ನೂತನ ಕಾನೂನುಗಳ ಬಗ್ಗೆ ವೆಬಿನಾರ್‌ ಮೂಲಕ ಅರಿವು ಕಾರ್ಯಕ್ರಮ

| Published : Jul 09 2024, 12:46 AM IST

ನೂತನ ಕಾನೂನುಗಳ ಬಗ್ಗೆ ವೆಬಿನಾರ್‌ ಮೂಲಕ ಅರಿವು ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜುಲೈ 1ರಿಂದ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ಸುರಕ್ಷಾ ಅಧಿನಿಯಮ-2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ-2023 ಅರಿವು ಕಾರ್ಯಕ್ರಮವನ್ನು ಮಂಗಳೂರು ನಗರದ ಜಿಲ್ಲಾ ಪಂಚಾಯತ್ ಸ್ಟುಡಿಯೋದಲ್ಲಿ ಸೋಮವಾರ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಜುಲೈ 1ರಿಂದ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ಸುರಕ್ಷಾ ಅಧಿನಿಯಮ-2023 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ-2023 ಅರಿವು ಕಾರ್ಯಕ್ರಮ ಏರ್ಪಡಿಸಲಾಯಿತು. ನಗರದ ಜಿಲ್ಲಾ ಪಂಚಾಯತ್ ಸ್ಟುಡಿಯೋದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಪಂಚಾಯಿತಿ ಸದಸ್ಯರು, ಸಖಿ, ಸಾಂತ್ವನ ಕೇಂದ್ರದ ಸಿಬ್ಬಂದಿಗಳು, ವಿವಿಧ ಇಲಾಖೆಗಳ ವಸತಿ ನಿಲಯ ಹಾಗೂ ವಸತಿ ಶಾಲೆಗಳ ನಿಲಯಪಾಲಕರು, ಶಿಕ್ಷಕರು ಮುಂತಾದವರಿಗೆ ವೆಬಿನಾರ್ ಮೂಲಕ ಅರಿವು ಕಾರ್ಯಕ್ರಮವನ್ನು ಜಿಲ್ಲೆಯ 500 ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಯಿತು, ಸುಮಾರು 9,000 ಮಂದಿ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವಕೀಲ ಶುಕರಾಜ್ ಎಸ್. ಕೊಟ್ಟಾರಿ ಅವರು ಭಾರತೀಯ ನ್ಯಾಯ ಸಂಹಿತೆ -2023ರ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವಕೀಲರಾಗಿರುವ ಶ್ರೀಧರ ಎಣ್ಮಕಜೆ ಅವರು ಭಾರತೀಯ ಸುರಕ್ಷಾ ಅಧಿನಿಯಮ-2023ರ ಕುರಿತು ಬೆಳಕು ಚೆಲ್ಲಿದರು. ನ್ಯಾಯವಾದಿ ಪ್ರಥ್ವಿರಾಜ್ ಶೆಟ್ಟಿ ಅವರು ಭಾರತೀಯ ಸಾಕ್ಷ್ಯ ಅಧಿನಿಯಮ -2023ರ ಕುರಿತು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಕೆ.ಎಂ. ವಂದಿಸಿದರು. ಜಿಲ್ಲಾ ನಿರೂಪಣಾಧಿಕಾರಿ ಕುಮಾರ್ ಎಸ್. ಇದ್ದರು.