ಮತದಾನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ: ಪನ್ವಾರ

| Published : Mar 22 2024, 01:03 AM IST

ಸಾರಾಂಶ

ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಸ್ವೀಪ್ ಚಟುವಟಿಕೆ ಹಮ್ಮಿಕೊಳ್ಳುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಲೋಕಸಭಾ ಚುನಾವಣೆ-2024ರ ಹಿನ್ನೆಲೆ ಕಡಿಮೆ ಪ್ರಮಾಣದ ಮತದಾನ ಇರುವ ಕಡೆ ಸ್ವೀಪ್ ಕಾರ್ಯ ಚಟುವಟಿಕೆ ಅಂಗವಾಗಿ ಜಿಲ್ಲೆಯ ಗ್ರಾಪಂ ಹಾಗೂ ಹೋಬಳಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಗರಿಮಾ ಪನ್ವಾರ್ ತಿಳಿಸಿದ್ದಾರೆ.

ನಗರದ ಜಿಪಂ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಸ್ವೀಪ್ ಚಟುವಟಿಕೆ ಹಮ್ಮಿಕೊಳ್ಳುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯ 16 ಹೋಬಳಿ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪುಗಳ ಮೇಳ ಆಯೋಜಿಸಿ ಮತದಾನ ಕುರಿತು ಜಾಗೃತಿ ಮೂಡಿಸಲು, ಅದರಂತೆ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಜಾಥಾ, ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳು ವಿವಿಧ ಕಾರ್ಯ ಚಟುವಟಿಕೆಗಳ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಿದರು.

ಎಸ್‌ಎಚ್‌ಜಿ ಮೇಳಗಳಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳಬೇಕು. ವಿವಿಧ ಮಳಿಗೆಗಳ ಸ್ಥಾಪನೆ, ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಮಕ್ಕಳ ಮೂಲಕ ತಮ್ಮ ಪಾಲಕರಿಗೆ ಮತದಾನ ಮಾಡುವ ಮನವಿ ಕುರಿತ ಸಂಕಲ್ಪ ಪತ್ರ ಬರೆಯಿಸಲು, ಅದರಂತೆ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಂದ ಸೂಕ್ತ ಮತದಾನದ ಕುರಿತು ಜಾಗೃತಿ ಸೇರಿ ಜಿಲ್ಲಾ ವಿಶೇಷ ರಾಯಭಾರಿ ಆಹ್ವಾನಿಸಿ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ ಎಂದರು.

ಅದರಂತೆ ನರೇಗಾ ಕಾಮಗಾರಿ ವ್ಯಾಪ್ತಿಗಳಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ, ಗ್ರಾಮೀಣ ಕ್ರೀಡೆಗಳ ಮೂಲಕ ಮತದಾನ ಜಾಗೃತಿ, ಬೈಕ್, ಸೈಕಲ್, ಆಟೋ, ರ‍್ಯಾಲಿ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಗೋಡೆಬರಹ, ಸಾಂಸ್ಕೃತಿಕ ಕಾರ್ಯಕ್ರಮ, ಯುವ ಮತದಾರರ ನಿರ್ವಹಣಾ ಮತದಾನ ಕೇಂದ್ರ ಸ್ಥಾಪನೆ, ಪಾರಂಪರಿಕ ಮತದಾನ ಕೇಂದ್ರಗಳ ಸ್ಥಾಪನೆ- ನಿರ್ವಹಣೆ ಹೋಬಳಿ, ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲು ಉದ್ದೇಶಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಆಯಾ ಇಲಾಖೆ ವ್ಯಾಪ್ತಿಯಲ್ಲಿ ನೀಡಲಾದ ಜವಾಬ್ದಾರಿಗಳನ್ನು ನಿರ್ವಹಿಸಲು ಸನ್ನದ್ಧರಾಗಿ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಸ್ವಚ್ಛತಾ ವಾಹಿನಿಗಳ ಮೂಲಕ ಮತದಾನ ಮಾಡುವ ಕುರಿತು ಜಿಂಗಲ್ಸ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಪ್ರತಿ ಬಸ್ ನಿಲ್ದಾಣಗಳಲ್ಲಿ ಜಿಂಗಲ್ಸ್ ಮೂಲಕ ಅರಿವು, ಪ್ರತಿ ಸರ್ಕಾರಿ ಕಚೇರಿ ವ್ಯಾಪ್ತಿಯಲ್ಲಿ ಪ್ರತಿ ಪತ್ರಗಳ ಮೇಲೆ ಮತದಾನ ಮಹತ್ವ ಕುರಿತು ಮೊಹರು ಹಾಕುವ ಉದ್ದೇಶ ಸಹ ಹೊಂದಲಾಗಿದೆ ಎಂದು ತಿಳಿಸಿದ ಅವರು ಸ್ವೀಪ್ ಚಟುವಟಿಕೆಗಳಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸುವಂತೆ ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.