ಈದ್ಗಾ ಮೈದಾನದಲ್ಲಿ ಅಯೋಧ್ಯೆಯ ಶ್ರೀರಾಮ!

| Published : Sep 06 2024, 01:02 AM IST

ಸಾರಾಂಶ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಈ ಬಾರಿ ಅಯೋಧ್ಯೆಯ ಶ್ರೀರಾಮಚಂದ್ರ ಪ್ರಭುವಿನ ರೂಪದಲ್ಲಿರುವ ಗಣೇಶ ಮೂರ್ತಿ ಪ್ರತಿಷ್ಠಾನೆ ಆಗಲಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಸೆ. 7ರಿಂದ 9ರ ವರೆಗೆ ಗಣೇಶೋತ್ಸವಕ್ಕೆ ಪಾಲಿಕೆ ಅನುಮತಿ ನೀಡಿದೆ. ಇಲ್ಲಿ ಈ ಬಾರಿ ಅಯೋಧ್ಯೆಯ ಶ್ರೀರಾಮಚಂದ್ರ ಪ್ರಭುವಿನ ರೂಪದಲ್ಲಿರುವ ಗಣೇಶ ಮೂರ್ತಿ ಪ್ರತಿಷ್ಠಾನೆ ಆಗಲಿದೆ. ಅಲ್ಲದೇ ಹು-ಧಾ ಮಹಾನಗರದಲ್ಲಿ 50ಕ್ಕೂ ಅಧಿಕ ಕಡೆಗಳಲ್ಲಿ ಅಯೋಧ್ಯೆಯ ಶ್ರೀರಾಮನ ರೂಪದ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆಗುತ್ತಿರುವುದು ಮತ್ತೊಂದು ವಿಶೇಷ.

ಈಗ ಮಹಾನಗರದಲ್ಲಿ ಎಲ್ಲಿ ನೋಡಿದರಲ್ಲಿ ಗಣೇಶೋತ್ಸವದ ರಂಗು. ವಿಭಿನ್ನ, ವಿಶಿಷ್ಟ ರೂಪದಲ್ಲಿ ಗಜಕಾಯದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಹು-ಧಾ ಮಹಾನಗರದಲ್ಲಿ ಈ ಬಾರಿ ಬಹುತೇಕ ಗಣೇಶೋತ್ಸವ ಮಂಡ‍ಳಿಗಳು ಅಯೋಧ್ಯೆಯ ಶ್ರೀರಾಮನ ರೂಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಪ್ರಮುಖ ಆಕರ್ಷಣೆಗೆ ಕಾರಣವಾಗಿವೆ.

ಕಳೆದ 2 ವರ್ಷಗಳ ಕಾಲ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಹಲವು ಹೋರಾಟ, ಶಾಸಕರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ, ಈ ಬಾರಿ ಪಾಲಿಕೆ ಆಯುಕ್ತರು ನಾಲ್ಕು ದಿನಗಳ ಮೊದಲೇ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ್ದರಿಂದ ಯಾವುದೇ ಗದ್ದಲ ಇಲ್ಲ.

ಶ್ರೀರಾಮನ ದರ್ಶನ

ಶ್ರೀರಾಮನ ಅವತಾರದಲ್ಲಿರುವ ವಿಘ್ನೇಶ್ವರನ ಮೂರ್ತಿ 5.5 ಅಡಿ ಎತ್ತರದಲ್ಲಿದೆ. ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿರುವ ಕೊಲ್ಕತ್ತಾದ ಮೂರ್ತಿ ತಯಾರಕ ಅಪ್ಪು ಪಾಲ್‌ ಇದನ್ನು ತಯಾರಿಸಿದ್ದು, ಸಂಪೂರ್ಣವಾಗಿ ಸಿದ್ಧಗೊಂಡು ಪ್ರತಿಷ್ಠಾಪನೆಗೆ ಕಾಯುತ್ತಿದೆ. ಸೆ. 7ರಂದು ಮೂರು ಸಾವಿರ ಮಠದಿಂದ ಚೆನ್ನಮ್ಮ ಮೈದಾನದವ ವರೆಗೆ ಮೂರ್ತಿಯ ಅದ್ಧೂರಿ ಮೆರವಣಿಗೆ ನಡೆಸಿ ನಂತರ ಪ್ರತಿಷ್ಠಾಪಿಸಲಾಗುತ್ತಿದೆ.

