ಕಲಬುರಗಿ ಅಂಗನವಾಡಿ ಮಕ್ಕಳಿಗೆ 2 ತಿಂಗಳಿಂದ ಮೊಟ್ಟೆ ಇಲ್ಲ!

| Published : Dec 20 2023, 01:15 AM IST

ಸಾರಾಂಶ

ಕಲಬುರಗಿ ಜಿಲ್ಲೆಯ 3500 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಯ ಭಾಗವಾಗಿ ವಿತರಿಸುತ್ತಿದ್ದ ಮೊಟ್ಟೆ ಕಳೆದ ಎರಡು ತಿಂಗಳಿಂದ ಮೊಟ್ಟೆ ಪೂರೈಕೆಯಾಗುತ್ತಿಲ್ಲ. ಅಚ್ಚರಿಯ ಸಂಗತಿ ಅಂದರೆ ಮೊಟ್ಟೆ ವಿತರಣೆ ಸ್ಥಗಿತಗೊಂಡು 2 ತಿಂಗಳಾಯ್ತು ಎಂಬಂಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನವೀನ್‌ ಅವರಿಗೂ ಗೊತ್ತಿಲ್ಲ!

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯಲ್ಲಿರುವ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮೊಟ್ಟೆ ವಿತರಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕಲಬುರಿ ಜಿಲ್ಲೆಯಲ್ಲಿ ಕಳೆದ 2 ತಿಂಗಳಿಂದ ಗ್ರಹಣ ಹಿಡಿದಿದೆ. ಅ.10ರಿಂದ ಜಿಲ್ಲೆಯಲ್ಲಿರುವ ಎಲ್ಲಾ 3,500 ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಅಂಗನವಾಡಿಯಲ್ಲಿರುವ 6 ತಿಂಗಳಿಂದ 3 ವರ್ಷ ವಯೋಮಿತಿಯವರೆಗಿನ ಮಕ್ಕಳು ಮೊಟ್ಟೆ ಇಲ್ಲದೆ ತಮ್ಮ ಪಾಡಿಗೆ ತಾವಿರುವಂತಾಗಿದೆ.

ಮೊಟ್ಟೆ ವಿತರಣೆ ಯಾಕೆ ಸ್ಥಗಿತಗೊಂಡಿತು? ಯಾಕೆ ಹೀಗಾಯ್ತು? ಮಕ್ಕಳಿಗೆ ಪೌಷ್ಟಿಕಾಂಶ ಪೂರೈಸುವ ಮೊಟ್ಟೆ ವಿತರಣೆ ಯೋಜನೆಯೇ ಜಿಲ್ಲೆಯಲ್ಲಿ ಹಳ್ಳ ಹಿಡಿಯಿತು ಯಾಕೆ? ಮೊಟ್ಟೆ ಕೊರತೆಯೋ? ಬಿಲ್‌ ಪಾವತಿಯಾಗಿಲ್ಲವೋ? ಗುತ್ತಿಗೆದಾರನ ಕಾಟವೋ? ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯಾರೊಬ್ಬರೂ ಸದರಿ ಯೋಜನೆಯ ಸ್ಥಗಿತಗೊಂಡ ಸುತ್ತಮುತ್ತ ಬಾಯಿ ಬಿಟ್ಟಿಲ್ಲ. ಅಚ್ಚರಿಯ ಸಂಗತಿ ಅಂದರೆ ಮೊಟ್ಟೆ ವಿತರಣೆ ಸ್ಥಗಿತಗೊಂಡು 2 ತಿಂಗಳಾಯ್ತು ಎಂಬಂಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನವೀನ್‌ ಅವರಿಗೂ ಗೊತ್ತಿಲ್ಲ!

ಇಲ್ಲಿನ ಡಿಸಿ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ಸಭೆಯಲ್ಲಿ ಈ ಮೊಟ್ಟೆ ವಿಚಾರ ವಿಸ್ತೃತ ಚರ್ಚೆಗೆ ಕಾರಣವಾಯ್ತಲ್ಲದೆ ಸದಸ್ಯರೆಲ್ಲರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನವೀನ್‌ ಕಾರ್ಯವೈಖರಿ ಬಗ್ಗೆ ಆಕ್ರೋಶ ಹೊರಹಾಕಿದರು.

