ಅವ್ವನ ಹೆಸರಿನಲ್ಲಿ ಪ್ರಶಸ್ತಿ ವಿತರಣೆ ರಾಜ್ಯಕ್ಕೆ ಮಾದರಿ- 12 ಜನರಿಗೆ ಪ್ರದಾನ : ಡಿಸಿಎಂ ಡಿ.ಕೆ. ಶಿವಕುಮಾರ

| Published : Dec 16 2024, 12:45 AM IST / Updated: Dec 16 2024, 12:59 PM IST

ಅವ್ವನ ಹೆಸರಿನಲ್ಲಿ ಪ್ರಶಸ್ತಿ ವಿತರಣೆ ರಾಜ್ಯಕ್ಕೆ ಮಾದರಿ- 12 ಜನರಿಗೆ ಪ್ರದಾನ : ಡಿಸಿಎಂ ಡಿ.ಕೆ. ಶಿವಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಾದ್ಯಂತ ಸಾಧಕರನ್ನು ಗುರುತಿಸಿ "ಅವ್ವ " ಪ್ರಶಸ್ತಿ ನೀಡುತ್ತಿದ್ದು, ಪುರಸ್ಕೃತರ ಮುಂದಿನ ಬದುಕು ಮತ್ತಷ್ಟು ಜವಾಬ್ದಾರಿಯಿಂದ ಕೂಡಿರಬೇಕು. ನಮ್ಮಲ್ಲಿರುವ ಆದರ್ಶ, ಮೌಲ್ಯ, ತತ್ವಗಳನ್ನು ಸಮಾಜ ಸೂಕ್ಷ್ಮವಾಗಿ ನೋಡುತ್ತದೆ. ಬದುಕಿನ ಮೂಲಮಂತ್ರ ಶಿಕ್ಷಣ, ಸಂಸ್ಕಾರವಾಗಿದೆ.

ಹುಬ್ಬಳ್ಳಿ:  ಸಭಾಪತಿ ಬಸವರಾಜ ಹೊರಟ್ಟಿ ಅವರು ಅವ್ವನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಇದು ಮನುಷ್ಯತ್ವದ ಕಾರ್ಯಕ್ರಮ. ಎಷ್ಟೇ ದೊಡ್ಡ ಸ್ಥಾನಕ್ಕೇರಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ. "ಅವ್ವ " ನಮ್ಮೆಲ್ಲರ ಸಾಧನೆ, ಯಶಸ್ಸಿಗೆ ಸ್ಫೂರ್ತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಗುಜರಾತ ಭವನದಲ್ಲಿ ಭಾನುವಾರ ಅವ್ವ ಸೇವಾ ಟ್ರಸ್ಟ್‌ನಿಂದ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಹಾಗೂ ಅವ್ವ ಪ್ರಶಸ್ತಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯಾದ್ಯಂತ ಸಾಧಕರನ್ನು ಗುರುತಿಸಿ "ಅವ್ವ " ಪ್ರಶಸ್ತಿ ನೀಡುತ್ತಿದ್ದು, ಪುರಸ್ಕೃತರ ಮುಂದಿನ ಬದುಕು ಮತ್ತಷ್ಟು ಜವಾಬ್ದಾರಿಯಿಂದ ಕೂಡಿರಬೇಕು. ನಮ್ಮಲ್ಲಿರುವ ಆದರ್ಶ, ಮೌಲ್ಯ, ತತ್ವಗಳನ್ನು ಸಮಾಜ ಸೂಕ್ಷ್ಮವಾಗಿ ನೋಡುತ್ತದೆ. ಬದುಕಿನ ಮೂಲಮಂತ್ರ ಶಿಕ್ಷಣ, ಸಂಸ್ಕಾರವಾಗಿದೆ. ಇವೆರಡು ಬದುಕಲ್ಲಿ ಅಳವಡಿಸಿಕೊಂಡಿದ್ದರೆ ಯಾವ ಸಂದರ್ಭದಲ್ಲೂ ಎಡವಿ ಬೀಳಲು ಸಾಧ್ಯವಿಲ್ಲ ಎಂದರು.

ಬೆಲೆ ಕಟ್ಟಲು ಸಾಧ್ಯವಿಲ್ಲ:

ಸಂದರ್ಭಕ್ಕೆ ತಕ್ಕಂತೆ ದೇವರನ್ನು ಬದಲಾಯಿಸಬಹುದು, ತಾಯಿ‌ಕೊಟ್ಟ ಶಿಕ್ಷಣ ಮತ್ತು ಸಂಸ್ಕಾರ ಬದಲಾಗಿಸಲು ಸಾಧ್ಯವಿಲ್ಲ. ತಾಯಿ ಮಾತೇ ಅಮೃತ, ಅವಳ ಮಮತೆಯೇ ಜೀವಾಳ. ತಾಯಿನೇ ನಮಗೆಲ್ಲ ಮೂಲ ಬೇರು. ಅವಳ ಸಂಸ್ಕಾರ, ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಿವಕುಮಾರ ಹೇಳಿದರು.

