ಸಾರಾಂಶ
ಶ್ರೀಕಾಂತ್ ಹೆಮ್ಮಾಡಿ
ಕನ್ನಡಪ್ರಭ ವಾರ್ತೆ ಕುಂದಾಪುರನಗರಕ್ಕೆ ಹೊಂದಿಕೊಂಡಿರುವ ಪಂಚಗಂಗಾವಳಿ ನದಿ ಹಾಗೂ ಗಂಗೊಳ್ಳಿ ಬಂದರು ನಗರಿಯ ನಡು ಮಧ್ಯದಲ್ಲಿ ನೋಡುಗರನ್ನು ಆಕರ್ಷಿಸುವ, ಪ್ರವಾಸೋದ್ಯಮಕ್ಕೆ ಸೂಕ್ತವೆನಿಸಿದ 24 ಎಕರೆ ವ್ಯಾಪ್ತಿಯ ಬಬ್ಬುಕುದ್ರು ಪ್ರದೇಶ ಪ್ರಸ್ತುತ ಅನಾಥ ಪ್ರದೇಶದಂತೆ ಭಾಸವಾಗುತ್ತಿದೆ ಎನ್ನುವ ನೋವು ಪ್ರಕೃತಿ ಪ್ರಿಯರು ಹಾಗೂ ಸ್ಥಳೀಯರಲ್ಲಿದೆ.ಈ ಕುದ್ರುವಿನಿಂದ ಕುಂದಾಪುರದ ಕಡೆ ಇರುವ ಸುಮಾರು 500 ಮೀಟರ್ ಅಗಲದ ನದಿಯ ಸುಮಾರು 1500 ಮೀ. ವಿಸ್ತಾರದ ಪ್ರದೇಶ ಸಂಪೂರ್ಣ ಹೂಳು ತುಂಬಿ ಹೋಗಿದೆ. ಭರತ (ನೀರು ಉಕ್ಕೇರುವ) ಸಂದರ್ಭದಲ್ಲಿ ನದಿಯಲ್ಲಿ ಒಂದಡಿಯಷ್ಟು ನೀರು ಕಂಡರೂ, ಇಳಿತದ ಸಮಯದಲ್ಲಿ ಈ ಪ್ರದೇಶ ಮರುಭೂಮಿಯ ಓಯಸಿಸ್‌ನಂತೆ ಕಾಣುತ್ತದೆ. ಲಕ್ಷ ಲೋಡ್ ಮರಳು ತೆಗೆದರೂ ಇನ್ನಷ್ಟು ಇದೆ, ಎಂಬಷ್ಟು ಮರಳು ದಿಬ್ಬಗಳಿದ್ದು, ಅದರ ಮೇಲೆ ಗಿಡಗಳು ಬೆಳೆದು ಕಾಡುಗಳಾಗಿವೆ.ಇಲ್ಲಿ ಸಂಗ್ರಹವಾಗಿರುವ ಹೂಳು ದಿಣ್ಣೆ ದಿಣ್ಣೆಗಳಂತಾಗಿ ಹೊಸ ಕುದ್ರುಗಳಾಗಿವೆ ಎನ್ನುವ ಭಾವನೆಯನ್ನು ಸೃಷ್ಟಿ ಮಾಡಿದೆ. ಪಶ್ಚಿಮ ಘಟ್ಟದ ತಪ್ಪಲಿನಿಂದ ಹರಿಯುವ ಅಗಾಧ ಪ್ರಮಾಣದ ಮಳೆ ನೀರುಗಳೊಂದಿಗೆ ಸಾಗಿ ಬರುವ ಮರಳು ಇದೇ ಕುದ್ರುವಿನ ಸುತ್ತ-ಮುತ್ತ ಪ್ರದೇಶದಲ್ಲಿ ಸಂಗ್ರಹವಾಗಿ ಕೃತಕ ದಿಬ್ಬಗಳನ್ನು ನಿರ್ಮಾಣ ಮಾಡಿದೆ.
