ಸಾರಾಂಶ
ಮಂಗಳೂರು: ಇತಿಹಾಸ ಪ್ರಸಿದ್ಧ ಐಕಳಬಾವ ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳೋತ್ಸವ ಫೆ.3ರಂದು ಜರುಗಲಿದೆ. ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಐಕಳ ಕಂಬಳವನ್ನು ಜಾನಪದ ಕ್ರೀಡಾಮೇಳದೊಂದಿಗೆ ‘ಐಕಳೋತ್ಸವ’ ರೀತಿಯಲ್ಲಿ ಆಯೋಜಿಸಲಾಗಿದೆ.ಈ ಕಂಬಳೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ನೀಡಲಾಗುವುದೆಂದು ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಾರ್ಥಕ ಸೇವೆಯನ್ನು ಕಳೆದ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಗೈಯುತ್ತಿರುವ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಯ ಹರಿಕಾರ. ಇವರ ದೂರದರ್ಶಿತ್ವದ ನಾಯಕತ್ವದಿಂದಲೇ ಎಸ್ ಸಿಡಿಸಿಸಿ ಬ್ಯಾಂಕ್ ಇಂದು ‘ಜನಸ್ನೇಹಿ’ ಬ್ಯಾಂಕ್ ಆಗಿ ರೂಪುಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ಹೆಗ್ಗಳಿಕೆ ಇವರದ್ದು. ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರಿಗೆ ಸಲ್ಲುತ್ತದೆ. ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದು ರಾಜೇಂದ್ರ ಕುಮಾರ್.ರಾಜೇಂದ್ರ ಕುಮಾರ್ ಅವರ ಕೊಡುಗೆ ಕರಾವಳಿಯ ಜಾನಪದ ಕ್ರೀಡೆ ಎನಿಸಿದ ಕಂಬಳಕ್ಕೂ ಲಭಿಸಿದೆ. ಸ್ವತಃ ಕಂಬಳ ಪ್ರೇಮಿಯಾಗಿ, ಪ್ರೋತ್ಸಾಹಕರಾಗಿ, ಮಾರ್ಗದರ್ಶಕರಾಗಿದ್ದಾರೆ.