ಬಜರಂಗದಳ-ವಿಎಚ್‌ಪಿ ಬಿ‌.ಸಿ.ರೋಡ್ ಚಲೋಗೆ ಕರೆ ನೀಡಿದ್ದ ಹಿನ್ನೆಲೆ ಸೋಮವಾರ ಬೆಳಗ್ಗೆ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿದ್ದು, ಕೆಲಹೊತ್ತು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಜರಂಗದಳ-ವಿಎಚ್‌ಪಿ ಬಿ‌.ಸಿ.ರೋಡ್ ಚಲೋಗೆ ಕರೆ ನೀಡಿದ್ದ ಹಿನ್ನೆಲೆ ಸೋಮವಾರ ಬೆಳಗ್ಗೆ ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿದ್ದು, ಕೆಲಹೊತ್ತು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್‌ವೆಲ್ ಭೇಟಿ ನೀಡಿ, ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್‌ನ ಸವಾಲಿಗೆ ಉತ್ತರಕೊಡಲು ಬಂದಿದ್ದೇನೆ ಎಂದು ಬಹಿರಂಗ ಘೋಷಣೆ ಮಾಡಿದರು.

ಆರಂಭದಲ್ಲಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗುತ್ತಾ, ಪೊಲೀಸರ ತಡೆಯನ್ನು ಲೆಕ್ಕಿಸದೆ ಮುಂದೆ ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ತಲುಪಿದಾಗ ಪೊಲೀಸರು ಬಸ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು.

ಬಳಿಕ ಹೆದ್ದಾರಿಯಲ್ಲಿ ಕೆಲಹೊತ್ತು ಕಾರ್ಯಕರ್ತರು ಶರಣ್ ಪಂಪ್‌ವೆಲ್‌ ಅವರಿಗೆ ಸವಾಲು ಹಾಕಿರುವ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್‌ ಪಂಪ್‌ವೆಲ್‌, ಬಿ.ಸಿ.ರೋಡಿನ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಸವಾಲು ಸ್ವೀಕರಿಸಿ ಬಿ.ಸಿ.ರೋಡಿಗೆ ಬಂದಿದ್ದೇನೆ. ಇನ್ನೂ ಮುಂದೆಯೂ ಇಂತಹ ಸವಾಲು ಸ್ವೀಕರಿಸಲು ತಯಾರಾಗಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಹಿಂದುತ್ವಕ್ಕೆ ಜಯಸಿಕ್ಕಿದೆ. ಇಂತಹ ಸವಾಲುಗಳು ಹಿಂದೂ ಕಾರ್ಯಕರ್ತರಿಗೆ ಇದೇ ಮೊದಲಲ್ಲ, ಸಾಕಷ್ಟು ಕಾರ್ಯಕರ್ತರು ಪ್ರಾಣವನ್ನು ಕೊಟ್ಟಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ, ಜೊತೆಗೆ ಜೈಲಿಗೂ ಹೋಗಿದ್ದಾರೆ ಎಂದರು.