ಮುಖ್ಯವಾಗಿ ಕುಂದಾಪುರದ ಬಳಿ ಪಂಚಗಂಗಾವಳಿ ನದಿ ಬತ್ತಿ ಹೋಗುತ್ತಿದ್ದು, ಅದು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವಾಗ ಈ ಸಮಸ್ಯೆ ಪರಿಹರಿಸಲು ಯಾವುದೇ ಗಂಭೀರ ಪ್ರಯತ್ನ ಮಾಡದಿರುವುದು ಶೋಚನೀಯ ವಿಚಾರ ಎನ್ನುವ ನೋವು ಸ್ಥಳೀಯರಲ್ಲಿದೆ.ಪ್ರವಾಸೋದ್ಯಮಕ್ಕಾಗಿ ಬಬ್ಬುಕುದ್ರು ಬಳಸಬೇಕು ಎನ್ನುವ ಪ್ರಸ್ತಾಪಗಳು, ದಶಕಗಳಿಂದಲೂ ಸರ್ಕಾರದ ಫೈಲುಗಳಲ್ಲೇ ಗೆದ್ದಲು ತಿನ್ನುತ್ತಿದೆ. ಇಂತಹ ಅದ್ಭುತ ಪರಿಸರ ಪ್ರವಾಸೋದ್ಯಮಕ್ಕೂ ಬಳಸದಿರುವ ಪ್ರವಾಸೋದ್ಯಮ ಇಲಾಖೆಯ ಅಸಡ್ಡೆ ಎದ್ದು ಕಾಣುತ್ತದೆ. ಸ್ಥಳೀಯ ಒತ್ತಡ ಇಲ್ಲದಿರುವುದರಿಂದ ಒಂದು ದಶಕದ ಹಿಂದೆ ಈ ಬಗ್ಗೆ ಸಮೀಕ್ಷೆ ನಡೆಸಿದ ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಇಲಾಖೆ ನಂತರ ಸುಮ್ಮನಾದವು.
ಅರಣ್ಯ ಇಲಾಖೆ ಒಂದೆರಡು ದಶಕ ಈ ಪರಿಸರ ಅಭಿವೃದ್ಧಿಗೆ ಶ್ರಮಿಸಿತಾದರೂ, ಆಸಕ್ತ ಅಧಿಕಾರಿಗಳಿಗೆ ಸರ್ಕಾರದಿಂದ ಸೂಕ್ತ ಬೆಂಬಲ ಸಿಗದೆ ಇದ್ದುದರಿಂದ ಬಿಳಿ ಆನೆಯನ್ನು ಸಾಕುವ ಧೈರ್ಯವನ್ನು ಅಧಿಕಾರಿಗಳು ಮಾಡದೆ ಇರುವ ಸ್ಥಿತಿ ನಿರ್ಮಾಣವಾಗಿತ್ತು. ಹಿರಿಯ ಮುತ್ಸದ್ಧಿಗಳಾದ ದಿ.ಎ.ಜಿ.ಕೊಡ್ಗಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಹಾಗೂ ಡಾ.ವಿ.ಎಸ್.ಆಚಾರ್ಯ ಹಾಗೂ ಪ್ರಸ್ತುತ ಸಂಸದರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಇಲ್ಲಿ ಪ್ರವಾಸೋದ್ಯವನ್ನು ಬೆಳೆಸಬೇಕು ಎನ್ನುವ ಕುರಿತು ಸಹಮತ ವ್ಯಕ್ತಪಡಿಸಿದ್ದರಾದರೂ, ಅದೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ನೋವು ಸ್ಥಳೀಯ ಪ್ರಕೃತಿ ಪ್ರಿಯರಲ್ಲಿ ಇದೆ.ಪಂಚಗಂಗಾವಳಿ ಮೂಲಕ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆಯಾಗಬೇಕು. ಪ್ರವಾಸೋದ್ಯಮವಾಗಿ ಬಬ್ಬುಕುದ್ರು ಅಭಿವೃದ್ಧಿಯಾಗಬೇಕು ಎನ್ನುವ ಕನಸಿನ ಯೋಜನೆಗಳು ಮಾರ್ದನಿಸುತ್ತಿದ್ದರೂ, ಅದಕ್ಕೊಂದು ಸ್ಪಷ್ಟ ಚಿತ್ರಣ ಇನ್ನೂ ನಿರ್ಮಾಣವಾಗಿಲ್ಲ. ....................
ಅಧಿವೇಶನದಲ್ಲಿ ಪ್ರಸ್ತಾಪಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಬೊಬ್ಬಕುದ್ರು ವಿಚಾರ ಪ್ರಸ್ತಾಪ ಮಾಡಿ, ಅಲ್ಲಿ ತುಂಬಿರುವ ಅಗಾಧವಾದ ಮರಳು ಹೂಳಿಗೆ ಮುಕ್ತಿ ನೀಡುವ ಕಾಯಕಲ್ಪ ಸರ್ಕಾರದಿಂದ ಆಗಬೇಕು ಎನ್ನುವ ಪ್ರಾಸ್ತಾವನೆ ಮಾಡಿದ್ದಾರೆ.
.............ಪ್ರಕೃತಿಯ ಸೌಂದರ್ಯದ ಗಣಿಯಂತಿರುವ ಪಂಚಗಂಗಾವಳಿಯ ಬೊಬ್ಬುಕುದ್ರುವನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ಕನಸಿನ ಆಲೋಚನೆ ಸಾಕಾರಗೊಳಿಸಲು ಮಾಡಿರುವ ಪ್ರಯತ್ನಗಳು ನದಿ ರೋಧನವಾಗಿದೆ.
। ಯು.ಎಸ್.ಶೆಣೈ. ಹಿರಿಯ ಪತ್ರಕರ್ತ.