ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರಸಭೆ ಆವರಣದಲ್ಲಿ ನಗರಸಭೆ ವತಿಯಿಂದ ಆಯುಧ ಪೂಜೆಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ ಒಳಗೊಂಡಂತೆ ನಗರಸಭಾ ಸದಸ್ಯರು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮಾತನಾಡಿ, ನಗರಸಭೆ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ಇಂದು ಬಹಳ ಸಂತಸದ ದಿನ. ನಗರಸಭೆ ಆವರಣದಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಭಕ್ತಿಯಿಂದ ಆಯುಧ ಪೂಜೆ ಸಲ್ಲಿಸಿದ್ದೇವೆ. ಒತ್ತಡದ ನಡುವೆಯೂ ವರ್ಷಪೂರ್ತಿ ತಮ್ಮ ಸೇವಾ ಕಾರ್ಯಗಳನ್ನು ನೆರವೇರಿಸಿ ಜನರಿಗಾಗಿ ಶ್ರಮ ಪಡುವವರು ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರಿಗೆ ಇಂದು ಗೌರವ ನೀಡುವ ಮೂಲಕ ಬಟ್ಟೆ ವಿತರಿಸಿದ್ದೇವೆ. ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶ ಸಾರಿದ್ದೇವೆ ಎಂದ ಅವರು, ಚಿಕ್ಕಬಳ್ಳಾಪುರ ನಗರಸಭೆಯನ್ನು ಮಾದರಿ ನಗರಸಭೆಯನ್ನಾಗಿ ಮಾಡಲು ಪಣ ತೊಟ್ಟಿದ್ದು, ಉಪಾಧ್ಯಕ್ಷರು ಸಮೇತ ಎಲ್ಲ ಸದಸ್ಯರ ಸಹಕಾರದೊಂದಿಗೆ ಕೆಲಸ ಮಾಡಲಾಗುವುದು. ಇನ್ನು ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ನಗರಸಭೆ ವತಿಯಿಂದ ವಿಶೇಷ ಗಮನಹರಿಸಿ ಆದ್ಯತೆ ಮೇರೆಗೆ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.
ನಗರಸಭಾ ಉಪಾಧ್ಯಕ್ಷ ಜೆ.ನಾಗರಾಜ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿದ್ದು, ವಿಭಿನ್ನ ಯೋಜನೆಗಳ ಮುಖಾಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಜೊತೆಗೆ ನಗರಸಭೆಯ ಸಂಪನ್ಮೂಲಗಳನ್ನು ಬೆಳೆಸಲು ಯೋಜನೆಗಳನ್ನು ರೂಪಿಸಲು ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ. ನಗರಸಭೆ ಅಂಗಡಿಗಳ ಹರಾಜು ಪ್ರಕ್ರಿಯೆ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಇದರಿಂದ ಹೆಚ್ಚು ಲಾಭ ನಗರಸಭೆಗೆ ಆಗುವ ನಿರೀಕ್ಷೆ ಇದೆ ಎಂದರು.ದಸರಾ ಹಬ್ಬದ ನಿಮಿತ್ತ ನಗರಸಭೆ ಅಧ್ಯಕ್ಷರು ನಗರಸಭೆ ಆವರಣದಲ್ಲಿ ಆಯುಧ ಪೂಜೆ ಕಾರ್ಯಕ್ರಮವನ್ನು ಆಯೋಜಿಸಿ, ನಗರಸಭೆಯ ಎಲ್ಲಾ ವಾಹನಗಳಿಗೆ ಪೂಜೆ ಸಲ್ಲಿಸಿ ನಗರಸಭೆ ಸಿಬ್ಬಂದಿ ವರ್ಗದವರನ್ನು, ಪೌರಕಾರ್ಮಿಕರನ್ನು ಒಂದೇ ಕಡೆ ಸೇರಿಸಿ ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಮೂಡಿಸಿ ಬಟ್ಟೆ ನೀಡಿದ್ದಾರೆ. ನಿಜಕ್ಕೂ ಶ್ಲಾಘನೀಯ ಎಂದರು.
ನಗರಸಭಾ ಸದಸ್ಯರಾದ ಯತೀಶ್, ಮಹಾಕಾಳಿ ಬಾಬು, ಮಂಜುನಾಥ್, ಅರುಣ್ ಮತ್ತಿತರರು ಇದ್ದರು.