ಸಾರಾಂಶ
19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆಕನ್ನಡ ಹಬ್ಬದ ಬಗ್ಗೆ ಉದಾಸೀನ ಭಾವನೆ ಕನ್ನಡಿಗರಲ್ಲಿ ಬರಬಾರದು. ಕನ್ನಡವನ್ನು ಬೆಳೆಸುವ ಪರಿ ಬಿಟ್ಟು ಕನ್ನಡವನ್ನು ಪ್ರತಿನಿತ್ಯ ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಪ್ರತಿಪಾದಿಸಿದರು.
ಪಟ್ಟಣದ ಅಡ್ಯಂತಾಯ ರಂಗಮಂದಿರದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ನಡೆದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ನಾಡಿಗೆ ಶ್ರಮಿಸಿದ ಮಹನೀಯರ ಚರಿತ್ರೆ ಮರೆಯುತ್ತಿದ್ದೇವೆ. ಹಾಗಾಗಿ ಸಮ್ಮೇಳನ ನಡೆಸುವಾಗ ಶಿಕ್ಷಕ ವೃತ್ತಿಗೆ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಕರೆ ತರಬೇಕು. ಅವರ ಮೂಲಕ ಕನ್ನಡ ಭಾಷೆ, ನೆಲ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಮುಂದಿನ ತಲೆಮಾರು ಕನ್ನಡದ ರಥ ಮುಂದೆ ಕೊಂಡೊಯ್ಯಲು ಸಾಧ್ಯವೆಂದು ಹೇಳಿದರು.ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ಮಾತನಾಡಿ, ಕನ್ನಡದ ವಾತಾವರಣ ಸೃಷ್ಟಿಸುವ ಕಾರ್ಯ ಸರ್ಕಾರ ಮಾಡುವುದಿಲ್ಲ. ಅದನ್ನು ನಮ್ಮ ಮನೆ ಮನದಲ್ಲಿ ಮೂಡಿಸಿಕೊಳ್ಳಬೇಕು. ಶಿಕ್ಷಣ, ಆಡಳಿತ ಮತ್ತು ಪ್ರತಿನಿತ್ಯದ ಆಡು ಭಾಷೆ ಯಲ್ಲಿ ಆಂಗ್ಲ ಪ್ರಭಾವ ಹೆಚ್ಚುತ್ತಿದೆ. ಶಿಕ್ಷಣ ಹಾಗೂ ಆಡಳಿತ ಯಂತ್ರ ಕಡ್ಡಾಯವಾಗಿ ಕನ್ನಡ ಬಳಸುವಂತಾಗಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆ ಹಾಗೂ ಯಶಸ್ಸು ಕಂಡಿರುವ ಬಗ್ಗೆ ಆಂಗ್ಲ ವ್ಯಾಮೋಹಿಗಳಿಗೆ ಅರಿವಾಗುವಂತೆ ಜಾಗೃತಿ ಮೂಡಿಸಬೇಕು. ಕನ್ನಡ ಮಾಧ್ಯಮ ತರಗತಿ ಕಡ್ಡಾಯವಾಗಿ ನಡೆಸಲು ಪರಿಷತ್ತು ಸರಕಾರದೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕು. ಕನ್ನಡ ಭಾಷೆ, ನೆಲ, ಜಲದ ವಿಚಾರಕ್ಕೆ ಕಂಟಕ ಬಂದಾಗ ಸಿಡಿದೇಳಬೇಕು. ಆಗ ಮಾತ್ರ ಕನ್ನಡ ಭಾಷೆ ಉಳಿಸಲು ಸಾಧ್ಯ ಎಂದು ಹೇಳಿದರು. ಆದಿ ಚುಂಚನಗಿರಿ ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ಕೆ.ಸುಬ್ಬರಾಯ ಕನ್ನಡ ಸಿರಿ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿ, ವಿದೇಶಗಳಲ್ಲಿರುವ ಕನ್ನಡಿಗರು ಅಕ್ಕ ಸಮ್ಮೇಳನ ನಡೆಸುವ ಮೂಲಕ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿರುವ ಕನ್ನಡಿಗರು ಕನ್ನಡ ಭಾಷೆ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಡಾ.ಶರತ್ ಅನಂತಮೂರ್ತಿ, ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಾಹಿತ್ಯದ ಬಾಂಧವ್ಯ ನಮ್ಮಲ್ಲಿರಬೇಕು. ಕಂಪ್ಯೂಟರ್ ಯುಗದಲ್ಲಿ ಕನ್ನಡದ ತಂತ್ರಾಂಶ ಬಳಕೆಯಾಗಬೇಕು. ಪರ ಭಾಷೆ ಗೌರವಿಸಬೇಕು. ಆದರೆ ಕನ್ನಡ ಭಾಷೆ, ನೆಲ, ಜಲ ಪ್ರೀತಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಎಚ್.ಎಂ.ಶಾಂತಕುಮಾರ್, ಶೃಂಗೇರಿ ಸುಬ್ಬಣ್ಣ, ಕಾರ್ಯಾಧ್ಯಕ್ಷ ಬಿ.ಎಸ್.ಜಯರಾಂ, ಕೋಶಾಧ್ಯಕ್ಷ ಜೆ.ಎಸ್.ರಘು, ಮಂಚೇಗೌಡ, ಗಣೇಶ್ ಮಗ್ಗಲಮಕ್ಕಿ, ಲತಾ ರಾಜಶೇಖರ್, ಶಂಕರ ನಾರಾಯಣ್ ಇದ್ದರು.
31 ಕೆಸಿಕೆಎಂ 2ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ಹಾಗೂ ಅವರ ಪತ್ನಿ ಜಯಶ್ರೀ ರಮೇಶ್ ಅವರನ್ನು ಗೌರವಿಸಲಾಯಿತು.