ಸಾರಾಂಶ
ಗುರುವಂದನಾ ಸಂಸ್ಕೃತಿ ಸಿಂಚನಾ ಕಾರ್ಯಕ್ರಮದಲ್ಲಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈ ಅವರಿಗೆ ಸಂಸ್ಕೃತಿ ಶಿಲ್ಪ ಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿ ಇತ್ತೀಚೆಗೆ ನಡೆದ ಗುರುವಂದನಾ ಸಂಸ್ಕೃತಿ ಸಿಂಚನ ಕಾರ್ಯಕ್ರಮದಲ್ಲಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸನಾತನ್ ವೇದಿಕ್ ಸಂಸ್ಥಾನದ ಶ್ರೀ ಪ್ರೊ. ಸ್ವಾಮಿ ಚೈತನ್ಯಾನಂದ ಸರಸ್ವತಿ ಸಮ್ಮುಖದಲ್ಲಿ ಕಲಾವಿದ ಬಿ.ಕೆ.ಗಣೇಶ್ ರೈ ಹಾಗೂ ಮಂಜುಳಾ ಗಣೇಶ್ ರೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಹಿಂದೂ ಮಂದಿರದ ಆವರಣದಲ್ಲಿರುವ ಪ್ರಮುಖ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರಾದ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿ, ಬೆಳಗಾವಿ ನಿಡಸೊಸಿ ಶ್ರೀ ಜಗದ್ಗುರು ದುರುದುಂಡೇಶ್ವರ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಗೋವಾ ರಾಜ್ಯದ ಶ್ರೀ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಪುರಸ್ಕೃತ ಶ್ರೀ ಶ್ರೀ ಸದ್ಗುರು ಬ್ರಹ್ಮೇಶನಂದನಾಚಾರ್ಯ ಸ್ವಾಮೀಜಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದರು.