ಧಾರವಾಡ: ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಡಾ. ಬಾಬು ಜಗಜೀವನ ರಾಂ ಅವರು ಅಂದು ತೆಗೆದುಕೊಂಡ ನಿರ್ಧಾರಗಳು ಇವತ್ತಿಗೂ ಮಾದರಿ ಆಗಿವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಅಲ್ಲಮಪ್ರಭುಗಳ ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ ಭಾನುವಾರ ಆಯೋಜಿಸಿದ್ದ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿಯಲ್ಲಿ ಮಾತನಾಡಿದರು.

ಡಾ. ಬಾಬು ಜಗಜೀವನ ರಾಂ ಆದರ್ಶ ರಾಜಕಾರಣಿ ಅಷ್ಟೇ ಆಗಿರಲಿಲ್ಲ, ಅವರೊಬ್ಬ ರಾಷ್ಟ್ರಭಕ್ತ ರಾಜಕಾರಣಿ ಆಗಿದ್ದರು. ಸದಾ ಕಾಲ ದೇಶದ ಅಭಿವೃದ್ಧಿಪರ ನಿರ್ಧಾರ ಕೈಗೊಳ್ಳುತ್ತಿದ್ದರು ಎಂದರು.

ಡಾ. ಬಾಬು ಜಗಜೀವನ ರಾಂ ಅವರು ಸರಳ, ಸಜ್ಜನರಾಗಿ, ಸಮಾನತೆಗಾಗಿ ಹೋರಾಟ ಮಾಡಿದವರು. ನಾವು ಯಾರಿಗಿಂತ ಕಡಿಮೆ ಇಲ್ಲ. ನಮ್ಮಲ್ಲಿ ಅಗತ್ಯ ಶಕ್ತಿ, ಜ್ಞಾನವಿದ್ದರೆ ಯಾವುದೇ ಹಂತಕ್ಕಾದರೂ ಹೋಗಿ ತಲುಪಬಹುದು. ಶಿಕ್ಷಣ ಮತ್ತು ಹೋರಾಟ ಜೀವನದಲ್ಲಿ ಮುಖ್ಯವಾದ ಅಂಶಗಳು. ಆದರೆ, ಅವು ಸಂಸ್ಕಾರ, ಮಮತೆ, ಸೌಜನ್ಯ, ಮಾನವೀಯತೆ ಮತ್ತು ನ್ಯಾಯದೊಂದಿಗೆ ಇರಬೇಕು. ಹೋರಾಟ ಸಂಸ್ಕಾರದಿಂದ, ಸೌಜನ್ಯದಿಂದ ಕೂಡಿದ್ದರೆ, ಅದು ಜೀವನವನ್ನು ಶ್ರೇಷ್ಠಗೊಳಿಸುತ್ತದೆ ಎಂದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಡಾ. ಬಾಬು ಜಗಜೀವನ್ ರಾಂರು ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ ಸಮಾನತೆಗಾಗಿ ಮಹತ್ವದ ಕೆಲಸ ಮಾಡಿದವರು. ಅವರ ಸಾಧನೆಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ವಿಶೇಷವಾಗಿ, ನ್ಯಾಯ ಮತ್ತು ಸಮಾನತೆ ಸ್ಥಾಪನೆಗೆ ಅವರು ಪ್ರಮುಖ ಪಾತ್ರವಹಿಸಿದ್ದರು. ಯುವಕರು ಅವರ ಆದರ್ಶಗಳನ್ನು ಅನುಸರಿಸಿ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.


ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂದು ಹೇಳುವಂತೆ, ಡಾ. ಬಾಬು ಜಗಜೀವನ ರಾಂ ಅವರ ಬಾಲ್ಯದ ಜೀವನವನ್ನು ನೋಡಿದಾಗ ಅವರ ಸಮರ್ಥತೆ, ಸಮಾನತೆ ಚಿಂತನೆ ಮತ್ತು ಪ್ರತಿಭಟನೆ ಸ್ಪಷ್ಟವಾಗಿ ಕಾಣುತ್ತದೆ. ಬಾಲ್ಯದಿಂದಲೇ ಅವರಲ್ಲಿ ನಾಯಕತ್ವದ ಗುಣಗಳು ಬೆಳೆದಿದ್ದವು. ಈ ಕಾರಣದಿಂದ ಅವರು ಭಾರತದ ರಾಜಕಾರಣದಲ್ಲಿ ಧೀರ್ಘ ಕಾಲ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದರು.

ನ್ಯಾಯವಾದಿ ರಂಗಧಮಯ್ಯ ಜೆ.ಸಿ. ಜನಕಲೋಟಿ ವಿಶೇಷ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೊತ್ತರ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸಿದ ಮುಖಂಡರನ್ನು ಗೌರವಿಸಲಾಯಿತು.

ಹುಬ್ಬಳ್ಳಿಯ ಆನಂದ ನಗರ ಕಲ್ಪವೃಕ್ಷ ವುಮೆನ್ ಮತ್ತು ರೂರಲ್ ಡೆವಲಪ್ಟೆಂಟ್ ಸೊಸೈಟಿಯಿಂದ ಅನೀಮಿಯಾ ತಡೆಗಟ್ಟುವ ಕುರಿತು ಸಾರ್ವಜನಿಕರ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಜಿಲ್ಲಾ ಹಾಗೂ ಉಪ ವಿಭಾಗ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಜಿಲ್ಲಾ ಮಟ್ಟದ ಹಾಗೂ ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿ ಜಾಗೃತಿ ಸಮಿತಿಯ ಸದಸ್ಯರು ವೇದಿಕೆಯಲ್ಲಿದ್ದರು. ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು. ಎಡಿಸಿ ಗೀತಾ ಸಿ.ಡಿ. ಸಂವಿಧಾನದ ಪೀಠಿಕೆಯನ್ನು ಸಭಿಕರಿಗೆ ಭೋದಿಸಿದರು. ಎಂ.ಬಿ. ಸನ್ನೇರಿ ವಂದಿಸಿದರು. ಪ್ರವೀಣ ಮಸಕಿ ನಿರೂಪಿಸಿದರು.