ಸಾರಾಂಶ
ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅವನಿ ಎಂ ಗೌಡಗೆ ಶಿಕ್ಷಣ ಇಲಾಖೆಯಿಂದ ಗೌರವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎಸ್ಎಸ್ಎಲ್ಸಿಯಲ್ಲಿ 625 ಕ್ಕೆ 615 ಅಂಕ ಪಡೆದು ತಾಲೂಕಿನ ಪ್ರಥಮ ಸ್ಥಾನ ಪಡೆದ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಅವನಿ ಎಂ.ಗೌಡ ಅವರು 1ನೇ ತರಗತಿಯಿಂದಲೂ ಸರ್ಕಾರಿ ಶಾಲೆಯಲ್ಲೇ ಓದುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರ ಮುತ್ತಿನಕೊಪ್ಪದ ಅವನಿ ಎಂ. ಗೌಡ ಅವರ ಮನೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ತಾಲೂಕು ಪ್ರೌಡ ಶಾಲಾ ಶಿಕ್ಷಕರ ಸಂಘದ ಕಾರ್ಯಕ್ರಮದಲ್ಲಿ ಅವನಿಗೆ ಸಿಹಿ ತಿನ್ನಿಸಿ ನಗದು ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು. ಅವನಿ ಗೌಡ ಅವರು 1 ನೇ ತರಗತಿಯಿಂದ ಎಸ್ಎಸ್‌ಎಲ್ ಸಿವರೆಗೆ ಮುತ್ತಿನಕೊಪ್ಪ ಸರ್ಕಾರಿ ಶಾಲೆಯಲ್ಲೇ ಓದಿದ್ದಾಳೆ. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ 8 ನೇ ತರಗತಿಯಲ್ಲಿ ಇದ್ದಾಗಲೇ ಪ್ರತಿಭಾ ಕಾರಂಜಿ ಕ್ವಿಜ್ ಸ್ಪರ್ಧೆ, ಮತದಾರರ ಕ್ವಿಜ್ ನಲ್ಲಿ ರಾಜ್ಯ ಮಟ್ಟದವರೆಗೂ ಹೋಗಿದ್ದಾಳೆ.ಅಲ್ಲದೆ ಸಿರಿಗನ್ನಡ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರಾಂಕ್ ಪಡೆದಿದ್ದಾಳೆ. ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆಯಲಿ ಎಂದು ಅಭಿನಂದಿಸುತ್ತಿದ್ದೇನೆ ಎಂದರು.
ಎಸ್‌ಎಸ್‌ಎಲ್‌ಸಿ ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅವನಿ ಅವರ ತಂದೆ ಮನೋಹರ್ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾಗಿ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಮಾಡಿಸಿ ಕೊಟ್ಟಿದ್ದಾರೆ. ಮನೋಹರ್ ಅವರು ಖಾಸಗೀ ಶಾಲೆಯಲ್ಲಿ ಮಗಳನ್ನು ಸೇರಿಸುವ ಅವಕಾಶ ಇದ್ದರೂ ತಮ್ಮ ಮಗಳಿಗೆ ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಮುತ್ತಿನಕೊಪ್ಪ ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಕೊಡಿಸಿದ್ದಾರೆ. ಸರ್ಕಾರಿ ಶಾಲೆಗಳು ಮಾದರಿ ಶಾಲೆಯಾಗಿರಬೇಕು ಎಂಬ ಉದ್ದೇಶದಿಂದ ಹೋರಾಟ ಮಾಡಿ ಸರ್ಕಾರಿ ಸೌಲಭ್ಯ ಪಡೆದಿದ್ದಾರೆ. ಜೊತೆಗೆ ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಪಡಿಸಿದ್ದಾರೆ ಎಂದರು.ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ನಮ್ಮ ತಾಲೂಕು 3 ನೇ ಸ್ಥಾನದಲ್ಲಿ ಬಂದಿದ್ದೇವೆ. ಗುಣಾತ್ಮಕ ಫಲಿತಾಂಶ ಪಡೆಯಬೇಕು ಎಂದು ಆಶಯ ಇಟ್ಟಿಕೊಂಡಿದ್ದೇವೆ. ಮುಂದಿನ ವರ್ಷದಲ್ಲಿ 2 ನೇ ಸ್ಥಾನ ಪಡೆಯಬೇಕು ಎಂಬ ಗುರಿ ಹೊಂದಿದ್ದೇವೆ. ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅವನಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದು ಹಲವಾರು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಹೋಗಿದ್ದಾಳೆ ಎಂದರು.
ಈ ಸಂದರ್ಭದಲ್ಲಿ ಅವನಿ ಎಂ ಗೌಡ ಅವರ ತಂದೆ ಮನೋಹರ್, ತಾಯಿ ಸಂಜನಾ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ,ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗಂಗಾಧರ್, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಶಶಿಧರ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಮುಖಂಡ ವಿಜಯಕೃಷ್ಣ, ತಾಲೂಕು ಪ್ರೌಢ ಶಾಲಾ ಶಿ. ಸಂಘದ ಪದಾಧಿಕಾರಿ ವಿಜಯಕುಮಾರ್, ವಿಜು, ವಾಸು, ಕಿರಣ್ ಇದ್ದರು.