ನಾಗಮಂಗಲದ ಗಣೇಶ ಚತುರ್ಥಿಯ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಿಂಸೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹೇಳಿಕೆಯನ್ನು ಕೊಟ್ಟಿದ್ದೇವೆ. ಆದರೆ ಶರೀಫ್‌, ಅದಕ್ಕೆ ಬಿ.ಸಿ.ರೋಡಿಗೆ ಆಗಮಿಸುವಂತೆ ಸವಾಲು ಹಾಕಿದ್ದ. ಆತನ ಸವಾಲಿಗೆ ಉತ್ತರವಾಗಿ ನಾವು ಇಂದು ಬಿ.ಸಿ.ರೋಡಿನಲ್ಲಿ ಸೇರಿದ್ದೇವೆ. ಮುಂದೆ ಅವಶ್ಯಕತೆ ಬಿದ್ದರೆ ಆತ ಹೇಳಿದಂತೆ ಮಸೀದಿಗೆ ಹೋಗುವುದಕ್ಕೂ ಸಿದ್ಧರಿದ್ದೇವೆ. ಇದು ಶರಣ್ ಒಬ್ಬನಿಗೆ ಹಾಕಿದ ಸವಾಲಲ್ಲ, ಇಡೀ ಹಿಂದೂ ಕಾರ್ಯಕರ್ತರಿಗೆ ಹಾಕಿದ ಸವಾಲು. ಯಾರಿಗೂ ಆಹ್ವಾನ ನೀಡದೆ ತಾವೆಲ್ಲರೂ ಆಗಮಿಸಿದ್ದಕ್ಕೆ ಧನ್ಯವಾದ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.ಸವಾಲಿಗೆ ಪ್ರತಿ ಸವಾಲು ಹಾಕಿದ್ದ ಹಿಂದೂ ಸಂಘಟನೆಯ ಪ್ರಮುಖ ಪುನೀತ್ ಅತ್ತಾವರ ಕೂಡ ಬಿ.ಸಿ.ರೋಡಿನ ಚಲೋ ಕಾರ್ಯಕ್ರಮದಲ್ಲಿ ಶರಣ್ ಪಂಪ್‌ವೆಲ್ ಜೊತೆ ಆಗಮಿಸಿದ್ದರು.ಐಜಿಪಿ ಅಮಿತ್ ಸಿಂಗ್, ಎಸ್.ಪಿ.ಯತೀಶ್ ಎನ್., ಎ.ಸಿ. ಹರ್ಷವರ್ದನ್, ತಹಸೀಲ್ದಾರ್ ಅರ್ಚನಾ ಭಟ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಿ.ಸಿ.ರೋಡ್‌ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು‌. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಹಿಂದೂ ಸಂಘಟನೆಯ ಪ್ರಮುಖರಾದ ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ, ಭುಜಂಗ ಕುಲಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಜ, ನವೀನ್ ಮೂಡುಶೆಡ್ಡೆ, ಸಚಿನ್ ಮೆಲ್ಕಾರ್, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಗೋವಿಂದ ಪ್ರಭು, ಪುರುಷೋತ್ತಮ ಸಾಲಿಯಾನ್, ರಾಮ್ ದಾಸ್ ಬಂಟ್ವಾಳ ಮತ್ತಿತರ ಪ್ರಮುಖರು ಹಾಜರಿದ್ದರು.

----------------

ವಿವಾದಾತ್ಮಕ ಆಡಿಯೋ: ಇಬ್ಬರ ಬಂಧನ

ವಿವಾದಕ್ಕೆ ಕಾರಣವಾದ ಆಡಿಯೋ ಹರಿಯಬಿಟ್ಟಿರುವ ಮಹಮ್ಮದ್ ಶರೀಫ್ ಹಾಗೂ ಹಸೈನಾರ್ ಎಂಬವರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕುಮಾರ್ ಹೇಳಿದ್ದಾರೆ.

ಮಾಧ್ಯಮಗಳ‌ ಜೊತೆ ಮಾತನಾಡಿದ ಅವರು, ಕೈಕಂಬ ಮಸೀದಿಯ ಈದ್ ಮಿಲಾದ್ ಮೆರವಣಿಗೆ ರೂಟ್ ಬದಲಾವಣೆ ನಾವು ಮಾಡಿಲ್ಲ, ಹಿಂದೂ ಸಂಘಟನೆಯವರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದರು. ಹಾಗಾಗಿ ಬಿ.ಸಿ. ರೋಡ್ ಜಂಕ್ಷನ್‌ನಲ್ಲಿ ಅವಕಾಶವನ್ನ ನೀಡಿದ್ದೆವು. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೆವು. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಬಿ.ಸಿ. ರೋಡಿನಲ್ಲಿ ಬಂದೋಬಸ್ತ್ ಮುಂದುವರಿಸುತ್ತೇವೆ ಎಂದವರು ತಿಳಿಸಿದರು.

