ಸಾರಾಂಶ
ಧಾರವಾಡ:
ಶತಮಾನೋತ್ತರ ಇತಿಹಾಸ ಹೊಂದಿರುವ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ತನ್ನ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸಿದ್ದು, ಅದರ ಭಾಗವಾಗಿ ಮಾ. 17ರಂದು ಬೀದರ್ ಜಿಲ್ಲೆಯ ಭಾಲ್ಕಿಯ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದ ಆವರಣದಲ್ಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಆಯೋಜಿಸಿದೆ.ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಂಘವು ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಹಭಾಗಿತ್ವದಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಕನ್ನಡದ ಜಾಗೃತಿಯ ಈ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಮಾ. 17ರ ಬೆಳಗ್ಗೆ 10ಕ್ಕೆ ಬೀದರನ ಮಾಂಜ್ರಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ ಉದ್ಘಾಟಿಸಲಿದ್ದು ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಶಿಧರ ಕೋಸಂಬೆ, ಬಸವರಾಜ ಹೂಗಾರ, ಡಾ. ಲಿಂಗರಾಜ ಅಂಗಡಿ, ಮೋಹನ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಗಳಿವು:ಗಡಿಯಲ್ಲಿ ಕನ್ನಡ ಕಟ್ಟಿದ ಭಾಲ್ಕಿ ಹಿರೇಮಠ ಸಂಸ್ಥಾನ ವಿಷಯ ಕುರಿತು ಮೊದಲ ಗೋಷ್ಠಿ ನಡೆಯಲಿದ್ದು, ಮಲ್ಲಮ್ಮ ಪಾಟೀಲ ವಿಷಯ ಮಂಡಿಸಲಿದ್ದಾರೆ. ಇದಕ್ಕೆ ನಾಗಭೂಷಣ ಮಾಮಡಿ, ಗಣಪತಿ ಭೂರೆ, ರಾಜು ಜುಬರೆ ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದು, ಡಾ. ಸೋಮನಾಥ ನುಚ್ಚಾ ಅಧ್ಯಕ್ಷತೆ ವಹಿಸುವರು. ಬೀದರ್: ಸಾಹಿತ್ಯ ಮತ್ತು ಸಂಸ್ಕೃತಿ ವಿಷಯ ಕುರಿತು 2ನೇ ಗೋಷ್ಠಿಯಲ್ಲಿ ಅಕ್ಕಲಕೋಟ ಸಾಹಿತಿ ಡಾ. ಗುರುಲಿಂಗಪ್ಪ ಧಬಾಲೆ ವಿಷಯ ಮಂಡಿಸಲಿದ್ದಾರೆ. ಇದಕ್ಕೆ ಡಾ. ಬಸವರಾಜ ಬಲ್ಲೂರ, ಬಸವರಾಜ ಪ್ರಭಾ, ಶಿವಪ್ರಕಾಶ ಕುಂಬಾರ ಪ್ರತಿಕ್ರಿಯೆ ನೀಡಲಿದ್ದು, ಡಾ. ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸುವುರು ಎಂದು ಶಂಕರ ಹಲಗತ್ತಿ ಹೇಳಿದರು.ಬೀದರ್ ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಕವಿ ಎಸ್.ಎಸ್. ಚಿಕ್ಕಮಠ ಚಾಲನೆ ನೀಡಲಿದ್ದಾರೆ. ಕೀರ್ತಿಲತಾ ಹೊಸಾಳೆ, ಸುಜಾತಾ ಹಡಗಲಿ, ಮಹಾದೇವಿ ಗೋಖಲೆ, ಜಗದೇವಿ ದುಬಲಗುಂಡೆ ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಲಿದ್ದಾರೆ. ಇದಾದ ಬಳಿಕ ಸಂಜೆ 6ಕ್ಕೆ ಸಮಾರೋಪ ಜರುಗಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸಹ ಕಾರ್ಯದರ್ಶಿ ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡಿನ ಸೇರಿದಂತೆ ಹಲವರು ಇದ್ದರು.ಜೂನ್‌ನಲ್ಲಿ ಹೊರನಾಡ ಮೇಳ...
ಜೂನ್ ತಿಂಗಳಲ್ಲಿ ಆಂಧ್ರಪ್ರದೇಶದ ಆಧೋನಿಯಲ್ಲಿ ಹೊರನಾಡ ಕನ್ನಡ ಸಮ್ಮೇಳನಕ್ಕೆ ಸಿದ್ಧತೆ ನಡೆದಿದ್ದು, ಇದರೊಂದಿಗೆ ಮಾರ್ಚ್, ಏಪ್ರಿಲ್, ಮೇ ಸೇರಿದಂತೆ ಬರುವ ದಿನಗಳಲ್ಲಿ ಯುವ ಸಮ್ಮೇಳನ, ಹೊಸ ಹೆಜ್ಜೆ ಹೆಸರಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘವು ಆಯೋಜಿಸಿದೆ. ಸಂಘಕ್ಕೆ ಐದು ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡುವುದರ ಬಗ್ಗೆಯೂ ಸಂಘವು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಶಂಕರ ಹಲಗತ್ತಿ ತಿಳಿಸಿದರು.