ಬಾಲಕಾರ್ಮಿಕ ಪದ್ಧತಿ ತಡೆಗೆ ಜಾಗೃತಿ ಅವಶ್ಯ: ಡಾ.ನರಸಪ್ಪಾ

| Published : Jun 14 2024, 01:08 AM IST

ಬಾಲಕಾರ್ಮಿಕ ಪದ್ಧತಿ ತಡೆಗೆ ಜಾಗೃತಿ ಅವಶ್ಯ: ಡಾ.ನರಸಪ್ಪಾ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ನಗರದ ಆರ್ ವಿ ಬಿಡಪ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿದೇರ್ಶಕರಾದ ಡಾ. ನರಸಪ್ಪಾ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬಾಲಕಾರ್ಮಿಕ ಪದ್ಧತಿ ಸಮಾಜದ ದೊಡ್ಡ ಪಿಡುಗಾಗಿದ್ದು ಅದನ್ನು ತಡೆಯಲು ಸಾರ್ವಜನಿಕರಲ್ಲಿ ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿದೇರ್ಶಕರಾದ ಡಾ. ನರಸಪ್ಪಾ ಹೇಳಿದರು.

ನಗರದ ಆರ್ ವಿ ಬಿಡಪ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ನಿಮಿತ್ತ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016ರ ಕುರಿತು ವಿವರಿಸಿ ಸಮಾಜದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕಿದೆ. ಶಿಕ್ಷಣ ಇಲಾಖೆ ಮಾತ್ರ ಕಾರ್ಯಕ್ರಮ ಹಮ್ಮಿಕೊಂಡರೆ ಸಾಲದು ಅದಕ್ಕೆ ಪಾಲಕರು ಸಹ ಕೈ ಜೋಡಿಸಬೇಕು ಎಂದು ಹೇಳಿದರು.

ಸಾರ್ವಜನಿಕರು ಎಲ್ಲರೂ ಇದು ತಮ್ಮ ಕೆಲಸ ಎಂದು ಭಾವಿಸಿ ಬಾಲಕಾರ್ಮಿಕ ಮಕ್ಕಳನ್ನು ತಡೆಯುವ ಕೆಲಸ ಮಾಡಬೇಕು. ಶಿಕ್ಷಣದಿಂದ ವಂಚಿತರಾಗಿ ಬೇರೆ ಬೇರೆ ಕೆಲಸಗಳಿಗೆ ತೊಡಗಿರುವ ಬಾಲಕಾರ್ಮಿಕರು ಕಂಡು ಬಂದಲ್ಲಿ ಪ್ರಕರಣ ದಾಖಲಿಸಬೇಕು. ಪ್ರತಿಯೊಬ್ಬ ನಾಗರಿಕನು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದ್ದಲ್ಲಿ ಬೀದರ್‌ ಜಿಲ್ಲೆಯನ್ನು ಮುಂದಿನ ದಿನಗಳಲ್ಲಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯಾಗಿ ಮಾಡಬಹುದು ಎಂದರು.

ಡಾ. ಜಯಶ್ರೀ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ದುಡಿಮೆ ದೂರ ಮಾಡಿ, ಕಡ್ಡಾಯ ಶಿಕ್ಷಣ ನೀಡಿ ಶಾಲೆಗೆ ಕಳುಹಿಸಬೇಕೆಂದ ಅವರು ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜೊತೆಗೆ ಶಾಲೆಯಲ್ಲಿ ಒಳ್ಳೆಯ ವಾತಾವಾರಣ ಇರಬೇಕು ಎಲ್ಲ ಸೌಕರ್ಯಗಳನ್ನು ನೀಡಬೇಕಾಗುತ್ತದೆ ಹಾಗೂ ಮೂಲಭೂತ ಸೌಕರ್ಯಗಳು ಕೊಡುವುದರಿಂದ ಶಾಲೆಯನ್ನು ಬಿಟ್ಟು ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮುನಿಯಪ್ಪ ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಮಗು ಶಿಕ್ಷಣ ಪಡೆದು ಉತ್ತಮವಾಗಿ ಜೀವಿಸುವ ಹಕ್ಕಿದೆ. ಬಾಲಕಾರ್ಮಿಕ ಪದ್ಧತಿ ನಿವಾರಣೆ ಆಗಬೇಕಾದರೆ ಎಲ್ಲ ಮಕ್ಕಳಿಗೆ ಶಿಕ್ಷಣ ಅವಶ್ಯ. ಮಕ್ಕಳು ಉನ್ನತವಾಗಿ ಬೆಳೆಯಲು ಸಹ ಶಿಕ್ಷಣ ಬೇಕು. ಎಲ್ಲಿಯಾದರೂ ಬಾಲಕಾರ್ಮಿಕರು ಕಂಡುಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ 1098 ಹಾಗೂ 112ಗೆ ಕರೆ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರಿಗೆ ತಿಳಿಸಬೇಕು ಎಂದರು.

ಸಹಾಯಕ ಪ್ರಾಧ್ಯಾಪಕ ಡಾ. ಗಣಪತಿ ಟಿ. ಹಿರಿಯ ಪ್ರಾಧ್ಯಪಕರಾದ ಪ್ರೋ.ಆರ್ ವಿ ಗೌಡ, ದೈಹಿಕ ನಿರ್ದೇಶಕರಾದ ಪ್ರಕಾಶ ಭೂರೆ ಮತ್ತು ರಮೇಶ ಹಂಗರ್ಗಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.