ಸಾರಾಂಶ
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡುತ್ತಿದ್ದ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರ ಹಾಗೂ ರಾಜ್ಯದ ಜನರ ಹಿತ ಕಾಪಾಡದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ನಿರಂತರ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ತೀರ್ಮಾನಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡುತ್ತಿದ್ದ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರ ಹಾಗೂ ರಾಜ್ಯದ ಜನರ ಹಿತ ಕಾಪಾಡದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ನಿರಂತರ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ತೀರ್ಮಾನಿಸಲಾಗಿದೆ.ನಗರದ ಸರ್ ಎಂ.ವಿ.ಪ್ರತಿಮೆ ಎದುರು ಧರಣಿ ಸ್ಥಳದಲ್ಲಿ ನಡೆದ ಸಭೆಯಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿದ್ದ ಕಾವೇರಿ ಹೋರಾಟವನ್ನು ಫೆ.2 ವರೆಗೆ ಮುಂದುವರೆಸಿ ಅಂತ್ಯಗೊಳಿಸಲು ತೀರ್ಮಾನಿಸಲಾಯಿತು.
ಫೆ.1ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆ.2ರ ವರೆಗೆ ಚಳವಳಿ ಮುಂದುವರೆಯುವುದು, ಅದೇ ದಿನ ಸಂಜೆ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲು ನಿರ್ಣಯಿಸಲಾಯಿತು.ಕಾವೇರಿ ನದಿ ನೀರಿನ ವಿಚಾರದಲ್ಲಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಪ್ರತಿ ಸೋಮವಾರ ಜಿಲ್ಲಾ ಕೇಂದ್ರ ಮಂಡ್ಯದ ಜಯಚಾಮ ರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಧ್ಯಾಹ್ನ 12ರಿಂದ 1 ರವರೆಗೆ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆಗೆ ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿರುವ ಬಗ್ಗೆ ಮನದಟ್ಟು ಮಾಡಿಕೊಡುವುದು, ಜಿಲ್ಲೆಯ ತಾಲೂಕು ಹೋಬಳಿ ಕೇಂದ್ರದಲ್ಲಿ ಪ್ರಚಾರ ಆಂದೋಲನ ನಡೆಸಿ ಕಾವೇರಿ ವಿಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಕಾವೇರಿ ಕೊಳ್ಳದ ಎಂಟು ಜಿಲ್ಲೆಗಳಲ್ಲಿ ಸಭೆ ಮತ್ತು ಹೋರಾಟ ನಡೆಸಿ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ,ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಕಾವೇರಿ ಕುಟುಂಬದ ಪ್ರೊ. ಬಸವರಾಜ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಮೀರಾ ಶಿವಲಿಂಗಯ್ಯ ಇತರ ಸಂಘಟನೆಗಳ ಮುಖಂಡರು ಹಾಜರಿದ್ದರು.