ಸಾರಾಂಶ
ಅತಿ ಹೆಚ್ಚು ಅಂಕ ಪಡೆದವರಿಗೆ ಡಾ.ಮಮತಾ ಬಹುಮಾನ
ಬೇಲೂರು: ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ.ಅರೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಮಮತಾ ಮಾತನಾಡಿ, ‘ಪ್ರತಿಯೊಬ್ಬರಿಗೂ ಶಿಕ್ಷಣವೆಂಬುವುದು ಬಹಳ ಮುಖ್ಯ ,ದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ, ನಾವು ಯಾರ ಮೇಲೂ ಅವಲಂಬಿತರಾಗದೆ ನಮ್ಮ ಉತ್ತಮ ಜೀವನ ರೂಪಿಸಲು ಶಿಕ್ಷಣ ಬಹಳ ಅವಶ್ಯಕ. ಆದ್ದರಿಂದ ಎಲ್ಲರೂ ಉತ್ತಮ ಶಿಕ್ಷಣ ಪಡೆದು ಒಳ್ಳೆಯ ನೌಕರಿಯನ್ನು ಪಡೆಯಲು ಶ್ರಮಿಸಬೇಕು, ವಿದ್ಯೆಗೆ ಸರಿಸಾಟಿ ಯಾವುದೂ ಇಲ್ಲಾ, ನಿಮ್ಮ ತಂದೆ ತಾಯಿಯ ಶ್ರಮವನ್ನು ಅರ್ಥಮಾಡಿಕೊಂಡು ಒಳ್ಳೆಯ ಶಿಕ್ಷಣ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.
‘ನೀವು ನಿಮ್ಮ ಮನೆಯ, ಕಷ್ಟವನ್ನು ಅರಿತು ಚೆನ್ನಾಗಿ ಓದಿ ನೌಕರಿ ಪಡೆದು ಇದೇ ರೀತಿ ಬೇರೆಯವರಿಗೂ ಪ್ರೇರಣೆ ನೀಡಿ, ನಾನು ನೀಡುತ್ತಿರುವ ಪುರಸ್ಕಾರ ಅಲ್ಪವಾದರೂ ನೂರಾರು ವಿದ್ಯಾರ್ಥಿಗಳ ಮುಂದೆ ಪಡೆದುಕೊಳ್ಳುವುದು ಒಂದು ಗೌರವ ಮತ್ತು ಶ್ರಮಕ್ಕೆ ಪ್ರತಿಫಲ. ಇದರಿಂದ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂಬುವುದು ನನ್ನ ಆಶಯ’ ಎಂದು ಹೇಳಿದರು.ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಮಾತನಾಡಿ, ಮಮತಾ ಸರ್ಕಾರಿ ಶಾಲೆಯಲ್ಲಿ ಕಷ್ಟದ ಅರಿವಿನೊಂದಿಗೆ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆದು ಇದೀಗ ಜನ ಮನ್ನಣೆ ಗಳಿಸಿ ವೈದ್ಯಾಧಿಕಾರಿಯಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 7 ವರ್ಷಗಳಿಂದ ಉತ್ತಮ ವೈದ್ಯ ಸೇವೆ ಸಲ್ಲಿಸುತ್ತಿರುವ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯು ಶ್ರಮಿಸುತ್ತಿರುವ ಅವರಿಗೆ ಶುಭವಾಗಲಿ ಎಂದು ತಿಳಿಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯುವರಾಜ್, ಹಳೆಯ ವಿದ್ಯಾರ್ಥಿಗಳು, ಸಹಾ ಶಿಕ್ಷಕರಾದ ಮಂಜುನಾಥ್, ಪ್ರವೀಣ್, ಪ್ರಸನ್ನ ಕುಮಾರ್ ಇದ್ದರು.