ಗ್ರಾಹಕರ ಹಕ್ಕು,ಜವಾಬ್ದಾರಿ ಕುರಿತು ಜಾಗೃತಿ ಅತ್ಯಗತ್ಯ

| Published : Mar 28 2024, 12:46 AM IST

ಗ್ರಾಹಕರ ಹಕ್ಕು,ಜವಾಬ್ದಾರಿ ಕುರಿತು ಜಾಗೃತಿ ಅತ್ಯಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ದಿನಮಾನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ದಿಮತ್ತೆ) ಬಳಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕಾಗುವಂತಹ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಮೊಬೈಲ್ ಫೋನ್ ಕೂಡ ಕೃತಕ ಬುದ್ಧಿಮತ್ತೆಯ ಒಂದು ಭಾಗವಾಗಿದೆ

ಗದಗ: ಗ್ರಾಹಕರಿಗೆ ಅವರ ಹಕ್ಕು ಮತ್ತು ಜವಾಬ್ದಾರಿಗಳ ಕುರಿತು ಜನಜಾಗೃತಿ ಮೂಡಿಸುವುದು ವಿಶ್ವ ಗ್ರಾಹಕರ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ, ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗ್ರಾಹಕರಿಗಾಗಿ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಎಂಬ ಘೋಷವಾಕ್ಯದಡಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಇಂದಿನ ದಿನಮಾನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ದಿಮತ್ತೆ) ಬಳಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕಾಗುವಂತಹ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಮೊಬೈಲ್ ಫೋನ್ ಕೂಡ ಕೃತಕ ಬುದ್ಧಿಮತ್ತೆಯ ಒಂದು ಭಾಗವಾಗಿದೆ. ಕೃತಕ ಬುದ್ಧಿಮತ್ತೆ ಸಹಾಯದಿಂದ ವೈದ್ಯಕೀಯ ಲೋಕದಲ್ಲಿಯ ಸವಾಲುಗಳಿಗೆ ಪರಿಹಾರ, ಹವಾಗುಣ ಪರಿಸ್ಥಿತಿ, ರೂಟ್ ಮ್ಯಾಪ್ ಹೀಗೆ ಅನೇಕ ತರಹದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್ ಮುಖಾಂತರ ಯಾವುದಾದರೂ ವಸ್ತುಗಳನ್ನು ಖರೀದಿ ಮಾಡಿದ್ದರೆ ಅಂತಹ ಸರಕುಗಳಲ್ಲಿ ಲೋಪದೋಷಗಳು ಕಂಡು ಬಂದರೆ ಅಥವಾ ಸರಬರಾಜುದಾರರು ತಪ್ಪು ಮಾಹಿತಿ ಕೊಟ್ಟಿದ್ದರೆ ಆಗ ಅವರು ಶಿಕ್ಷೆಗೆ ಒಳಗಾಗುತ್ತಾರೆ.ಆದ ಕಾರಣ ಗ್ರಾಹಕರು ಇಂದಿನ ತಂತ್ರಜ್ಞಾನದ ತಿಳಿವಳಿಕೆ ಹೊಂದುವುದು ಹಾಗೂ ಬಳಕೆ ಮಾಡುವುದು ಸಹ ಅಗತ್ಯವಾಗಿದೆ ಎಂದರು.

