ಚುನಾವಣಾ ಮಾರ್ಗಸೂಚಿ ಬಗ್ಗೆ ಅರಿವು ಮುಖ್ಯ: ಡಿಸಿ ಡಾ.ಸುಶೀಲಾ

| Published : Feb 23 2024, 01:56 AM IST

ಸಾರಾಂಶ

ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣೆಗಾಗಿ ರಚಿಸಲಾದ ವಿವಿಧ ಅಧಿಕಾರಿಗಳ ತಂಡಗಳ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮುಂಬರುವ ಲೋಕಸಭಾ ಚುನಾವಣೆ ಘೋಷಿಸಿದ ತಕ್ಷಣ ಕಾರ್ಯಪ್ರವೃತ್ತರಾಗಿ, ಪಾರದರ್ಶಕ ಚುನಾವಣೆಗೆ ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಲೋಕಸಭಾ ಚುನಾವಣೆಗಾಗಿ ರಚಿಸಲಾದ ವಿವಿಧ ಅಧಿಕಾರಿಗಳ ತಂಡಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಬರುವ ಲೋಕಸಭಾ ಚುನಾವಣೆ ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂತೆ ಮುಂಚಿತವಾಗಿ ಚುನಾವಣಾ ಮಾರ್ಗಸೂಚಿಗಳ ಬಗ್ಗೆ ಅರಿವು ಹೊಂದಬೇಕು. ಮಾದರಿ ನೀತಿ ಸಂಹಿತೆ ಕುರಿತು ಸಂಪೂರ್ಣ ಜ್ಞಾನ ಹೊಂದಬೇಕು. ಚುನಾವಣಾ ಕಾಯ್ದೆ ಬಗ್ಗೆ ಜ್ಞಾನ ಹೊಂದಬೇಕು. ಈ ದಿಸೆಯಲ್ಲಿ ಇಂತಹ ತರಬೇತಿ ಸಹಕಾರಿಯಾಗಲಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಮಾತನಾಡಿ, ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ವಿವಿಧ ತಂಡಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಬೇಕು. ನೀತಿ ಸಂಹಿತೆಯು ಜಾರಿಯಾದ ತಕ್ಷಣ ಕ್ಷೇತ್ರ ಮಟ್ಟದ ತಮ್ಮ ಚಟುವಟಿಕೆ ಚುರುಕುಗೊಳ್ಳಲಿವೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರು, ಲೋಕಸಭಾ ಚುನಾವಣೆ ನೀತಿ ನಿಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಚುನಾವಣೆ ಮುಖ್ಯವಾಗಿವೆ. ಕಾರಣ ಎಲ್ಲ ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಎಫ್‌ಎಸ್‌ಟಿ, ಎಂಸಿಸಿ, ವಿಎಸ್‌ಟಿ, ವಿವಿಟಿ ಮತ್ತು ಇತರೆ ತಂಡಗಳು ಸರ್ವ ಸನ್ನದ್ಧಗೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಎ.ಆರ್.ಓ. ಗಳು ಇದ್ದರು.