ರೇಬಿಸ್‌ ರೋಗದ ಬಗ್ಗೆ ಜಾಗೃತಿ ಅಗತ್ಯ

| Published : Sep 30 2024, 01:23 AM IST

ಸಾರಾಂಶ

ದೊಡ್ಡಬಳ್ಳಾಪುರ : ರೇಬಿಸ್‌ ರೋಗದ ಕುರಿತು ಜಾಗೃತಿ ಅಗತ್ಯ ಎಂದು ತಾಲೂಕು ಮುಖ್ಯ ಪಶುವೈದ್ಯಾಧಿಕಾಧಿಕಾರಿ ಡಾ.ವಿಶ್ವನಾಥ್ ಹೇಳಿದರು.

ದೊಡ್ಡಬಳ್ಳಾಪುರ : ರೇಬಿಸ್‌ ರೋಗದ ಕುರಿತು ಜಾಗೃತಿ ಅಗತ್ಯ ಎಂದು ತಾಲೂಕು ಮುಖ್ಯ ಪಶುವೈದ್ಯಾಧಿಕಾಧಿಕಾರಿ ಡಾ.ವಿಶ್ವನಾಥ್ ಹೇಳಿದರು.

ಪಟ್ಟಣದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಪಶು ಆಸ್ಪತ್ರೆ ಹಾಗೂ ತಾಲೂಕಿನ ವಿವಿಧ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಶನಿವಾರ ಸಾಕುಪ್ರಾಣಿ ಮಾಲೀಕರಿಗೆ ರೇಬಿಸ್ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೇಬಿಸ್‌ಗೆ ಮೊದಲು ಲಸಿಕೆ ಕಂಡುಹಿಡಿದ ಲೂಯಿ ಪಾಶ್ಚರ್ ಮರಣ ಹೊಂದಿದ ದಿನವನ್ನು 2007ರಿಂದ ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ರೇಬಿಸ್ ಕುರಿತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಮೂಲ ಆಶಯವಾಗಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಸೆ.28 ರಂದು ರೇಬಿಸ್ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವರೇಬಿಸ್ ದಿನ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಸಾಕು ಪ್ರಾಣಿಗಳ ಕಡಿತದಿಂದಾಗಿ ಅದರಲ್ಲೂ ಹುಚ್ಚುನಾಯಿ ಕಡಿತದಿಂದಾಗಿಯೇ ಬರುವಂತಹ ರೇಬಿಸ್ ಕಾಯಿಲೆಯಿಂದ ಜಗತ್ತಿನಾದ್ಯಂತ ಬಹಳಷ್ಟು ಮಂದಿ ಸಾಯುತ್ತಿದ್ದಾರೆ. ಈ ದಿಸೆಯಲ್ಲಿ ಇಂದು ರಾಜ್ಯದಾದ್ಯಂತ ಪಶುಪಾಲನಾ ಇಲಾಖೆಯಿಂದ ಉಚಿತವಾಗಿ ರೇಬಿಸ್ ಲಸಿಕೆ ಹಾಕಲಾಗುತ್ತಿದೆ. ಸಾರ್ವಜನಿಕರು ಶ್ವಾನಗಳು ಸೇರಿದಂತೆ ಸಾಕುಪ್ರಾಣಿಗಳಿಗೆ ರೇಬಿಸ್ ಲಸಿಕೆ ಹಾಕಿಸುವ ಮೂಲಕ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು. ಡಾ.ವೈ.ಕುಮಾರಸ್ವಾಮಿ, ಡಾ.ದೀಪಕ್ ಉಪಸ್ಥಿತರಿದ್ದರು.