ಕಾವ್ಯದಲ್ಲಿ ಲೋಕೋತ್ತರ, ಲೌಕಿಕ ಎರಡರ ಸಮನ್ವಯತೆ ಅಗತ್ಯ

| Published : Oct 21 2024, 12:30 AM IST

ಸಾರಾಂಶ

ಕಾವ್ಯ ಎಂದರೇ ಬೆಳಕು. ಬರೀ ಬೆಳಕಲ್ಲಿ, ಮಾಧುರ್ಯದ ಬೆಳಕು

ಕನ್ನಡಪ್ರಭ ವಾರ್ತೆ ಮೈಸೂರು

ಕಾವ್ಯದಲ್ಲಿ ಲೋಕೋತ್ತರ, ಲೌಕಿಕ ಎರಡರ ಸಮನ್ವಯತೆ ಇರಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್‌ ಪ್ರತಿಪಾದಿಸಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವ್ಯದಲ್ಲಿ ಲೋಕೋತ್ತರ ಅಂಶ ಹೆಚ್ಚಿರಬೇಕು. ಲೌಕಿಕ ಅಂಶ ಕಡಿಮೆ ಇರಬೇಕು ಎಂದರು.

ಕಾವ್ಯ ಎಂದರೇ ಬೆಳಕು. ಬರೀ ಬೆಳಕಲ್ಲಿ, ಮಾಧುರ್ಯದ ಬೆಳಕು. ಬೆಳಕು ಮತ್ತು ಮಾಧುರ್ಯ ಸಂಗಮವಾಗಿ ಸಂಸ್ಕೃತಿ ಉಂಟಾಗುತ್ತದೆ ಎಂದ ಅವರು, ಈಗ ಸಂಸ್ಕೃತಿ ಎಲ್ಲಿದೆ?. ಎಲ್ಲಾ ಕುಸಂಸ್ಕೃತಿ ಎಂದು ವಿಷಾದಿಸಿದರು.

ಕಾವ್ಯಕ್ಕೆ ಸಂಸ್ಕೃತಿ ಮುಖ್ಯ. ಕಾವ್ಯಕ್ಕೆ ಯುದ್ಧ ತಡೆಯುವ ಶಕ್ತಿಯೂ ಇದೆ ಎಂದರು.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಅವರು ದೇಜಗೌ ಅವರನ್ನು ಕುರಿತು ಹೇಳಿದ್ದರು. ದೇಜಗೌ ಅವರು ನನ್ನನ್ನು ಕೈಹಿಡಿದು ನಡೆಸಿದ್ದರಿಂದ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಬೆಳಗ್ಗೆಯಿಂದ ಇಲ್ಲಿ ಕಬ್ಬದ ಹಬ್ಬ ನಡೆದಿದೆ. ಮೂರನೇ ಮಹಾಯುದ್ಧ ನಡೆಯುತ್ತೋ ಬಿಡುತ್ತೋ ಆದರೆ ಅದನ್ನು ತಡೆಯುವಷ್ಟು ಕವಿಗಳು ಉಳಿದಿದ್ದಾರೆ ಎಂಬುದು ಸಂತೋಷ ಎಂದರು.

ನನ್ನ ಹೆಸರಿನಲ್ಲಿ ಪ್ರಶಸ್ತಿ ಪಡೆದವರು ಧನ್ಯರಲ್ಲ. ನನ್ನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನೇ ಧನ್ಯ. ಇದು ನನಗೆ ಗೌರವ. ಪ್ರಶಸ್ತಿ ಪಡೆದ ಕವಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಮೈಸೂರಿನ ವಿಜಯಮಾಲಾ ರಂಗನಾಥ್‌, ಯಾದಗಿರಿಯ ನಾಗಣ್ಣ ಕಿಲಾರಿ, ಚಾಮರಾಜನಗರದ ಮಂಜು ಕೋಡಿಉಗನೆ, ದಕ್ಷಿಣ ಕನ್ನಡದ ವಿದ್ಯಾರಶ್ಮಿ ಪೆಲ್ಲತ್ತಡ್ಕ, ಮಂಡ್ಯದ ಗಣಂಗೂರು ನಂಜೇಗೌಡ, ಕೋಲಾರದ ಗುಣವಂತ ಮಂಜು ಅವರಿಗೆ ವಿಚಾರವಾದಿ ಪ್ರೊ.ಕೆ.ಎಸ್‌. ಭಗವಾನ್‌ ಅವರು ಡಾ. ಸಿಪಿಕೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನಿಬ್ಬರು ಪ್ರಶಸ್ತಿ ಪುರಸ್ಕೃತರಾದ ಚಿಕ್ಕಮಗಳೂರಿನ ಬಿ.ಆರ್. ಶ್ರುತಿ, ಕಲಬುರಗಿಯ ಎನ್.ಎಸ್‌. ಚಾಂದ್‌ ಪಾಷ ಗೈರಾಗಿದ್ದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಕೃಷಿ ವಿಜ್ಞಾನಿ ವಸಂತಕುಮಾರ ತಿಮಕಾಪುರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ. ಗೋವಿಂದರಾಜು ಮುಖ್ಯಅತಿಥಿಗಳಾಗಿದ್ದರು.

