ಸಾರಾಂಶ
ಬೆಂಗಳೂರು : ನಗರದಲ್ಲಿ ಶುಕ್ರವಾರದಿಂದ ಆಟೋ ಪ್ರಯಾಣ ದರ ದುಬಾರಿಯಾಗಲಿದ್ದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಅವರ ಆದೇಶದಂತೆ ಮೊದಲ 2 ಕಿಮೀ (ಕನಿಷ್ಠ ದರ) ಪ್ರಯಾಣಕ್ಕೆ 36 ರು. ಪಾವತಿಸಬೇಕಿದೆ.
ಬಸ್, ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳದ ನಂತರ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರು ಮತ್ತು ಸಂಘಟನೆಗಳು ಆಗ್ರಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಕಳೆದ ಜು.14ರಂದು ಆಟೋ ಪ್ರಯಾಣ ದರ ಹೆಚ್ಚಿಸಿ ಆದೇಶಿದ್ದರು. ಈ ಆದೇಶವು ಶುಕ್ರವಾರದಿಂದ ಜಾರಿಗೆ ಬರಲಿದೆ.
ಇದರ ಪ್ರಕಾರ ಮೊದಲ 2 ಕಿಮೀ ಪ್ರಯಾಣದ ಮೊತ್ತವು 30 ರು.ನಿಂದ 36 ರು.ಗೆ ಹೆಚ್ಚಳವಾಗಲಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರು.ನಿಂದ 18ರು.ಗೆ ಹೆಚ್ಚಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಇದೀಗ ಈ ಪರಿಷ್ಕೃತ ದರವು ಶುಕ್ರವಾರದಿಂದ ಅನ್ವಯವಾಗಲಿದ್ದು, ನಗರದಲ್ಲಿ ಆಟೋ ಪ್ರಯಾಣಕ್ಕೆ ಹೆಚ್ಚಳದ ದರ ಪಾವತಿಸಬೇಕಿದೆ. ಅಲ್ಲದೆ, ಈ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿ ಆಟೋಗಳಲ್ಲಿಯೂ ಪ್ರದರ್ಶಿಸಬೇಕು ಹಾಗೂ ಅಕ್ಟೋಬರ್ 10ರೊಳಗೆ (90 ದಿನ) ಮೀಟರ್ ಅನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.