50ಕ್ಕೂ ಅಧಿಕ ಕಡೆಗಳಲ್ಲಿ

ಹು-ಧಾ ಮಹಾನಗರದಲ್ಲಿ ಶ್ರೀರಾಮನ ರೂಪದಲ್ಲಿಯೇ 50ಕ್ಕೂ ಅಧಿಕ ಕಡೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಹುಬ್ಬಳ್ಳಿಯ ಇಂಡಿ ಪಂಪ್‌ ಬಳಿ, ಅರವಿಂದ ನಗರ, ವಿದ್ಯಾನಗರದ ಶೀತಲ್‌ ಕ್ಯಾಂಟೀನ್‌ ಬಳಿ, ಸೆಟ್ಲಮೆಂಟ್, ಧಾರವಾಡದ ನುಗ್ಗಿಕೇರಿ ಹನುಮಪ್ಪ ದೇವಸ್ಥಾನದ ಬಳಿ ಸೇರಿದಂತೆ ಹಲವೆಡೆ ಶ್ರೀರಾಮ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ವಿಘ್ನೇಶ್ವರನ ಹಲವು ರೂಪ

ಮಹಾನಗರದಲ್ಲಿ ಹಲವು ಕಡೆಗಳಲ್ಲಿ ಗಜಾನನೋತ್ಸವ ಮಂಡಳಿಗಳು ವಿಭಿನ್ನ, ವಿಶಿಷ್ಟ ಶೈಲಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಅವುಗಳಲ್ಲಿ ಮರಾಠಾ ಗಲ್ಲಿಯಲ್ಲಿ 25 ಅಡಿ ಎತ್ತರದ ಹುಬ್ಬಳ್ಳಿ ಕಾ ಮಾಹಾರಾಜಾ, ದಾಜಿಬಾನ್‌ ಪೇಟೆಯಲ್ಲಿ 23 ಅಡಿ ಎತ್ತರದ ಹುಬ್ಬಳ್ಳಿ ಕಾ ರಾಜಾ, ಹಳೇ ಹುಬ್ಬಳ್ಳಿಯಲ್ಲಿ 13 ಅಡಿ ಎತ್ತರದ ಲಾಲ್‌ಬಾಗ್‌ ಕಿ ರಾಜಾ, ದುರ್ಗದ ಬೈಲ್‌ನಲ್ಲಿ 15 ಅಡಿ ಎತ್ತರದ ಚಿಂತಾಮಣಿ ಗಣೇಶ, ಗಣೇಶ ಪೇಟೆಯಲ್ಲಿ 13 ಅಡಿ ಎತ್ತರದ ಬಾಂಬೆ ಶೈಲಿಯಲ್ಲಿರುವ ಗಣೇಶ ಪೇಟೆ ಕಾ ರಾಜಾ, ರಾಧಾಕೃಷ್ಣ ಗಲ್ಲಿಯಲ್ಲಿ 12 ಅಡಿಯ ವಿಠ್ಠಲನ ರೂಪದ ಗಣಪ, ಆರ್‌.ಎನ್‌. ಶೆಟ್ಟಿ ರಸ್ತೆಯ ಗಣೇಶ ನಗರದಲ್ಲಿ ಸಮುದ್ರದ ಮೇಲೆ ಆರೂಢನಾದ 8 ಅಡಿಯ ವಿಘ್ನೇಶ್ವರ, ವಿದ್ಯಾನಗರದಲ್ಲಿ 9 ಅಡಿ ಎತ್ತರದ ಮೈಲಾರ ಲಿಂಗೇಶ್ವರನ ರೂಪದಲ್ಲಿನ ಗಣಪ, ಗುರುನಾಥ ನಗರದಲ್ಲಿ 7 ಅಡಿ ಎತ್ತರದ ಕೃಷ್ಣ ರೂಪದ ಗಣಪ, ಬಂಕಾಪುರ ಚೌಕದಲ್ಲಿ 7.5 ಅಡಿ ಎತ್ತರದ ಶಿವನ ಮೇಲೆ ಅಭಿಷೇಕ ಗೈಯುತ್ತಿರುವ ಗಣಪ, ಧಾರವಾಡದ ಮನಿಕಿಲ್ಲಾ ಹರಿ ಮಂದಿರದ ಬಳಿ 11 ಅಡಿ ಎತ್ತರದ ಮೂಶಿಕನ ಮೇಲೆ ಲೋಕಸಂಚಾರ ಕೈಗೊಳ್ಳುತ್ತಿರುವ ಗಜಾನನ, ಮಣಿಕಂಠ ನಗರದಲ್ಲಿ ನೇಗಿಲುಹೊತ್ತ ರೈತನ ರೂಪದಲ್ಲಿ ಹೀಗೇ ಹಲವು ಕಡೆಗಳಲ್ಲಿ ವಿಭಿನ್ನ ಶೈಲಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ಅಂತಿಮ ಹಂತದ ಸಿದ್ಧತೆ