ಬಸಪ್ಪ ಸಿ. ಸಾಲುಂಡಿ ಸ್ವಾಗತಿಸಿದರು. ಡಿ.ಕೆ. ಉಷಾ ನಿರೂಪಿಸಿದರು.

-------------

ಬಾಕ್ಸ್‌...

ಎರಡು ಹಲ್ಲು ಉದುರಿವೆ, ಬಾಯಿ ಬಿಡಲು ಇಷ್ಟವಿಲ್ಲ!

ಇತ್ತೀಚೆಗೆ ನನಗೆ ಬಾಯಿ ಬಿಡಲು ಇಷ್ಟವಿಲ್ಲ. ಏಕೆಂದರೆ ಎರಡು ಹಲ್ಲು ಉದುರಿ ಹೋಗಿವೆ. ಬಾಯಿಬಿಟ್ಟರೆ ಅವಲಕ್ಷಣವಾಗಿ ಕಾಣಬಹುದು. ಇವುಗಳನ್ನು ಯಾರೂ ಉದುರಿಸಿಲ್ಲ. ಉದುರಿಸಿದರೆ ಮನೆಯವರು ಉದುರಿಸಬೇಕು. ಈ ವಯಸ್ಸಿನಲ್ಲಿ ಅದು ಆಗದು ಎಂದು ಹಿರಿಯ ಕವಿ ಡಾ.ಸಿಪಿಕೆ ಹೇಳಿದರು.

ಹರಿಹರ ಸೋದರಳಿಯ ರಾಘವಾಂಕನ ಹಲ್ಲು ಉದುರಿಸಿದ್ದನ್ನು ಕುರಿತು ಜಿ.ಪಿ. ರಾಜರತ್ನಂ ಅವರು ರಾಘವಾಂಕನ ಹಲ್ಲು ಎಂಬ ಕೃತಿಯನ್ನೇ ಬರೆದಿದ್ದಾರೆ ಎಂದು ಅವರು ಹೇಳಿದರು.

ಕಾವ್ಯದಲ್ಲಿ ಲೋಕೋತ್ತರ ಇರಬೇಕು. ಆದರೆ ರಾಘವಾಂಕ ಲೌಕಿಕವಾದುದ್ದನ್ನು ಹೆಚ್ಚು ಬರೆದಿದ್ದಾರೆ ಎಂಬುದು ಇದಕ್ಕೆ ಕಾರಣ ಎಂದರು.

ಎರಡು ಕವಿಗೋಷ್ಠಿಗಳು

ದಸರಾ ಕವಿ- ಕಾವ್ಯ ಸಂಭ್ರಮ ಅಂಗವಾಗಿ ಎರಡು ಕವಿಗೋಷ್ಠಿಗಳು ನಡೆದವು. ಎಚ್.ಎಸ್‌. ರುದ್ರೇಶ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಲಕ್ಷ್ಮೀನರಸಮ್ಮ ಆಶಯ ಭಾಷಣ ಮಾಡಿದರು. ಅಂಬಳೆ ಮಹದೇವಸ್ವಾಮಿ ಮೊದಲಾದವರು ಇದ್ದರು.

ಎಚ್‌.ಕೆ. ಹಸೀನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಶಿವಬಸಪ್ಪ ಹೊರೆಯಾಲ ಆಶಯ ಭಾಷಣ ಮಾಡಿದರು. ಎಚ್‌.ಸಿ. ಸುಬ್ಬಲಕ್ಷ್ಮಿ, ಅನಾರ್ಕಲಿ ಸಲೀಂ, ನಾಗೇಂದ್ರ ಹೆಬ್ಬಾರ್‌ ಮೊದಲಾದವರು ಇದ್ದರು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 80 ಮಂದಿ ಕವನ ವಾಚಿಸಿದರು.ವೇದಿಕೆಯ ಪದಾಧಿಕಾರಿಗಳಾದ ಕೆ.ಎಸ್‌. ಸತೀಶ್‌ ಕುಮಾರ್‌, ಟಿ. ಲೋಕೇಶ್‌ ಹುಣಸೂರು, ಬಿ. ಬಸವರಾಜು, ಚಂದ್ರು ಮಂಡ್ಯ, ಹಾಲತಿ ಲೋಕೇಶ್‌ ಮೊದಲಾದವರು ಇದ್ದರು.