ಕನಕಗಿರಿ: ಆಧುನಿಕ ಕೃಷಿ ಪದ್ಧತಿಗೆ ಹೆಚ್ಚು ಪ್ರಾಧ್ಯಾನ್ಯತೆ ನೀಡುವ ಮೂಲಕ ದೇಶದ ರೈತರ ಏಳ್ಗೆಗೆ ಶ್ರಮಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದು ಪಪಂ ಅಧ್ಯಕ್ಷೆ ತನುಶ್ರೀ ರಾಮಚಂದ್ರ ಹೇಳಿದರು.

ಅವರು ತಾಲೂಕಾಡಳಿತದಿಂದ ಕನಕಾಚಲಪತಿ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಅವರ 19ನೇ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಅಂಬೇಡ್ಕರರಂತೆ ಬಾಬೂಜಿ ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದಾರೆ. ಗಾಂಧಿ ವಿಚಾರಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಜೈಲುವಾಸ ಅನುಭವಿಸಿರುವ ಬಾಬೂಜಿ ಅತೀ ಸಣ್ಣ ವಯಸ್ಸಿನಲ್ಲಿ ಸಂಸದರಾಗಿ ಲೋಕಸಭೆ ಪ್ರವೇಶಿಸಿ ಜನಸೇವೆ ಮಾಡಲು ಮುಂದಾದರು. ಮುಂದೆ ಅವರು ಕೇಂದ್ರ ಕೃಷಿ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ದೇಶದ ರೈತರು ಏಳ್ಗೆಗೆ ಹಗಲಿರುಳು ಶ್ರಮಿಸಿದ್ದಾರೆ ಎಂದರು.

ಕಂಪ್ಲಿಯ ಕನ್ನಡ ಉಪನ್ಯಾಸಕ ಎಚ್.ಪಂಪಾಪತಿ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕರಿಗೆ ಕನಿಷ್ಠ ವೇತನ, ಪಿಎಫ್, ಇನ್ಸೂರೆನ್ಸ್, ರಕ್ಷಣಾ ಸಚಿವರಾಗಿ ಪಾಕಿಸ್ತಾನದ ವಿರುದ್ಧ ಗೆಲುವಿಗೆ ಶ್ರಮಿಸಿದರು. ಸತತ ೮ ಬಾರಿ ಸಂಸದರಾಗಿ ಹಲವು ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದರು ಎಂದು ಸ್ಮರಿಸಿದರು.

ತಹಸೀಲ್ದಾರ ವಿಶ್ವನಾಥ ಮುರುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇದಕ್ಕೂ ಮೊದಲು ಬಾಬೂಜಿ ಭಾವಚಿತ್ರ ಮೆರವಣಿಗೆ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ವಾಲ್ಮೀಕಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಕನಕಾಚಲಪತಿ ವೇದಿಕೆಯವರೆಗೆ ನಡೆಯಿತು.

ಈ ವೇಳೆ ತಾಪ ಇಒ ರಾಜಶೇಖರ, ಪಿಐ ವಿ.ನಾರಾಯಣ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸಿಡಿಪಿಒ ವಿರೂಪಾಕ್ಷಿ, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಸಂಗಪ್ಪ ಜೈನಾಪೂರ, ನಾಗೇಶ ಬಡಿಗೇರ, ಕನಕಪ್ಪ ಮ್ಯಾಗಡೆ, ಶಾಂತಪ್ಪ ಬಸರಿಗಿಡ, ಗಂಗಾಧರ ಚೌಡ್ಕಿ ಸೇರಿದಂತೆ ಇತರರಿದ್ದರು.