ಚಿಂತನ ಶಕ್ತಿ ಬೆಳೆಸಿಕೊಳ್ಳುವ ಮೂಲಕ ನಿರಂತರವಾಗಿ ಬರುವ ಸವಾಲು ಎದುರಿಸುವ ಶಕ್ತಿ ನೀಡುವುದೆ ಶಿಕ್ಷಣ, ಮೂಢನಂಬಿಕೆಯಿಂದ ಹೊರಬರಬೇಕು.
ಹೊಸಪೇಟೆ: ಇಂದಿನ ಯುವ ಪೀಳಿಗೆಗೆ ನಮ್ಮ ಇತಿಹಾಸ, ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವು ಅತ್ಯಂತ ಅವಶ್ಯಕವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ವೈ. ಸೋಮಶೇಖರ್ ಹೇಳಿದರು.
ಸ್ಥಳೀಯ ಉಗಮದೇವಿ ಭವರಲಾಲ್ ನಾಹರ್ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ನಡೆದ ಚಿಂತನ ಭಾರತಿ ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆ ಹಾಗೂ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.ಚಿಂತನ ಶಕ್ತಿ ಬೆಳೆಸಿಕೊಳ್ಳುವ ಮೂಲಕ ನಿರಂತರವಾಗಿ ಬರುವ ಸವಾಲು ಎದುರಿಸುವ ಶಕ್ತಿ ನೀಡುವುದೆ ಶಿಕ್ಷಣ, ಮೂಢನಂಬಿಕೆಯಿಂದ ಹೊರಬರಬೇಕು. ವೈಜ್ಞಾನಿಕ ವೈಚಾರಿಕ ಚಿಂತನೆ ಶಿಕ್ಷಣ ಕೊಡಬೇಕು, ಕನಸು ಕಾಣಬೇಕು. ಗುರಿ ನಿಗದಿಪಡಿಸಿಕೊಂಡು ಗುರಿ ಸಾಧನೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾಲೇಜು ಜಂಟಿ ಕಾರ್ಯದರ್ಶಿ ಅಶೋಕ್ ಜೀರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಕೇವಲ ಪಠ್ಯಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಹಾಗೂ ಎಲ್ಲ ರಂಗದಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ಚಿಂತನ ಭಾರತಿ ವೇದಿಕೆಯು ವಿದ್ಯಾರ್ಥಿನಿಯರ ಪ್ರತಿಭೆಗೆ ಸೂಕ್ತ ವೇದಿಕೆಯಾಗಲಿದೆ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ಚಿಂತನ ಭಾರತಿ 2026-27ನೇ ಶೈಕ್ಷಣಿಕ ಸಾಲಿಗೆ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಗಣ್ಯರಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಂಬಾನಹಳ್ಳಿ ಸತ್ಯನಾರಾಯಣ, ಕಾರ್ಯದರ್ಶಿ ಭೂಪಾಲ್ ಪ್ರಹ್ಲಾದ್ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಹಳೆಯ ವಿದ್ಯಾರ್ಥಿನಿಯರು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ಡಾ. ಅನಸೂಯಾ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಪಾಲಕಿ ಸುಜಾತ ಡಿ.ಎನ್ ವಂದಿಸಿದರು, ಅಮೃತ ಕುಮಾರ ಎಂ. ನಿರೂಪಿಸಿದರು.