ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಕಠಿಣವಾಗಿದ್ದು, ಗಂಭೀರ ಪರಿಣಾಮ ಬೀರುವಂತಹದಾಗಿದೆ. ದೂರಿಗೆ ಸಂಬಂಧಿಸಿ ವಾಸ್ತವಾಂಶಗಳನ್ನು ಪರ್ಯಾಲೋಚಿಸಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಹಾಗಾಗಿ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಅರಿವು ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹೊಂದಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ. ಸಲಹೆಗಾರ ನಿವೃತ್ತ ಐ.ಎ.ಎಸ್. ಅಧಿಕಾರಿ ಇ.ವೆಂಕಟಯ್ಯ ತಿಳಿಸಿದರು.ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಜಿಪಂ ಸಭಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನುಷ್ಠಾನ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ದೌರ್ಜನ್ಯ ಪ್ರಕರಣಗಳು ಸಾಮಾನ್ಯವಾಗಿ ತಡವಾಗಿ ಬೆಳಕಿಗೆ ಬರಲಿವೆ. ದೌರ್ಜನ್ಯ ನಡೆದಾಗ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆದರೆ, ದೌರ್ಜನ್ಯ ಪ್ರಕರಣಗಳಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸುವುದರಿಂದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಇದೆ. ಕೆಲವು ಪ್ರಕರಣಗಳಲ್ಲಿ ಆರೋಪಿ ವಿಚಾರಣಾಧೀನ ಕೈದಿಯಾಗಿದ್ದಾನೆ. ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಬೇಕು ಎಂದವರು ತಿಳಿಸಿದರು. ಸಾರ್ವಜನಿಕರಿಂದ ದೂರು ಬಂದರೆ ದಾಖಲಿಸಿಕೊಂಡು ಕೂಡಲೇ ತನಿಖೆ ಕೈಗೊಳ್ಳಬೇಕು. ಒಂದು ವೇಳೆ ದೌರ್ಜನ್ಯ ಪ್ರಕರಣದಲ್ಲಿ ಅಧಿಕಾರಿಗಳು ವಿಳಂಬ ತೋರಿದರೆ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪವಾಗಲಿದ್ದು, ಅಂತಹವರ ವಿರುದ್ಧ ಕ್ರಮವಾಗಬಹುದು ಎಂದು ಹೇಳಿದರು.ಪ್ರಕರಣಗಳ ತನಿಖೆ ಚುರುಕುಗೊಳಿಸಿ:
ರಾಜ್ಯದಲ್ಲಿ ಪ್ರತಿ ವರ್ಷ ಅಂದಾಜು 2000 ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ 80ಕ್ಕೂ ಅಧಿಕ ಕೊಲೆ, 200ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳಿವೆ. ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕೆಂದರೆ ಪ್ರಕರಣಗಳ ತನಿಖೆಗಳು ಚುರುಕಾಗಿ ಸಾಗಬೇಕು. ದೌರ್ಜನ್ಯ ತಡೆಗೆ ಎಲ್ಲ ಅಧಿಕಾರಿಗಳು ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ದೌರ್ಜನ್ಯ ಪ್ರಕರಣಗಳಲ್ಲಿ ಸಹ ಪರಿಹಾರ ವಿತರಣೆಯಲ್ಲಿ ವಿಳಂಬ ತೋರಬಾರದು. ಜಾತಿನಿಂದನೆ, ಧಾರ್ಮಿಕ ಕ್ಷೇತ್ರ, ದೇವಸ್ಥಾನ, ಪೂಜಾ ಸ್ಥಳಗಳಲ್ಲಿ ಪ್ರವೇಶ ನಿರ್ಬಂಧ, ಧಾರ್ಮಿಕ ಸೇವೆ ಮಾಡುವುದನ್ನು ತಡೆಯುವುದು. ಕೆರೆ, ಬಾವಿ, ಕೊಳವೆ ನೀರು ಬಳಕೆಗೆ ನಿಷೇಧ ಹೇರುವ ದೂರುಗಳು ಕಂಡು ಬಂದಲ್ಲಿ ತಕ್ಷಣವೇ ಅಂತಹವರ ವಿರುದ್ಧ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 130 ರಿಂದ 140 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಯಾವುದೇ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಶಿಕ್ಷೆ ಆಗಿಲ್ಲ. ಹೀಗಾಗಿ ತನಿಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನಷ್ಟು ಇಂತಹ ಅರಿವು ಕಾರ್ಯಗಾರಗಳು ಆಯೋಜಿಸುವ ಅವಶ್ಯಕತೆಯಿದೆ ಎಂದು ಹೇಳಿದರು.ಸರ್ಕಾರಿ ಅಭಿಯೋಜಕ ಆರ್.ಜಿ ದೇವರೆಡ್ಡಿ, ಬೆಳಗಾವಿ ನಿವೃತ್ತ ಸರ್ಕಾರಿ ಅಭಿಯೋಜಕ ಎಂ.ಎಲ್ ಕುಲಕರ್ಣಿ ಅವರು, ದೌರ್ಜನ್ಯ ನಿಯಂತ್ರಣ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಸವಾಲುಗಳು, ಅಸ್ಪ್ರಶ್ಯತೆ ನಿವಾರಣೆಯಲ್ಲಿ ಅಧಿಕಾರಿಗಳ ಪಾತ್ರ ಹಾಗೂ ಸರ್ವ ಸಮುದಾಯಗಳ ಜವಾಬ್ದಾರಿ, ಜಿಲ್ಲೆಯಲ್ಲಿ ಪ್ರಸ್ತುತ ದೌರ್ಜನ್ಯ ನಿಯಂತ್ರಣ ಪ್ರಕರಣಗಳ ಕುರಿತು ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು.ಕರಪತ್ರ ಬಿಡುಗಡೆ:ಇದಕ್ಕೂ ಮುಂಚೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ನಿವೃತ್ತ ಐಎಎಸ್ ಅಧಿಕಾರಿ ಇ.ವೆಂಕಟಯ್ಯ ಅವರು ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989, ನಾಗರಿಕ ಹಕ್ಕು ಸಂರಕ್ಷಣೆ ಅಧಿನಿಯಮ-1955, ಮ್ಯಾನ್ಯುವಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಅಧಿನಿಯಮ-2013 ಮಾಹಿತಿಯಿರುವ ಮಾನವ ಕುಲಂ ತಾನೊಂದೇ ವಲಂ ಎಂಬ ಕರಪತ್ರ ಬಿಡುಗಡೆ ಮಾಡಿದರು.ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ದೌರ್ಜನ್ಯ ನಿಯಂತ್ರಣ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಕರೆಪ್ಪಗುಡೆನ್ನವ, ಬಸವರಾಜ ಆಯಟ್ಟಿ, ಉಪವಿಭಾಗಿಯ ನಾಮನಿರ್ದೇಶಿತ ಸದಸ್ಯರು, ಎಲ್ಲ ತಹಸೀಲ್ದಾರಗಳು, ಪೊಲೀಸ್ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.