ಯಾವುದೇ ಲಿಂಗ ಬೇಧವಿಲ್ಲದೇ ಸಮಾನವಾಗಿ ಹಾಗೂ ಜವಾಬ್ದಾರಿಯುತವಾಗಿ ಗ್ರಾಹಕರಿಗೆ ನ್ಯಾಯ ಒದಗಿಸುವುದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾರ್ಯವಾಗಿದೆ. ಸಾಮಾಜಿಕ ಜವಾಬ್ದಾರಿ ಅರಿತು ಉತ್ಪಾದನೆ ಮತ್ತು ಮಾರಾಟ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಮಾತನಾಡಿ, ೧೯೬೨ರ ಮಾ. ೧೫ ರಂದು ಅಮೆರಿಕಾದ ಸಂಸತ್ ನಲ್ಲಿ ಅಧ್ಯಕ್ಷ ಜಾನ್ ಕೆನಡಿ ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಸ್ತಾಪ ಮಾಡಿದರು. ೧೯೮೬ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ಬಂದಿತು. ೨೦೧೯ ರಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ ಹೊಸದಾಗಿ ಅಧಿನಿಯಮಗೊಳಿಸಲಾಯಿತು.ಮಹಾತ್ಮ ಗಾಂಧೀಜಿಯವರು ಗ್ರಾಹಕರೇ ದೇವರೆಂಬ ಮಾತು ಹೇಳಿದ್ದಾರೆ. ಗ್ರಾಹಕರಿಗೆ ವಸ್ತುಗಳನ್ನು ಖರೀದಿಸುವಾಗ ಆಯ್ಕೆ ಮಾಡುವ ಹಕ್ಕು, ಅವುಗಳ ಗುಣಮಟ್ಟಗಳ ಕುರಿತು ತಿಳಿಯುವ ಹಕ್ಕು ಹಾಗೂ ಒಂದು ವೇಳೆ ಮೋಸ ಹೋದರೆ ಪರಿಹಾರ ಪಡೆಯುವ ಹಕ್ಕು ಕೂಡ ಇರುತ್ತದೆ. ಈ ಹಕ್ಕುಗಳ ಕುರಿತು ಗ್ರಾಹಕರು ತಿಳಿವಳಿಕೆ ಹೊಂದಬೇಕು ಎಂದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ.ಪಲ್ಲೇದ ಮಾತನಾಡಿ, ಗ್ರಾಹಕರಿಗೆ ವಸ್ತುಗಳನ್ನು ಖರೀದಿಸಿದಾಗ ಮೋಸವಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.ಆದರೆ ಗ್ರಾಹಕರು ಮಾರಾಟಗಾರರ ಮೇಲೆ ವೃಥಾ ಸುಳ್ಳು ಆರೋಪ ಮಾಡಬಾರದು. ನ್ಯಾಯಯುತವಾಗಿ ವರ್ತಿಸಬೇಕಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ರಾಚಪ್ಪ.ಕೆ.ತಾಳಿಕೋಟಿ ಮಾತನಾಡಿ, ಈಗ ನಾವೆಲ್ಲ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ನಲ್ಲಿ ವ್ಯವಹರಿಸುತ್ತಿದ್ದೇವೆ. ಇದರಿಂದ ಕೆಲವೊಂದು ಸಾಧಕ ಬಾಧಕಗಳಿವೆ. ಬ್ಯಾಂಕ್, ಇನ್ಸೂರನ್ಸ್‌ ಕಂಪನಿಯಲ್ಲಿನ ಸೇವೆಗಳ ಕುರಿತು ಗ್ರಾಹಕರಿಗೆ ನ್ಯೂನತೆಗಳು ಕಂಡುಬಂದಲ್ಲಿ ಅಂತರ್ಜಾಲದ ಮೂಲಕ ಸಂದೇಶ ರವಾನಿಸಿ ಅವುಗಳ ಪ್ರಿಂಟ್ ಕಾಪಿಯನ್ನು ಹಾಗೂ ಸೇವೆಗಳ ರಸೀದಿಯನ್ನು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಹಾಜರುಪಡಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಶೋಧಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ವಿಶ್ವ ಗ್ರಾಹಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಅಪರ ಜಿಲ್ಲಾಧಿಕಾರಿ ಸುರೇಖಾ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ನಾಮದೇವ ಮೇತ್ರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿ ಪಾಟೀಲ, ಎಲ್.ಪಿ.ಜಿ ವ್ಯವಸ್ಥಾಪಕರು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಬಿ. ಪೂಜಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಕಾರರು, ವಿದ್ಯಾರ್ಥಿಗಳು ಇದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಡಾ. ಹಂಪಣ್ಣ ಸಜ್ಜನ ಸ್ವಾಗತಿಸಿದರು. ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜೇಂದ್ರ ಗಡಾದ ನಿರೂಪಿಸಿ, ವಂದಿಸಿದರು.