------------------------

ಏಕಾಏಕಿ ರ್‍ಯಾಲಿ: ಮತ್ತೆ ಉದ್ವಿಗ್ನ ಸ್ಥಿತಿ

ಹಬ್ಬದ ಸಂಭ್ರಮದಲ್ಲಿದ್ದ ಮುಸ್ಲಿಂ ಯುವಕರ ಗುಂಪೊಂದು ಅನುಮತಿ‌ ಇಲ್ಲದೇ ಹಸಿರು ಬಾವುಟ ಹಿಡಿದು ಬೈಕ್ ರ್‍ಯಾಲಿ ನಡೆಸುತ್ತಾ ಬಿ.ಸಿ.ರೋಡಿನ‌ ಮುಖ್ಯ ರಸ್ತೆಯಲ್ಲಿ ಸಂಚರಿಸಿದ್ದು, ಹಿಂದೂ ಕಾರ್ಯಕರ್ತರನ್ನು ಕೆರಳಿಸಿತು. ಈ ಸಂದರ್ಭ ರಸ್ತೆಗೆ ನುಗ್ಗಿದ ಹಿಂದೂ ಕಾರ್ಯಕರ್ತರು, ಮುಸ್ಲಿಂ ಯುವಕರಿಗೆ ಬೈಕ್ ರ್‍ಯಾಲಿಗೆ ಅವಕಾಶ ನೀಡಿದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಈ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದು ಹಿಂದೂ ಕಾರ್ಯಕರ್ತರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.

------------

ಪೊಲೀಸ್ ವಾಹನ‌ ಪಲ್ಟಿಬಿ.ಸಿ.ರೋಡ್ ಚಲೋ‌ ಭದ್ರತೆಗೆ ಬಂದಿದ್ದ ಆರ್‌ಎಎಫ್ ವಾಹನ ಪಲ್ಟಿಯಾದ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ನಡೆದಿದೆ.

ಶಿವಮೊಗ್ಗದಿಂದ ಬಿ.ಸಿ. ರೋಡ್‌ಗೆ ಬರುವ ಸಂದರ್ಭದಲ್ಲಿ ಈ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಮೂವರು ಆರ್‌ಎಎಫ್ ಸಿಬ್ಬಂದಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

--------------

ಪೊಲೀಸರ ಜೊತೆ ವಾಗ್ವಾದ:

ಬಿ.ಸಿ.ರೋಡಿನಲ್ಲಿ ಬೆಳಗ್ಗಿನಿಂದ‌ ಮಧ್ಯಾಹ್ನ ವರೆಗೂ ಆತಂಕದ ವಾತಾವರಣವಿತ್ತು. ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಆಗಾಗ್ಗೆ ಮಾತಿನ ಚಕಮಕಿ‌ ನಡೆಯಿತು.

ಗುಂಪು ಗುಂಪಾಗಿ ಅಲ್ಲಲ್ಲಿ ಚದುರಿ ನಿಂತಿದ್ದ ಕಾರ್ಯಕರ್ತರನ್ನು ತೆರಳುವಂತೆ ಸೂಚಿಸಿದರೂ, ಹಿಂದೂ ಕಾರ್ಯಕರ್ತರು ನಿರಾಕರಿಸಿದ್ದು, ನಾವು ಸಂಜೆವರೆಗೂ ಹೋಗಲ್ಲ, ಇಲ್ಲೇ ಇರುತ್ತೇವೆ. ನಮಗೂ ಮೆರವಣಿಗೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಬೆಳಗ್ಗಿನಿಂದ ನಿಮ್ಮ ಮಾತು ಕೇಳಿ ಸುಮ್ಮನೆ ಇದ್ದೆವು, ಆದರೆ ಏಕಾಏಕಿ ರ್‍ಯಾಲಿ ಮಾಡಿದ್ದಾರೆ. ನಾವು ಈಗ ಈ ಜಾಗ ಬಿಟ್ಟು ಕದಲೋದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಗರಂ ಆದ ಪೊಲೀಸ್ ಅಧಿಕಾರಿಗಳು, ಇಲ್ಲಿಂದ ಹೋಗ್ತೀರಾ ಹೋಗಲ್ವಾ? ಎಂದು ಎಚ್ಚರಿಸಿದರು. ಬಳಿಕ ನಾಯಕರ ಜೊತೆ ಮಾತನಾಡಿ ಎಲ್ಲರೂ ವಾಪಸ್‌ ತೆರಳುವಂತೆ ಮಾಡುವಲ್ಲಿ ಯಶಸ್ವಿಯಾದರು.

ಆದರೂ ಬಿ.ಸಿ.ರೋಡಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ‌ 48 ಗಂಟೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.