯ್ಕೆಯಾಗಿದ್ದೆ. ಆದರೆ ನನಗಿಂತ ಹಿಂದೆ ಸದಸ್ಯರಾಗಿ ನೇಮಕಗೊಂಡಿದ್ದ ಮತ್ತೊಬ್ಬ ನಗರಸಭಾ ಸದಸ್ಯರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನನ್ನ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ನಗರ ಯೋಜನಾ ಪ್ರಾಧಿಕಾರ ಕೂಡ ನಾಮ ನಿರ್ದೇಶಿತ ಸದಸ್ಯರನ್ನು ಬದಲಾಯಿಸುವ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಸೂಕ್ತ ನಿರ್ದೇಶನ ನೀಡಬೇಕೆಂದು ನಗರ ಯೋಜನಾ ಪ್ರಾಧಿಕಾರವು ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಮುಖೇನ ಮನವಿ ಮಾಡಿತ್ತು ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2025ರ ಜ. 28ರಂದು ಆದೇಶ ನೀಡಿ ನಗರ ಯೋಜನಾ ಪ್ರಾಧಿಕಾರದ ಸದಸ್ಯರಾಗಿ ತಾವು ನೇಮಕಗೊಂಡಿರುವುದು ಸರಿಯಾಗಿದೆ ಎಂದು ತಿಳಿಸಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯಡಿ ಅರ್ಥೈಸಿಕೊಂಡು ಕ್ರಮವಹಿಸಬೇಕು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರು ರಾಜ್ಯ ಸರ್ಕಾರ ಇಚ್ಛಿಸಿದ ಅವಧಿಯವರೆಗೆ ಮಾತ್ರ ಅಧಿಕಾರದಲ್ಲಿ ಮುಂದುವರೆಯಬಹುದು. ಆದರೆ ಸ್ಥಳೀಯ ಸಂಸ್ಥೆಯಿಂದ ನಾಮನಿರ್ದೇಶಿತ ಸದಸ್ಯ ತನ್ನ ಸ್ಥಳೀಯ ಸಂಸ್ಥೆಯ ಸದಸ್ಯತ್ವವಿರುವವರೆಗೂ ಮುಂದುವರೆಯಲು ಅವಕಾಶವಿದೆ. ಹಾಗಾಗಿ ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅರ್ಥೈಸಿಕೊಂಡು ಅನಾವಶ್ಯಕ ಪತ್ರ ವ್ಯವಹಾರ ನಡೆಸದಂತೆ ನಗರಾಭಿವೃದ್ಧಿ ಪ್ರಾಧಿಕರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಮಂತ್ರಾಲಯದ ಆಯುಕ್ತರು ಹುಣಸೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಪತ್ರಮುಖೇನ ತಿಳಿಸಿದ್ದಾರೆ. ಹೀಗಿದ್ದರೂ ಸಹ ತಮಗೆ ಗುರುವಾರ ಆಯೋಜನೆಗೊಂಡಿರುವ ಸಭೆಗೆ ಆಹ್ವಾನ ನೀಡಿಲ್ಲ. ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಅಮರನಾಥ್, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಕುರಿತು ನಮ್ಮದೇನೂ ಅಭ್ಯಂತರವಿರಲಿಲ್ಲ. ಆದರೆ ಗೊಂದಲ ನಿವಾರಣೆಗಾಗಿ ಜಿಲ್ಲಾಧಿಕಾರಿಗಳಿಂದ ಸ್ಥಿರೀಕರಣದ ಅಗತ್ಯವಿದ್ದು, ಇಬ್ಬರೂ ಒಂದಾಗಿ ಪ್ರಯತ್ನಿಸಿ ಸ್ಥಿರೀಕರಣ ಪತ್ರ ತಂದು ಮುಂದಿನ ಸಭೆಯಲ್ಲಿ ಸದಸ್ಯರಾಗಿ ಭಾಗವಹಿಸುವಂತೆ ಮನವೊಲಿಸಲಾಗಿದೆ ಎಂದರು.