ಸಾರಾಂಶ
ಮನುಷ್ಯ ಹಿಂದಿನ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಆಯುರ್ವೇದ ಔಷಧೋಪಚಾರದ ವಿಧಾನಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಬ್ರಹ್ಮಕುಮಾರೀಸ್ ಸಂಸ್ಥೆಯ ಜಿಲ್ಲಾ ಸಂಚಾಲಕಿ ಭಾಗ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮನುಷ್ಯ ಹಿಂದಿನ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಆಯುರ್ವೇದ ಔಷಧೋಪಚಾರದ ವಿಧಾನಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಬ್ರಹ್ಮಕುಮಾರೀಸ್ ಸಂಸ್ಥೆಯ ಜಿಲ್ಲಾ ಸಂಚಾಲಕಿ ಭಾಗ್ಯ ಹೇಳಿದರು.ನಗರದ ಹೌಸಿಂಗ್ ಬೋರ್ಡ್‌ನ ಸರ್ಕಾರಿ ಶಾಲೆಯಲ್ಲಿ ಲೈಫ್ ಕೇರ್ ಕ್ಲೀನಿಕ್ ವತಿಯಿಂದ ಏರ್ಪಡಿಸಿದ್ದ ಉಚಿತ ಆಯುರ್ವೇದ ಔಷಧಿ ವಿತರಣಾ ಶಿಬಿರದಲ್ಲಿ ಅವರು ಮಾತನಾಡಿದರು.ಮನುಷ್ಯನ ನಿತ್ಯದ ಜೀವನದಲ್ಲಿ ಸಂಪಾದನೆ, ಆಸ್ತಿಗಳಿಕೆ ಹಾಗೂ ಕುಟುಂಬ ನಿರ್ವಹಣೆ ಹೆಚ್ಚಾದ ಕಾರಣ ಆರೋಗ್ಯದ ಕಡೆ ಹೆಚ್ಚು ಗಮನಹರಿಸದೇ ಹಂತ ಹಂತವಾಗಿ ಕುಗ್ಗುತ್ತಿದ್ದಾನೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ಆರೋಗ್ಯದ ನಿದ್ರೆ ಕ್ಷೀಣಿಸಿ, ಅನಾರೋಗ್ಯವು ಹೆಚ್ಚಾಗುತ್ತಿದೆ ಎಂದು ತಿಳಿದರು.ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಆಧ್ಯಾತ್ಮಕ ಕಡೆ ಹೆಚ್ಚು ಒಲವು ಹೊಂದಬೇಕು. ಕೆಟ್ಟ ಗುಣಗಳೇ ಮಾನವನ ಅಂಗಾಂಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮನಸ್ಸನ್ನು ಹತೋಟಿಗೆ ತರಲು ಆಯುರ್ವೇದದ ಜೀವನಶೈಲಿ ಹಾಗೂ ಪರಮಾತ್ಮನ ಆರಾಧಿಸುವ ಗುಣ ಬೆಳೆಸಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.ಲೈಫ್‌ಕೇರ್ ಕ್ಲೀನಿಕ್‌ನ ಡಾ. ಕೆ.ಎ. ಅನೀತ್‌ಕುಮಾರ್ ಮಾತನಾಡಿ, ಶಿತ, ಕೆಮ್ಮು, ಅಲರ್ಜಿ, ಅಸ್ತಮಾ ಸೇರಿದಂತೆ ಇನ್ನಿತರೆ ಶ್ವಾಸಕೋಶದ ತೊಂದರೆಗಳನ್ನು ಆಯುರ್ವೇದದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಬಾಳೆಹಣ್ಣಿನಲ್ಲಿ ಔಷಧಿ ಬೆರೆಸಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯೆ ಕವಿತಾ ಶೇಖರ್, ಆಯುರ್ವೇದ ಪದ್ಧತಿ ಋಷಿಮುನಿಗಳ ಕಾಲದಿಂದ ಚಾಲ್ತಿಯಲ್ಲಿದೆ. ಆದರೆ, ಇತ್ತೀಚೆಗೆ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಉಂಟಾದರೆ ತುರ್ತಾಗಿ ಮಾತ್ರೆ, ಇಂಜೆಕ್ಷನ್ ಒಗ್ಗುವುದು ಸರಿಯಲ್ಲ. ಅಡುಗೆ ಮನೆಯಲ್ಲೇ ಶುಂಠಿ, ಬೆಳ್ಳುಳ್ಳಿ, ಚಕ್ಕೆಲವಂಗದಲ್ಲಿ ಔಷಧಿ ಗುಣಗಳಿದ್ದು ಬಳಸಿಕೊಳ್ಳುವ ರೀತಿ ತಿಳಿದಿರಬೇಕು ಎಂದು ಹೇಳಿದರು.ಪೂರ್ವಿಕರ ಕಾಲದಲ್ಲಿ ಆಯುರ್ವೇದಿಕ ಔಷಧೋಪಚಾರ ಬಹಳಷ್ಟು ಪ್ರಚಲಿತದಲ್ಲಿತ್ತು. ಕಾಲಕ್ರಮೇಣ ಎಲ್ಲವೂ ನಶಿಸುತ್ತಿರುವ ಪರಿಣಾಮ ಇಂದಿನ ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ. ಇದರಿಂದ ಮಾನವ ಜನಾಂಗ ಅಲ್ಪ ಆಯುಷ್ಯನಲ್ಲೇ ಮೃತರಾಗುತ್ತಿದೆ. ಹೀಗಾಗಿ ಆಯುರ್ವೇದ ಪದ್ಧತಿಯನ್ನು ಬದುಕಿನ ಅಂಗವೆಂದು ತಿಳಿದು ಮುನ್ನೆಡೆದರೆ ಜೀವನ ಸಂತೋಷವಾಗಿರುತ್ತದೆ ಎಂದರು.ಇದೇ ವೇಳೆ ಶಿಬಿರಾರ್ಥಿಗಳಿಗೆ ಔಷಧಿ ಮಿಶ್ರಿತ ಬಾಳೆಹಣ್ಣನ್ನು ವಿತರಿಸಲಾಯಿತು. ಜೊತೆಗೆ ವೃದ್ಧರಿಗೆ ಅನುಕೂಲವಾಗಲು ಮಧುಮೇಹ ಹಾಗೂ ಕಣ್ಣಿನ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ನಾಮಿನಿ ಸದಸ್ಯ ಕೀರ್ತಿಶೇಟ್, ಉಪನ್ಯಾಸಕಿ ಲಾವಣ್ಯ ಇದ್ದರು.