ಹಾವೇರಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ 135ನೇ ಹಾಗೂ ಡಾ.ಬಾಬು ಜಗಜೀವನರಾಂ 119ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಹಾವೇರಿ: ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಬಾಬಾಸಾಹೇಬ್ ಅಂಬೇಡ್ಕರರು ದೇಶಕ್ಕೆ ವಿಶೇಷವಾಗಿ ಕೊಟ್ಟ ಸಂವಿಧಾನವು ಶಾಂತಿ, ಸಮಾಧಾನ, ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಬದುಕಲು ದಾರಿ ದೀಪವಾಗಿದೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇಶದ ಉಪ ಪ್ರಧಾನಿಯಾಗಿ ಬಾಬು ಜಗಜೀವನರಾಂ ಅವರು ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ನಮ್ಮೆಲ್ಲರಿಗೂ ಶಾಂತಿ, ಸಮಾಧಾನ, ಸಹಬಾಳ್ವೆಯಿಂದ ಬದುಕಲಿಕ್ಕೆ ಪ್ರಪಂಚದಲ್ಲಿ ವಿಶೇಷವಾದಂತಹ ಸಂವಿಧಾನ ಕೊಟ್ಟು ಎಲ್ಲರ ಬಾಳಿಗೆ ಬೆಳಕಾಗಿದ್ದಾರೆ. ಉಭಯ ನಾಯಕರನ್ನು ದೇಶ ಎಂದೂ ಕೂಡ ಮರೆಯುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷವಾದರೂ ಇನ್ನೂ ಕೆಲವು ಹಳ್ಳಿಗಳಲ್ಲಿ ಅಸ್ಪೃಶ್ಯತೆ ಸಂಪೂರ್ಣವಾಗಿ ಹೋಗಿಲ್ಲ. ಬಸವಣ್ಣನವರ ಕ್ರಾಂತಿಯಿಂದ ಜಾತಿ ವ್ಯವಸ್ಥೆ ಇನ್ನೂ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲವೆಂದು ವಿಷಾದಿಸಿದರು. ನಾವೆಲ್ಲರು ಈ ಉಭಯ ನಾಯಕರ ಜೀವನ ಚರಿತ್ರೆ, ಅವರು ಮಾಡಿದ ತ್ಯಾಗ, ಸಾಧನೆಗಳನ್ನು ಓದಿ ತಿಳಿದುಕೊಂಡು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಾಂತಿಧೂತರಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರರು ರಾಷ್ಟ್ರೀಯವಾದಿ, ಕಾನೂನು ತಜ್ಞರಾಗಿ, ಇತಿಹಾಸಕಾರರಾಗಿ, ಮಹಾನ್ ದಾರ್ಶನಿಕರಾಗಿ, ಅಪ್ರತಿಮ ಚಿಂತಕ, ಮಾನವ ಶಾಸ್ತ್ರಜ್ಞ, ಕ್ರಾಂತಿಕಾರಿಯಾಗಿ, ಭಾರತ ಸಂವಿಧಾನದ ಶಿಲ್ಪಿಯಾಗಿ ಮಹತ್ತರ ಸಾಧನೆ ಮಾಡಿದ್ದಾರೆ. ಅದೇ ರೀತಿ ಬಾಬು ಜಗಜೀವನರಾಂ ಅವರು ಸಹಿತ ಸ್ವತಂತ್ರ ಸೇನಾನಿ, ಶೋಷಣೆ ರಹಿತ, ಗಾಂಧಿವಾದಿ, ಸಾಮಾಜಿಕ, ರಾಜಕೀಯ, ನವಭಾರತ ನಿರ್ಮಾಣಕ್ಕೆ ಶ್ರಮಿಸಿದ ಧೀಮಂತ ನಾಯಕರಾಗಿದ್ದಾರೆ. ಶಾಲಾ ದಿನಗಳಲ್ಲಿ ಅಸ್ಪೃಶ್ಯತೆಗೆ ಒಳಗಾದ ಇವರು ನರಕ ವೇದನೆ ಅನುಭವಿಸಿದ್ದರು. ಅಲ್ಲಿನ ವ್ಯವಸ್ಥೆ, ಜನರ ನಡವಳಿಕೆ, ತಾರತಮ್ಯ ಇವರನ್ನು ದೂರ ಇಟ್ಟಿದ್ದರು. ಇವುಗಳನ್ನು ಲೆಕ್ಕಿಸದೆ ಅಸ್ಪೃಶ್ಯತೆ, ಅನಿಷ್ಟ ಪದ್ಧತಿ ಹೊಡೆದೊಡಿಸಬೇಕಾದರೆ ವಿದ್ಯೆಯನ್ನೇ ಅಸ್ತ್ರವಾಗಿ ಮಾಡಿಕೊಂಡು ಸಾಧನೆಗೈದರು ಎಂದರು.