ದುರ್ಗದಬೈಲ್‌ ವೃತ್ತದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ರೂಪಕ ಸಿದ್ಧಪಡಿಸಲಾಗುತ್ತಿದೆ. ಸ್ಟೇಷನ್‌ ರಸ್ತೆಯಲ್ಲಿ ಶ್ರೀ ಗಣೇಶೋತ್ಸವ ಮಂಡಳಿಯಿಂದ ಶಿರಸಿ ಶ್ರೀ ಮಾರಿಕಾಂಬೆ ದೇವಸ್ಥಾನದ ರೂಪಕ ತಯಾರಿಸಿದ್ದು, 10 ದಿನಗಳ ಕಾಲ ನಿತ್ಯವೂ ಮಾರಿಕಾಂಬೆ ಜೀವನ ಚರಿತ್ರೆ ತಿಳಿಸುವ ಕಿರುಚಿತ್ರ ಪ್ರದರ್ಶಿಸಲು ಸಿದ್ಧತೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಹುಬ್ಬಳ್ಳಿ-ಧಾರವಾಡ ಜನತೆ ವಿಘ್ನೇಶ್ವರನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸನ್ನದ್ಧರಾಗಿದ್ದಾರೆ.ಖುಷಿಯ ಕೆಲಸ

ಗಣೇಶೋತ್ಸವ ಮಂಡಳಿಯವರು ಬಂದು ವಿಭಿನ್ನ, ವಿಶಿಷ್ಟ ಶೈಲಿಯಲ್ಲಿ ಗಣೇಶನ ಮೂರ್ತಿ ತಯಾರಿಸುವಂತೆ ಸೂಚಿಸುತ್ತಾರೆ. ಅವರು ತಿಳಿಸಿದ ರೂಪದಲ್ಲಿ ಗಣೇಶ ಮೂರ್ತಿ ತಯಾರಿಸಿ ಕೊಡಲಾಗುತ್ತಿದೆ. ಈ ಕೆಲಸ ಮಾಡಲು ತುಂಬಾ ಖುಷಿಯಾಗುತ್ತಿದೆ.

ಮಂಜುನಾಥ ಕಾಂಬ್ಳೆ, ಮೂರ್ತಿ ತಯಾರಕ, ಹಳೇ ಹುಬ್ಬಳ್ಳಿ