ಚಿಂಚೋಳಿ ಮೀಸಲು ಕ್ಷೇತ್ರಕ್ಕೆ ಮಲತಾಯಿ ಧೋರಣೆ: ಡಾ. ಅವಿನಾಶ್‌ ಜಾಧವ್‌

| Published : Aug 17 2024, 12:47 AM IST

ಚಿಂಚೋಳಿ ಮೀಸಲು ಕ್ಷೇತ್ರಕ್ಕೆ ಮಲತಾಯಿ ಧೋರಣೆ: ಡಾ. ಅವಿನಾಶ್‌ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಎಲ್ಲ ಮತಕ್ಷೇತ್ರಗಳಿಗೆ ಸರಿ ಸಮಾನವಾಗಿ ನೋಡದೆ, ಕೇವಲ ಕಾಂಗ್ರೆಸ್‌ ಶಾಸಕರು ಹೊಂದಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಡಿಸಿ ಚಿಂಚೋಳಿ ಮತ ಕ್ಷೇತ್ರಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಡಾ. ಅವಿನಾಶ್‌ ಜಾಧವ್‌ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಮೀಸಲು ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಜಿಲ್ಲೆಯ ಎಲ್ಲ ಮತಕ್ಷೇತ್ರಗಳಿಗೆ ಸರಿ ಸಮಾನವಾಗಿ ನೋಡದೆ, ಕೇವಲ ಕಾಂಗ್ರೆಸ್‌ ಶಾಸಕರು ಹೊಂದಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಕೊಡಿಸಿ ಚಿಂಚೋಳಿ ಮತ ಕ್ಷೇತ್ರಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಡಾ.ಅವಿನಾಶ ಜಾಧವ್ ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಚಿಂಚೋಳಿ ಮೀಸಲು ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರೂ ಸಹಿತ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಡಿಸಿದರು.

ಅನುದಾನ ನೀಡಿಲ್ಲವೆಂದು ಆಕ್ರೋಶ: ಹಿಂದೆ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಯಾವುದೇ ಪಕ್ಷಪಾತ ನಡೆಸಿಲ್ಲ. ಚಿತ್ತಾಪೂರ ಮತಕ್ಷೇತ್ರಕ್ಕೆ ಕೋಟ್ಯಾಂತರ ರು. ಅನುದಾನ ನೀಡಲಾಗಿದೆ. ಆದರೆ 2023ರಿಂದ ಚಿಂಚೋಳಿ ಮತಕ್ಷೇತ್ರದಲ್ಲಿ ಎಸ್‌ಸಿಪಿ, ಟಿಎಸ್‌ಪಿ, ನೀರಾವರಿ ಯೋಜನೆ, ಶಿಕ್ಷಣ, ರಸ್ತೆ ಅಭಿವೃದ್ಧಿಗೆ, ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಸೇರಿ ಸಣ್ಣ ನೀರಾವರಿ, ಅರಣ್ಯ ಇಲಾಖೆಗಳಿಗೆ ಅನುದಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಕ್ಷೇತ್ರಗಳತ್ತ ಗಮನಹರಿಸಬೇಕು. ಆದರೆ ಆಳಂದ, ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ ಕ್ಷೇತ್ರಗಳಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಸರಿಯಲ್ಲ. ಬಿಜೆಪಿ ಸರಕಾರದಲ್ಲಿ ಚಿತ್ತಾಪೂರ ಮತಕ್ಷೇತ್ರಕ್ಕೆ ಅನುದಾನ ಸಮಾನವಾಗಿ ನೀಡಲಾಗಿದೆ ಎಂಬುದು ಅರಿತುಕೊಳ್ಳಬೇಕು. ಚಿಂಚೋಳಿ ಮತಕ್ಷೇತ್ರಕ್ಕೆ ಕೆಕೆಆರ್‌ಡಿಬಿ ವತಿಯಿಂದ ಅನುದಾನ ನೀಡಲಾಗಿದೆ. ಶಾಸಕರ ಅನುದಾನ ಸಹ ಕೊಟ್ಟಿಲ್ಲ. ನಾನು ರಾಜಕೀಯ ಮಾಡಲು ಬಂದಿಲ್ಲ ಚಿಂಚೋಳಿ ಕ್ಷೇತ್ರ ಅಭಿವೃದ್ಧಿ ಮಾಡಲು ಬಂದಿದ್ದೇನೆ ಎಂದು ಹೇಳಿದರು.

ಚಿಂಚೋಳಿ-ಕಾಳಗಿ ತಾಲೂಕುಗಳಲ್ಲಿ ಅಕ್ರಮ ಉಸುಕಿನ ದಂಧೆ, ಮಟ್ಕಾ, ಕಳ್ಳತನ ಹೆಚ್ಚಾಗಿದೆ. ಕಾಂಗ್ರೆಸ್‌ ಮುಖಂಡರು 6 ತಿಂಗಳಿಗೊಮ್ಮೆ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆ ದಂಧೆ ಕಾಂಗ್ರೆಸನವರು ನಡೆಸುತ್ತಿದ್ದಾರೆ. ಚಿಂಚೋಳಿಗೆ ಅಧಿಕಾರಿಗಳ ವರ್ಗಾವಣೆ ಕುರಿತು ನಮ್ಮ ಗಮನಕ್ಕೆ ತರುತ್ತಿಲ್ಲ. ಆದ್ದರಿಂದ ಕ್ಷೇತ್ರಕ್ಕೆ ತೋರುತ್ತಿರುವ ಮಲತಾಯಿ ಧೋರಣೆ ಕುರಿತು ಹೋರಾಟ ನಡೆಸಲು ನಿರ್ಧರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಿಂಚೋಳಿಗೆ ಅನುದಾನ ಕೊಡಿಸಬೇಕು ಎಂದು ಶಾಸಕ ಅವಿನಾಶ ಜಾಧವ್ ಅಗ್ರಹಿಸಿದರು.

ಈ ವೇಳೆ ಬಿಜೆಪಿ ಮುಖಂಡರಾದ ಸಂತೋಷ ಗಡಂತಿ, ಗೋಪಾಲರಾವ ಕಟ್ಟಿಮನಿ, ಶ್ರೀಮಂತ ಕಟ್ಟಿಮನಿ, ಕೆ.ಎಂ,ಬಾರಿ, ವಿಜಯಕುಮಾರ ರಾಠೋಡ, ಅಶೋಕ ಚವ್ಹಾಣ, ರಾಜೂ ಪವಾರ, ಕಾಶಿನಾಥ್‌ ನಾಟೀಕಾರ ಸೇರಿ ಇತರರಿದ್ದರು.