ಸಾರಾಂಶ
ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಲ್ಲಾ ಸನ್ನಿಧಾನಗಳು ಸೇರಿ ಅಯ್ಯಪ್ಪನ ಆರಾಧನೆ
ಗದಗ: ನಗರದ ಮುನ್ಸಿಪಲ್ ಹೆಸ್ಕೂಲ್ ಮೈದಾನ ನಾಳೆ ಬುಧವಾರ (ಡಿ. 20) ಅಯ್ಯಪ್ಪನ ಆರಾಧನೆಗೆ ಅಣಿಯಾಗಿದೆ. ಕಾರಣ ಬಿಜೆಪಿ ಮುಖಂಡ ಕೆ.ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ ಗುರುಸ್ವಾಮಿಗಳು ಮಹಾ ಪೂಜೆ ಆಯೋಜಿಸಿದ್ದಾರೆ.ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಹಾಗೂ ಅಖಿಲ ಭಾರತೀಯ ಅನ್ನದಾನ ಸಮಿತಿಯ ಸದಸ್ಯರೂ ಆಗಿರುವ ಕೆ.ಈ. ಕಾಂತೇಶ ಅಯ್ಯಪ್ಪ ಮಾಲೆ ಧರಿಸಿ ಗುರುಸ್ವಾಮಿಗಳು ಆಗಿದ್ದು, ಅವರ ಇಚ್ಛಾಶಕ್ತಿಯಿಂದ ಅಯ್ಯಪ್ಪಸ್ವಾಮಿ ಮಹಾಪೂಜೆ ಮತ್ತು ಮಹಾ ಪ್ರಸಾದ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಅಯ್ಯಪ್ಪ ಸನ್ನಿಧಾನಗಳ ಗುರುಗಳು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಒಂದೆಡೆ ಸೇರುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು.
25 ವರ್ಷಗಳಿಂದ ಮಾಲೆ: ಅಯ್ಯಪ್ಪ ಸ್ವಾಮಿಯ ಪರಮಭಕ್ತರಾಗಿರುವ ಕಾಂತೇಶ ಗುರುಸ್ಟಾಮಿ ಸತತ 25 ವರ್ಷಗಳಿಂದ ಶಬರಿಮಲೈ ಯಾತ್ರೆ ಮಾಡುತ್ತಾ ಬಂದಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ಮುಡಿ ಅಕ್ಕಿ ಕಾರ್ಯಕ್ರಮ ಮಾಡಿ, ಹಲವಾರು ಲೋಡ ಅಕ್ಕಿಯನ್ನು ಅಯ್ಯಪ್ಪ ಸನ್ನಿಧಾನಕ್ಕೆ ಕಳಿಸಿದ್ದಾರೆ. ಗದಗ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಶಕ್ತಿ ಪೂಜೆಯನ್ನು ಆಯೋಜಿಸಲಾಗಿದ್ದು, ಈ ಬೃಹತ್ ಪೂಜೆ ಲೋಕ ಕಲ್ಯಾಣಕ್ಕಾಗಿ ನಡೆಸಲಾಗುತ್ತಿದೆ ಎನ್ನುತ್ತಾರೆ ಸಂಘಟಕರು.ವಿಶೇಷತೆ
ಜಿಲ್ಲೆಯ (SASS) ಕಮಿಟಿಯಿಂದ ಶಕ್ತಿ ಪೂಜೆಗಾಗಿ ವಿಶೇಷ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಗ್ರಾಮಗಳಿಂದ ಅಯ್ಯಪ್ಪ ಮಾಲಾಧಾರಿಗಳು ಪಾಲ್ಗೊಳ್ಳುತ್ತಾರೆ.ಇದರೊಟ್ಟಿಗೆ ಸತತವಾಗಿ 25 ವರ್ಷಗಳಿಂದ ಶಬರಿ ಮಲೈ ಯಾತ್ರೆ ಮಾಡಿದ ಹಿರಿಯ ಗುರುಸ್ವಾಮಿಗಳಿಗೆ ವಿಶೇಷ ಗೌರವ ಸಲ್ಲಿಸುವ ಮೂಲಕ ಸಮಾಜದಲ್ಲಿ ಸಾತ್ವಿಕ ಗುಣವನ್ನು ಸಾರ್ವಜನಿಕವಾಗಿ ಬೃಹತ್ ಪ್ರಮಾಣದಲ್ಲಿ ಗೌರವಿಸುವುದು ಇದರ ಉದ್ದೇಶವಾಗಿದೆ.
ಬುಧವಾರ ಸಂಜೆ 6.50 ರಿಂದ ಪ್ರಾರಂಭವಾಗುವ ಮಹಾಪೂಜೆಯಲ್ಲಿ ಸಾವಿರದಿಂದ ಹದಿನೈದು ನೂರು ಜನ ಅಯ್ಯಪ್ಪ ಮಾಲಾಧಾರಿಗಳು, ನೂರಾರು ಗುರುಸ್ವಾಮಿಗಳು, ಎರಡು ಸಾವಿರಕ್ಕೂ ಅಧಿಕ ಜನ ಅಯ್ಯಪ್ಪನ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಾದ್ಯಂತ ಇರುವ 50ಕ್ಕೂ ಹೆಚ್ಚಿನ ಅಯ್ಯಪ್ಪ ಸನ್ನಿಧಾನದ ಎಲ್ಲಾ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ನಗರದ ಮುನ್ಸಿಪಲ್ ಹೆಸ್ಕೂಲ್ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ.ಗದಗ ನಗರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಮಹಾಪೂಜಾ (ಶಕ್ತಿಪೂಜಾ) ಕಾರ್ಯಕ್ರಮವನ್ನು ಕೇರಳದ ಅಯ್ಯಪ್ಪಸ್ವಾಮಿ ದೇವಾಲಯದ ತಂತ್ರಿಗಳಾದ ಶಿಶಸಂಕರನ್ ನಂಬೂದಿರಿಪ್ಪಾಡ್ ನೆರವೇರಿಸಲಿದ್ದು, ಪ್ರತಿಯೊಬ್ಬ ಮಾಲಾಧಾರಿಗಳು ಪೂಜೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗುರುಸ್ವಾಮಿ ಕೆ.ಈ. ಕಾಂತೇಶ ಹೇಳಿದರು.ಅಯ್ಯಪ್ಪ ಭಕ್ತರು ಮಾತ್ರವಲ್ಲ ಜಿಲ್ಲೆಯ ಎಲ್ಲಾ ಜನರು ಪಾಲ್ಗೊಳ್ಳುವಂತಾ ಬಹುದೊಡ್ಡ ಪೂಜಾ ಕಾರ್ಯಕ್ರಮ ಇದಾಗಿದೆ. ಕೆ.ಈ.ಕಾಂತೇಶ ಗುರುಸ್ವಾಮಿ ಅವರು ಕಳೆದ 25 ವರ್ಷದ ಶಬರಿಮೈಲೆ ಯಾತ್ರೆ ಹಿನ್ನೆಲೆಯಲ್ಲಿ ಎಲ್ಲಾ ಭಕ್ತರನ್ನು ಒಂದೆಡೆ ನೋಡುವಂತಾ ಭಾಗ್ಯ ಸಿಗಲಿದೆ ಸಂಘಟಕ ರಮೇಶ ಸಜ್ಜಗಾರ ಹೇಳಿದರು.