ಮದ್ದೂರು ಪಟ್ಟಣದ ಆಸ್ತಿಗಳ ಮಾಲೀಕರಿಗೆ ಎ ಮತ್ತು ಬಿ ಖಾತಾ ಕುರಿತು ಜಾಗೃತಿ

| Published : Mar 11 2025, 12:47 AM IST

ಮದ್ದೂರು ಪಟ್ಟಣದ ಆಸ್ತಿಗಳ ಮಾಲೀಕರಿಗೆ ಎ ಮತ್ತು ಬಿ ಖಾತಾ ಕುರಿತು ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡ್ ಗಳಲ್ಲಿ ಆಸ್ತಿಗಳ ಮಾಲೀಕರಿಗೆ ಎ ಮತ್ತು ಬಿ ಖಾತಾ ಕುರಿತು ಜಾಗೃತಿ ಮೂಡಿಸಲು ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

ಕನ್ನಡಪ್ರಭವಾರ್ತೆ ಮದ್ದೂರು

ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡ್ ಗಳಲ್ಲಿ ಆಸ್ತಿಗಳ ಮಾಲೀಕರಿಗೆ ಎ ಮತ್ತು ಬಿ ಖಾತಾ ಕುರಿತು ಜಾಗೃತಿ ಮೂಡಿಸಲು ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ನಮೂನೆ ಮೂರು ಹಾಗೂ ನಮೂನೆ ಮೂರು ಎ ಅನ್ವಯ ಪ್ರತಿ ವಾರ್ಡ್ ಗಳ ಸದಸ್ಯರ ಅಧ್ಯಕ್ಷತೆಯಲ್ಲಿ ಆಸ್ತಿಗಳ ಮಾಲೀಕರಿಗೆ ಅಗತ್ಯ ದಾಖಲಾತಿಗಳನ್ನು ನೀಡಿ ಇ ಸ್ವತ್ತು ಮಾಡಿಸಿಕೊಳ್ಳುವಂತೆ ಅರಿವು ಮೂಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸರ್ಕಾರದ ಆದೇಶದಂತೆ ತೆರಿಗೆ ಪಾವತಿಸಿ ಬಿ, ಖಾತೆ ರೀತಿ ಈ ಸ್ವತ್ತು ಮಾಡಿಸಿಕೊಂಡ ಆಸ್ತಿಗಳ ಮಾಲೀಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಸದಸ್ಯ ಮನೋಜ್ ದೂರಿದರು. ಬಿ, ಖಾತ ನೋಂದಣಿ ಆದ ನಂತರ ವಾರ್ಡ್ ಗಳ ಸ್ವಚ್ಛತೆ ಕಾಪಾಡಬೇಕು. ಅಲ್ಲಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು. ಈ ಪ್ರಕ್ರಿಯೆ ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಕೋಕಿಲ, ಪ್ರಾರಂಭಿಕ ಹಂತದಲ್ಲಿ ಸಾಧ್ಯವಾಗ ಇದ್ದರೂ ಸಹ ನಂತರ ದಿನಗಳಲ್ಲಿ ವಾರ್ಡ್ ಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಪುರಸಭೆಯಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ, ಅಧಿಕಾರಿಗಳಿಗೆ ಜನರನ್ನು ಪ್ರತಿನಿತ್ಯ ಅಲೆದಾಡಿಸುವುದನ್ನು ದೊಡ್ಡ ಕಾಯಕ ಮಾಡಿಕೊಂಡಿದ್ದಾರೆ ಎಂದು ಸದಸ್ಯರಾದ ಸಚಿನ್ ಮತ್ತು ಪ್ರಿಯಾಂಕ ಗಂಭೀರ ಆರೋಪ ಮಾಡಿದರು.

ಅಂತಿಮವಾಗಿ ಈ ಮತ್ತು ಬಿ ಖಾತಾ ಬಗ್ಗೆ ಸಭೆಯಲ್ಲಿ ಪರ ಮತ್ತು ವಿರೋಧದ ಬಗ್ಗೆ ಚರ್ಚೆ ನಡೆದು ಸರ್ಕಾರದ ಸುತ್ತೋಲೆ ಅನ್ವಯ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಖಾತೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪುರಸಭೆ ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ 2.20 ಲಕ್ಷ ರು ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪುರಸಭೆ ಸಿಡಿಎಸ್ ಭವನಕ್ಕೆ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ ಆಧುನೀಕರಣಕ್ಕೆ ಅನುದಾನವನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು. ನಂತರ ಪುರಸಭೆ ವಿವಿಧ ಅನುದಾನದ ಅಡಿಯಲ್ಲಿ ಕರೆದಿರುವ ಟೆಂಡರ್ ಗಳಿಗೆ ಸಭೆಯಲ್ಲಿ ಸದಸ್ಯರನ್ನು ಅನುಮೋದನೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್, ಸದಸ್ಯರಾದ ಮಹೇಶ, ಸುರೇಶ್ ಕುಮಾರ್, ಎಂ.ಐ.ಪ್ರವೀಣ್ , ಲತಾ ರಾಮು ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.