ಅಂಗನವಾಡಿಗಳಲ್ಲಿ ನೈರ್ಮಲ್ಯ ಮರೀಚಿಕೆ, ಸುತ್ತಮುತ್ತ ಹೊಲಸು ನಾರುತ್ತಿದೆ, ಹನುಮಾನ ನಗರ ತಂಡಾ ಅಂಹಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥ, ಪೌಷ್ಟಿಕಾಂಶದ ಸಾಮಾನುಗಳು ಯಾವುವೂ ಇರಲಿಲ್ಲ. ಅಲ್ಲಿ ಪೂರೈಸಲಾದ ತೊಗರಿ ಬೇಳೆ ಎಮ್ಮೆ ಕೂಡಾ ತಿನ್ನದಂತಹ ಗುಣಮಟ್ಟದ್ದಾಗಿತ್ತು ಎಂದು ಪೊಟ್ಟಣದಲ್ಲಿ ಎಲ್ಲಾ ಪರಿಕರ ತಂದು ಆಯೋಗದ ಸದಸ್ಯರು ನೇರವಾಗಿ ನವೀನ್‌ ಇವರ ಮುಖದ ಮುಂದೆಯೇ ಹಿಡಿದ ಪ್ರಸಂಗಕ್ಕೆ ಸಭೆ ಸಾಕ್ಷಿಯಾಯ್ತು.

ಜಿಲ್ಲೆಯಲ್ಲಿ ಅಪೌಷ್ಟಿಕತೆ ತೀವ್ರವಾಗಿದೆ. ಅಪೌಷ್ಟಿಕ ಮಕ್ಕಳಿಗೆ ನಿತ್ಯ, ಸಾಮಾನ್ಯ ಮಕ್ಕಳಿಗೆ ವಾರದಲ್ಲಿ 2 ದಿನ ಎಂಬಂತೆ ಮೊಟ್ಟೆ ಪೂರೈಕೆಯಾಗಲೇಬೇಕು. ಇದು ಕಡ್ಡಾಯವಾಗಿರುವಾಗಲೂ ಮೊಟ್ಟೆ ಪೂರೈಕೆಯೇ ಸ್ಥಗಿತಗೊಂಡಿದೆ. ಆ ಸಂಗತಿ ಡಜಿಲ್ಲಾ ಮಟ್ಟದ ಅಧಿಕಾರಿಗೇ ಗೊತ್ತಿಲ್ಲವೆಂದರೆ ಹೇಗೆಂದು ಸದಸ್ಯ ಶಶಿಧರ್‌ ಕೋಸುಂಬೆ ಅವರು ಡಿಡಿ ನವೀನ್‌ಗೆ ತರಾಟೆಗೆ ತೆಗೆದುಕೊಂಡರು.

ಸದಸ್ಯರೆಲ್ಲರೂ ಮುಗಿಬಿದ್ದು ಒಂದೇ ಸವನೇ ಮೊಟ್ಟೆ ವಿಚಾರದಲ್ಲಿ ಹಾಗೂ ಕಳಪೆ ಆಹಾರ ಸಾಮಗ್ರಿ ಬಗ್ಗೆ ಪ್ರಶ್ನೆಗಳ ಸುರಿಮಳೆಗರೆದಾಗ ಡಿಡಿ ನವೀನ್‌ ಒಂದು ಹಂತದಲ್ಲಿ ನಿರುತ್ತರರಾದರು.

ಜಿಲ್ಲಾದ್ಯಂತ 3,500 ಅಂಗನವಾಡಿಗಳಿವೆ. ತಮಗೆ ನಿತ್ಯ ಹತ್ತಾರು ಮೀಟಿಂಗ್‌, ಹೀಗಿರುವಾಗ ನೋಡಲು ಆಗುತ್ತಲ್ಲವೆಂದು ಸಬೂಬು ಹೇಳಿ ನುಣುಚಿಕೊಳ್ಳಲು ನವೀನ್‌ ಮುಂದಾದಾಗ ಸದಸ್ಯರು ಎಲ್ಲಾ ಜಿಲ್ಲೆಯ ಮಹಿಳಾ- ಮಕ್ಕಳ ಡಿಡಿಗಳಂತೆಯೇ ನೀವು ಕೆಲಸ ಮಾಡೋದು, ನೀವೇನು ವಿಶೇಷ ಕೆಲಸ ಮಾಡುತತಿಲ್ಲ. ಇಂತಹ ಸಮಜಾಯಿಷಿ ನೀಡಲು ಬರಬೇಡ, ನಮಗೆ ಗೊತ್ತಿದೆ ಎಂದು ಸದಸ್ಯರು ಮಾತಿನಲ್ಲೇ ತಿವಿದರು.