ಅವ್ವ ಎಂದರೆ ಸರ್ವಸ್ವ:

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅವ್ವ ಎಂದರೆ ಪ್ರೀತಿ, ಆಸರೆ, ಮಮತೆ, ಸರ್ವಸ್ವ. ಅವಳು ಕೊಡುವ ಸಂಸ್ಕಾರ ಬೇರೆಲ್ಲಿಯೂ ದೊರೆಯುವುದಿಲ್ಲ. ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವುದು ಕಟುಸತ್ಯ. ಅಪವಾದ ಎನ್ನುವಂತೆ ಕೆಲವು ನಿದರ್ಶನಗಳಿರಬಹುದು. ಆದರೆ, ತಾಯಿಯ ಒಲುಮೆ ಮತ್ತು ಅವಳು ಕೊಡುವ ಸಂಸ್ಕಾರ ಬದುಕಿನುದ್ದಕ್ಕೂ ಜತೆಗಿರುತ್ತವೆ ಎಂದರು.

ಮಕ್ಕಳಿ ಸಂಸ್ಕಾರ ನೀಡಿ:

ತಂದೆ-ತಾಯಿಗೆ ನೋವುಂಟು ಮಾಡುವವರಿಗೆ ಎಂದಿಗೂ ಒಳಿತಾಗುವುದಿಲ್ಲ. ಇತ್ತೀಚೆಗೆ ಕೆಲವರು ಮಕ್ಕಳು ಹುಟ್ಟುವ ಮೊದಲೇ ಯಾವ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂದು ಚಿಂತೆ ಮಾಡುತ್ತಾರೆ. ಅವರಿಗೆ ಸಂಸ್ಕಾರ ಕೊಡುವುದರ ಬಗ್ಗೆ ಯೋಚಿಸುವುದಿಲ್ಲ. ಮನೆಯಲ್ಲಿ ಸಿಗುವ ಸಂಸ್ಕಾರ ಎಂದಿಗೂ ಶಾಲೆಯಲ್ಲಿ ಸಿಗುವುದಿಲ್ಲ ಎಂಬುದನ್ನು ಪಾಲಕರು ಅರಿತುಕೊಳ್ಳಲಿ ಎಂದು ಜೋಶಿ ಕಿವಿಮಾತು ಹೇಳಿದರು.

ತಾಯಿಯೇ ದೇವರು:

ಟ್ರಸ್ಟ್ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪತ್ರಿಕೆಗಳ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ಈ ವರೆಗೆ 68 ಮಂದಿಗೆ ಅವ್ವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಮ್ಮ ತಾಯಿಯ ಸ್ಮರಣೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ದೇವರು ಎಂದಿಗೂ ತಾಯಿಯಾಗಲು ಸಾಧ್ಯವಿಲ್ಲ. ಆದರೆ, ತಾಯಿ ದೇವರಾಗಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಯನ್ನು ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳಿ ಎಂದರು.

ಹವ್ಯಾಸಿ ಅಂಕಣಕಾರೆ ಅಕ್ಷಯಾ ಗೋಖಲೆ ಉಪನ್ಯಾಸ ನೀಡಿದರು. ಚಿತ್ತರಗಿಯ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕ ಮಾತನಾಡಿದರು.

12 ಜನರಿಗೆ "ಅವ್ವ " ಪ್ರಶಸ್ತಿ ಪ್ರದಾನ

ರಾಜಕಾರಣಿ ಎಸ್.ಆರ್. ಪಾಟೀಲ, ಪತ್ರಕರ್ತ ಚಂದ್ರಕಾಂತ ವಡ್ಡು, ಸಿತಾರ ವಾದಕ ಛೋಟೆ ರಹಮತ್ ಖಾನ್, ಸಾಹಿತಿ ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಭಾಗವತ ಕೇಶವ ಹೆಗಡೆ ಕೊಳಗಿ, ಉದ್ಯಮಿ‌ ಮಹೇಂದ್ರ ಸಿಂಘಿ, ಬಸವ ತತ್ವ ಪ್ರಚಾರಕ ಎಸ್. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಕೇಟ್ ಕ್ರೀಡಾಪಟು ತ್ರಿಶಾ ಜಡಲಾ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ಅಂಕಿತಾ ಕೊಣ್ಣೂರ ಅವರಿಗೂ ''''''''ಅವ್ವ ಪ್ರಶಸ್ತಿ'''''''' ಜತೆಗೆ ಸ್ಮರಣಿಕೆ, ₹ 25 ಸಾವಿರ ನಗದು ನೀಡಿ ಗೌರವಿಸಲಾಯಿತು.