ಪ್ರಪಂಚದ ವಿವಿಧ ದೇಶಗಳಲ್ಲಿ 32ಕ್ಕೂ ಹೆಚ್ಚು ಪದವಿ ಪಡೆದ ಅಂಬೇಡ್ಕರ್‌ರು, 60ಕ್ಕಿಂತ ಹೆಚ್ಚು ದೇಶದ ಸಂವಿಧಾನವನ್ನು ಅಧ್ಯಯನ ಮಾಡಿ ಜಗತ್ತಿಗೆ ಶ್ರೇಷ್ಠವಾದ ಸಂವಿಧಾನವನ್ನು ಭಾರತಕ್ಕೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ, ಭ್ರಾತೃತ್ವ, ನ್ಯಾಯ, ಪ್ರಜಾಪ್ರಭುತ್ವದ ತಳಹದಿ ಮೇಲೆ ಸಂವಿಧಾನ ರಚಿಸಿದ್ದಾರೆ. ಸಾಮಾಜಿಕ ನ್ಯಾಯ, ಮತದಾನದ ಹಕ್ಕನ್ನು ಕೊಟ್ಟಿದ್ದಾರೆ. ಆಚಾರ ವಿಚಾರಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಉಭಯ ನಾಯಕರ ಜೀವನಾದರ್ಶಗಳು ನಮಗೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ಉಭಯ ನಾಯಕರ ಭಾವಚಿತ್ರ ಮೆರವಣಿಗೆ: ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ನಂತರ ಉಭಯ ನಾಯಕರ ಭಾವಚಿತ್ರವನ್ನು ಸಾರೋಟದಲ್ಲಿರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಅಂಬೇಡ್ಕರ್ ಭವನ ತಲುಪಿತು. ಈ ವೇಳೆ ಬೈಕ್ ರ‍್ಯಾಲಿ ನಡೆಸಲಾಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.ಸಾಹಿತಿ ಹನುಮಂತಗೌಡ ಗೊಲ್ಲರ ಅವರು ಡಾ. ಬಿ.ಆರ್. ಅಂಬೇಡ್ಕರ್ ಕುರಿತು, ಶಿಕ್ಷಕ ಮಹದೇವಪ್ಪ ಕರಿಯಣ್ಣವರ ಡಾ. ಬಾಬು ಜಗಜೀವನರಾಂ ಕುರಿತು ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಸ್ಪಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಉಪವಿಭಾಗಾಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಶರಣಮ್ಮ ಕೆ., ಮುಖಂಡರಾದ ಬಸವರಾಜ ಹೆಡಿಗ್ಗೊಂಡ, ಪರಮೇಶ್ವರಪ್ಪ ಮೇಗಳಮನಿ, ಉಡಚಪ್ಪ ಮಾಳಗಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸುರೇಶ ಛಲವಾದಿ, ಮಲ್ಲೇಶಪ್ಪ ಕರಿಗಾರ, ಹೊನ್ನೇಶ್ವರ ತಗಡಿನಮನಿ, ರಮೇಶ ಆನವಟ್ಟಿ, ಸುಭಾಸ್ ಬೆಂಗಳೂರು, ಸಂಜಯಗಾಂಧಿ ಸಂಜೀವಣ್ಣನವರ ಇತರರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ್ ವರಗಪ್ಪನವರ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.