ಸಿಡಿಪಿಓಗಳು, ಸೂಪರ್‌ವೈಸರ್‌ಗಳು ಸೇರಿದಂತೆ ಸಿಬ್ಬಂದಿ ಜಾಲವಿದ್ದು ಅವರನ್ನೆಲ್ಲ ಮೇಲ್ವಿಚಾರಣೆ ಮಾಡುವ ನಿಮ್ಮ ಜವಾಬ್ದಾರಿಯಿಂದ ನೀವು ನುಣುಚಿಕೊಳ್ಳುತ್ತಿದ್ದೀರಿ. ನಗರದಲ್ಲಿರುವ ಹನುಮಾನ್‌ ನಗರ ತಂಡಾ ಅಂಗನವಾಡಿಗೆ ಇಲಾಖೆಯ ಯಾರೊಬ್ಬರೂ 8 ತಿಂಗಳಿಂದ ಭೇಟಿ ನೀಡಿಲ್ಲ. ನಗರದ್ದೇ ಇದೇ ಕಥೆಯಾದರೆ ಇನ್ನು ಗ್ರಾಮೀಣ ಅಂಗನವಾಡಿಗಳದ್ದು ದೇವರೇ ಗತಿ ಎಂದು ಶಶಿಧರ್‌ ಕೋಟೆ ನವೀನ್‌ ಹಾಗೂ ಅವರ ತಂಡದವರ ಕಾರ್ಯವೈಖರಿ ಕಟುವಾಗಿ ಟೀಕಿಸಿದರು.

ಅಂಗನವಾಡಿಗಳಲ್ಲಿ ಅನೇಕ ಕಡೆ ಕೆಲಸದ ಅವಧಿಯಲ್ಲೇ ಬೀಗ ಹಾಕಿದ್ದು ಕಂಡಿದ್ದೇವೆ. ಅನೇಕ ಕಡೆ ಸ್ಟಾಕ್‌ ಸರಿಯಾಗಿಲ್ಲ, ಹಲವೆಡೆ ಸುಳಳು ದಾಖಲೆಗಳನ್ನು ಕಂಡಿದ್ದೇವೆ. ಅಪೌಷ್ಟಿಕತೆ ಕಾಡುತ್ತಿರುವ ಜಿಲ್ಲೆಯಲ್ಲಿ ಈ ರೀತಿ ಅಂಗನವಾಡಿ ನಿರ್ಹವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಅಪೌಷ್ಟಿಕತೆ ಇನ್ನೂ ಹೊಸ ರೂಪ ಪಡೆಯೋ ಆತಂಕವಿದೆ ಎಂದು ಆಯೋಗದ ಸದಸ್ಯರು ಆತಂಕ ಹೊರಹಾಕಿದರು. ವಾರದಲ್ಲಿ ಎಲ್ಲಾ ಸರಿಪಡಿಸಿ ಆಯೋಗಕ್ಕೆ ವರದಿ ಕೊಡಿ. ಇಲ್ಲದೆ ಹೋದಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕಾಗುತ್ತದೆ ಎದೂ ಆಯೋಗದ ಸದಸ್ಯರು ತಾಕೀತು ಮಾಡಿದರು.

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವಾರ್ಡ್‌ನಲ್ಲಿ ಬಾಣಂತಿಯರಿಗೆ ಬಿಸಿನೀರಿಲ್ಲ, ಕುಡಿಯುವ ನೀರಿಲ್ಲ, ಅವ್ಯವಸ್ಥೆಯಲ್ಲಿ ಹೇಗೆ ಅವರು ಇರಬೇಕು ಎಂದು ಸದಸ್ಯರು ಪ್ರಶ್ನಿಸಿದರು. ಜಿಮ್ಸ್‌ ವೈದ್ಯ ಡಾ. ರುದ್ರವಾಡಿ, ಡಾ. ಸಂದೀಪ್‌ ಈ ಬಗ್ಗೆ ವಿವರ ನೀಡಿದರಾದರೂ ಸದಸ್ಯರು ಇವರ ಮಾತಿಗೆ ಬೆಲೆ ಕೊಡದೆ ಸಮಸ್ಯೆಗಳನ್ನು ವಾರದಲ್ಲಿ ಪರಿಹರಿಸಿರಿ ಎಂದು ತಾಕೀತು ಮಾಡಿದರು.