ಸಾರಾಂಶ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಗ್ಗೆ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೈಸೂರುಹೊಟೇಲ್ ಉದ್ಯಮ ಸೇವಾ ವಲಯದ ವ್ಯಾಪ್ತಿಗೆ ಬಂದರೂ ಸರಕು, ಸೇವಾ ತೆರಿಗೆ ಎರಡನ್ನೂ ಹಾಕಲಾಗುತ್ತಿತ್ತು. ಜಿಎಸ್ಟಿಯಿಂದ ಇದು ತಕ್ಕ ಮಟ್ಟಿಗೆ ಬಗೆಹರಿದಿದೆ. ಜಿಎಸ್ಟಿ ಜಾರಿಯಿಂದ ಹೊಟೇಲ್ ಉದ್ಯಮಕ್ಕೆ ಅನುಕೂಲವಾಗಿದೆ ಎಂದು ಎಂಟಿಆರ್ ಕಂ. ಚಾರ್ಟಡ್ಡ್ ಅಕೌಂಟೆಂಟ್ಸ್ ಪಾಲುದಾರ ಬಿ.ವಿ. ಮಹೇಶ್ ತಿಳಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಹೊಟೇಲ್ ಮಾಲೀಕರ ಸಂಘದಲ್ಲಿ ಮಂಗಳವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬಗ್ಗೆ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್ಟಿ ಕಾನೂನಿನ ಅರಿವು ಇದ್ದರೆ ಶೇ.90 ರಷ್ಟು ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ, ಹೆಚ್ಚಿನ ಮಂದಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ ಎಂದರು.ಅಧಿಕಾರಿಗಳು ಸೂಕ್ತ ದಾಖಲೆ ಇಲ್ಲದೇ ಏಕಾಏಕಿ ಜಿಎಸ್ಟಿ ಪರಿಶೀಲನೆಗೆ ಬರುವುದಿಲ್ಲ. ಐಎನ್ಎಸ್ -1 ಫಾರಂ ನೋಟಿಸ್ ನೀಡಿ ಮಾತ್ರ ಪರಿಶೀಲನೆ ನಡೆಸಬಹುದು. ಆದರೆ, ಇತ್ತೀಚೆಗೆ ಈ ರೀತಿಯ ಯಾವುದೇ ಸಿದ್ಧತೆ ಇಲ್ಲದೇ ಬರುತ್ತಿದ್ದಾರೆ. ಅದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಿದ್ದರೂ ನಾವು ಸೂಕ್ತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಣೆ ಮಾಡದ ಕಾರಣಕ್ಕೆ ಹೀಗೆ ಬರುವ ಅಧಿಕಾರಿಗಳಿಗೆ ಭಯಪಡುವಂತಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ಎಲ್ಲಾ ಪಾವತಿಗಳು ಆನ್ ಲೈನ್ ನಲ್ಲಿ ಕ್ಯೂಆರ್ ಕೋಡ್ ಮುಖಾಂತರ ನಡೆಯವುದರಿಂದ ಎಲ್ಲವೂ ಪಾರದರ್ಶಕವಾಗಿರುತ್ತದೆ. ಹೀಗಾಗಿ, ವ್ಯವಹಾರವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ದಾಖಲೆ ನಿರ್ವಹಣೆ ಮಾಡುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಎಷ್ಟೋ ಉದ್ಯಮಿಗಳಿಗೆ ಜಿಎಸ್ಟಿ ಪರವಾನಗಿ ಪಡೆಯಬೇಕು ಎನ್ನುವುದೇ ಗೊತ್ತಿರುವುದಿಲ್ಲ. ಹೊಟೇಲ್ ಬಾಡಿಗೆಗೆ ಜಿಎಸ್ಟಿ ಪಾವತಿಸುವ ಕುರಿತು ಅನೇಕ ಗೊಂದಲಗಳು ಇವೆ ಎಂದರು.
ಹೊಟೇಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಆರ್. ರವೀಂದ್ರ ಭಟ್, ಹೊಟೇಲ್ ಮಾಲೀಕರ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್. ತಂತ್ರಿ, ಚಾರ್ಟೆಡ್ ಅಕೌಂಟೆಂಟ್ ಗಳಾದ ಆದ ಪಿ.ಆರ್. ತೇಜಸ್ವಿನಿ ಮೊದಲಾದವರು ಇದ್ದರು.