ಯುಪಿಐ ವಹಿವಾಟು ನಡೆಸಿದ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಪ್ರಶಸ್ತಿ

| Published : Mar 31 2024, 02:17 AM IST / Updated: Mar 31 2024, 06:26 AM IST

ಯುಪಿಐ ವಹಿವಾಟು ನಡೆಸಿದ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಟಿಕೆಟ್‌ ವಿತರಣಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ ಅತಿ ಹೆಚ್ಚು ವಹಿವಾಟು ಮಾಡಿರುವ ವಿಭಾಗ, ಘಟಕ, ನಿರ್ವಾಹಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

  ಹುಬ್ಬಳ್ಳಿ :  ರಾಜ್ಯದ ಸಾರಿಗೆ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಯುಪಿಐ ವ್ಯವಸ್ಥೆ ಜಾರಿಗೊಳಿಸಿರುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಪಾಕ್ಷಿಕ ಅಭಿಯಾನ ನಡೆಸಿ ಅದರಲ್ಲಿ ಅತಿ ಹೆಚ್ಚು ಯುಪಿಐ ವಹಿವಾಟು ನಡೆಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಯುಪಿಐ ವ್ಯವಸ್ಥೆ ಜಾರಿಗೊಳಿಸಿದ ಮೇಲೆ ನಗದು ರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ಮಾ. 3ರಿಂದ 16ರ ವರೆಗೆ ಸಂಸ್ಥೆಯಲ್ಲಿ ಯುಪಿಐ ಪಾವತಿ ಮೂಲಕ ಟಿಕೆಟ್‌ ವಿತರಣಾ ಪಾಕ್ಷಿಕ ಅಭಿಯಾನ ನಡೆಸಲಾಗಿತ್ತು. ಯುಪಿಐ ಮೂಲಕ ಪ್ರತಿದಿನ ಸರಾಸರಿ 19698 ವಹಿವಾಟುಗಳಿಂದ ಬರೋಬ್ಬರಿ ₹17.94 ಲಕ್ಷ ಸಂಗ್ರಹವಾಗಿದೆ. ಅಭಿಯಾನದ ಅವಧಿಯಲ್ಲಿ ಅತಿ ಹೆಚ್ಚು ವಹಿವಾಟು ಮಾಡಿರುವ ವಿಭಾಗ, ಘಟಕ, ನಿರ್ವಾಹಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರಶಸ್ತಿ ವಿಜೇತ ವಿಭಾಗ, ಘಟಕದ ಅಧಿಕಾರಿ ಮತ್ತು ಪ್ರತಿದಿನ ಅತಿ ಹೆಚ್ಚು ವಹಿವಾಟು ಮಾಡಿದ ನಿರ್ವಾಹಕರಿಗೆ ಪ್ರಶಸ್ತಿ ನೀಡಲಾಯಿತು. ಚಿಕ್ಕೋಡಿ ವಿಭಾಗ ಪ್ರಥಮ ಸ್ಥಾನ ಪಡೆದಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ ಪ್ರಶಸ್ತಿ ಸ್ವೀಕರಿಸಿದರು. ಘಟಕ ಮಟ್ಟದಲ್ಲಿ ಗೋಕಾಕ ಪ್ರಥಮ ಸ್ಥಾನ, ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕ ದ್ವಿತೀಯ ಸ್ಥಾನ ಹಾಗೂ ಬೆಳಗಾವಿ 1ನೇ ಘಟಕ ತೃತೀಯ ಸ್ಥಾನ ಪಡೆದಿದೆ. ಘಟಕ ವ್ಯವಸ್ಥಾಪಕರಾದ ಅಪ್ಪಣ್ಣ ಆರ್. ಛಬ್ಬಿ, ನಿತಿನ್ ಗಡದೆ, ಎಲ್.ಎಸ್. ಲಾಠಿ ಪ್ರಶಸ್ತಿ ಸ್ವೀಕರಿಸಿದರು.

ಪ್ರತಿದಿನ ಅತೀಹೆಚ್ಚು ವಹಿವಾಟು ನಡೆಸಿದ ನಿರ್ವಾಹಕರಾದ ಜಿ.ಎಂ. ಮಠಪತಿ ಸಂಕೇಶ್ವರ ಘಟಕ, ವೈ.ಎಚ್. ತೋಗುಣಶಿ ಬದಾಮಿ ಘಟಕ, ಸಿ.ಎಸ್. ಹಿರೇಕುರಬರ ಬೀಳಗಿ ಘಟಕ, ಆರ್.ಡಿ. ಬಾಗೇವಾಡಿ ಮುಧೋಳ ಘಟಕ, ಶ್ರೀಧರ ಹಿನಿ ಭಟ್ಕಳ ಘಟಕ, ಎ.ಎ. ಮೇದಾರ ಗೋಕಾಕ ಘಟಕ, ಎನ್.ಡಿ. ನಧಾಪ ಬಾಗಲಕೋಟೆ ಘಟಕ, ಎಲ್.ಟಿ. ದಾಸರ ಗೋಕಾಕ ಘಟಕ, ಎಚ್.ಎಂ. ಶಿತನೂರು ಜಮಖಂಡಿ ಘಟಕ, ಎಸ್.ಎ. ಶಹರ ಮುಧೋಳ ಘಟಕ ಹಾಗೂ ಎಸ್.ವಿ.ಗಡಾದ ರೋಣ ಘಟಕ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

ಪ್ರಶಸ್ತಿ ವಿತರಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಮಾತನಾಡಿ, ಯುಪಿಎ ಮೂಲಕ ಟಿಕೆಟ್ ವಿತರಿಸುವ ವ್ಯವಸ್ಥೆ ಅಳವಡಿಸಿಕೊಂಡು ಸಂಸ್ಥೆಯು ದೇಶದ ಗಮನ ಸೆಳೆದಿದೆ. ಇದಕ್ಕೆ ಶ್ರಮಿಸಿದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದರು.

ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಉಪಸ್ಥಿತರಿದ್ದರು. ಇಲಾಖಾ ಮುಖ್ಯಸ್ಥರಾದ ಎಲ್.ಜಿ. ರಘುನಾಥ, ರಾಜೇಶ್ ಹುದ್ದಾರ, ಪಿ.ವೈ. ನಾಯಕ, ಬಿ. ಬೋರಯ್ಯ, ವಿಜಯಶ್ರೀ ನರಗುಂದ, ಜಗದಂಬಾ ಕೋಪರ್ಡೆ, ಮಾಲತಿ ಎಸ್.ಎಸ್., ಸುಮನಾ ಯು ಹಾಗೂ ಅಧಿಕಾರಿಗಳಾದ ಬಸವರಾಜ ಅಮ್ಮನ್ನವರ, ಎಂ.ಬಿ. ಕಪಲಿ, ರವಿ ಅಂಚಿಗಾವಿ ಮತ್ತು ಕೇಂದ್ರ ಕಚೇರಿಯ ಇನ್ನಿತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾನಂದ ನಾಗಾವಿ ವಂದಿಸಿದರು.