ಪ್ರಶಸ್ತಿಗಳು ಸಾಧನೆಗೆ ಹಿಡಿದ ಕನ್ನಡಿ

| Published : Mar 26 2024, 01:03 AM IST

ಸಾರಾಂಶ

ಡಾ.ರಾಜ್ ಕುಮಾರ್ ಹಾಗೂ ಪುತ್ರ ದಿ.ಪುನೀತ್ ರಾಜ್‌ಕುಮಾರ್‌ ಅವರು ರಾಜ್ಯ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿಗಳ ಪಡೆದಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ.

ಶಿಕಾರಿಪುರ: ಡಾ.ರಾಜ್ ಕುಮಾರ್ ಹಾಗೂ ಪುತ್ರ ದಿ.ಪುನೀತ್ ರಾಜ್‌ಕುಮಾರ್‌ ಅವರು ರಾಜ್ಯ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿಗಳ ಪಡೆದಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದು ಅಪ್ಪು ಸ್ನೇಹ ಬಳಗದ ವೈಭವ್ ಬಸವರಾಜ್ ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ರಸ್ತೆ ನಾಮಫಲಕ ಲೋಕಾರ್ಪಣೆಗೊಳಿಸಿ ಮಾತನಾಡಿ,

ಅಪ್ಪು ಅಭಿಮಾನಿ ಬಳಗದ ಬಹುದಿನಗಳ ಆಸೆ ಇದೀಗ ಈಡೇರಿದೆ, ಇದಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎಂದರು. ಅಂದು ದಾನಶೂರ ಕರ್ಣನ ಹೆಸರನ್ನು ಕೇಳಿದ್ದೆವು ಈ ಕಲಿಯುಗದಲ್ಲಿ ಅಂತರ್ಮುಖಿಯಾಗಿ ಕರ್ಣನನ್ನು ಪುನೀತ್ ರಾಜಕುಮಾರ್ ಅವರಲ್ಲಿ ನಾಡಿಗೆ ನಾಡೇ ಕಂಡಿದ್ದು, ಇಂತಹ ನಟನನ್ನು ಪಡೆದ ಕರ್ನಾಟಕವೇ ಧನ್ಯ ಎಂದರು.

ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್ ಮಾತನಾಡಿ, ಪ್ರತಿಯೊಬ್ಬರು ಪುನೀತ್ ಅವರ ಆದರ್ಶವನ್ನು ಮೈಗೂಡಿಸಿಕೊಂಡರೆ ಖಂಡಿತ ಸ್ವಲ್ಪಮಟ್ಟಿಗಾದರೂ ಸಮಾಜದಲ್ಲಿ ಸುಧಾರಣೆಯಾಗಲಿದೆ. ಪ್ರತಿಯೊಬ್ಬರು ದುಡಿಮೆಯನ್ನು ಮೈಗೂಡಿಸಿಕೊಳ್ಳುವ ಜತೆಗೆ ದಾನ ಧರ್ಮಕ್ಕಾಗಿ ದುಡಿಮೆಯ ಅಲ್ಪ ಭಾಗವನ್ನು ಮೀಸಲಿಡಿ ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ದಿ.ಪುನೀತ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ನೋಡಿದರೆ ಅವರನ್ನು ನಾವು ಕಳೆದುಕೊಂಡಿಲ್ಲ. ಇಲ್ಲೇ ಎಲ್ಲೋ ನಮ್ಮ ಹತ್ತಿರದಲ್ಲಿ ಇದ್ದಾರೆ ಅನ್ನುವಷ್ಟು ಆತ್ಮೀಯತೆ ಎದ್ದು ಕಾಣುತ್ತದೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಶಿವರಂಜಿನಿ ಸುದರ್ಶನ್ ಮಾತನಾಡಿ, ಡಾ.ರಾಜಕುಮಾರ್ ಮತ್ತು ಪುತ್ರ ದಿ.ಪುನೀತ್ ಬೆಳೆದು ಬಂದ ದಾರಿ ಯುವ ಪೀಳಿಗೆಗೆ ಮಾದರಿ, 1982ರಲ್ಲಿ ಅಮೆರಿಕ ನಡೆಸಿದ ವಿಶ್ವದ ಅತ್ಯುತ್ತಮ ಕಲಾವಿದರಲ್ಲಿ ಎಲ್ಲ ಪಾತ್ರಗಳನ್ನು ನಿಭಾಯಿಸಬಲ್ಲ ನಟರ ಬಗ್ಗೆ ಸಮೀಕ್ಷೆ ಕೈಗೊಂಡಾಗ ರಾಜಕುಮಾರ್ ಮುಂಚೂಣಿಯಲ್ಲಿದ್ದರು. ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ಮೊದಲ ಮತ್ತು ಕೊನೆಯ ನಟರಾದರೆ ಅದೇ ರೀತಿ ಮಗನು ಕೂಡ ಕೊನೆಯಿಲ್ಲದ ಮಾನವತವಾದಿ ಎಂದರು. ಅಪ್ಪು ಸ್ನೇಹ ಬಳಗದವರು ಸೇರಿದಂತೆ ಹಲವರು ಇದ್ದರು.