ಸಾರಾಂಶ
ರಟ್ಟೀಹಳ್ಳಿ: ಪ್ರಸ್ತುತ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಯಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ರಟ್ಟೀಹಳ್ಳಿ ಪಿಎಸ್ಐ ರಮೇಶಕುಮಾರ ಮನವಿ ಮಾಡಿದರು.ಪಟ್ಟಣದ ಶ್ರೀ ಕುಮಾರೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನರಲ್ಲಿ ಕಾನೂನಿನ ಬಗ್ಗೆ ಅರಿವು ಬಹುಮುಖ್ಯ. ಆ ಮೂಲಕ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಅಕ್ರಮದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಅಂತಹ ಪ್ರಕರಣಗಳನ್ನು ತಡೆಗಟ್ಟಲು ಶಾಲಾ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದರು.
ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ದುಷ್ಚಟಗಳತ್ತ ವಾಲುತ್ತಿದ್ದು, ತಮ್ಮ ಭವಿಷ್ಯಕ್ಕೆ ತಾವೇ ಕೊಳ್ಳಿ ಇಟ್ಟುಕಳ್ಳುತ್ತಿದ್ದಾರೆ. ಅದರ ಪರಿಣಾಮವಾಗಿ ಅಪರಾಧ ಸಂಖ್ಯೆಗಳೂ ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದು, ಇದನ್ನೆ ಬಂಡವಾಳ ಮಾಡಿಕೊಂಡು ಕೆಲ ಮೊಬೈಲ್ ಆ್ಯಪ್‌ಗಳು ಮಕ್ಕಳ ಖಾಸಗಿ ಮಾಹಿತಿ ಕದ್ದು ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುವಂತ ಪ್ರಕರಣಗಳು ದಿನನಿತ್ಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತಿದ್ದರೂ ವಿದ್ಯಾರ್ಥಿಗಳು ಜಾಗೃತರಾಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದರು. ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಆದಷ್ಟು ಮೊಬೈಲ್‌ಗಳಿಂದ ದೂರವಿರಲು ಸಲಹೆ ನೀಡಿ ನೀಡಿದರು.18 ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಅಪರಾಧ. ಅಂತಹ ವಿದ್ಯಾರ್ಥಿಗಳ ಮತ್ತು ಪೋಷಕರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ಶಾಲಾ ಆಡಳಿತ ಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ವಿದ್ಯಾರ್ಥಿಗಳು ಯಾವುದೇ ತೊಂದರೆಗೆ ಒಳಗಾದಲ್ಲಿ ಅದನ್ನು ಮುಚ್ಚಿಡದೆ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಇಲಾಖೆಯೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಸಾರ್ವಜನಿಕರು ಯಾವುದೇ ಭಯವಿಲ್ಲದೆ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹೊಂದಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು.ಪ್ರಾಚಾರ್ಯ ಎಸ್.ಬಿ. ಬೆನಕೊಂಡ, ಎಚ್.ವಿ. ಪ್ರಕಾಶ, ಗೀತಾ ರೋಗಣ್ಣನವರ, ಎಂ.ಎನ್. ನಂದೀಹಳ್ಳಿ, ಚೇತನ್ ಅಂಗರಗಟ್ಟಿ, ದ್ವಿತೀಯ ದರ್ಜೆ ಸಹಾಯಕಿ ರಾಜೇಶ್ವರಿ ಮುಂತಾದವರು ಇದ್ದರು.