ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ತೊಗರಿ ಕಣಜ ಕಲಬುರಗಿಯಲ್ಲಿ ನೆಟೆ ರೋಗಕ್ಕೆ ತುತ್ತಾಗುತ್ತ ಟಿಎಸ್3 ಆರ್ ತಳಿ ಬೀಜ ಬದಲಿ ಜಾಗೃತಿ ಅಭಿಯಾನ ನಿರೀಕ್ಷೆಯಂತೆ ನಡೆದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಜೋಡಿ ತೀವ್ರ ಅಸಮಾಧಾನ ಹೊರಹಾಕಿತು.ನಗರದಲ್ಲಿ ಶನಿವಾರ ನಡೆದ ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆ ಸಿದ್ಧತೆ ಮತ್ತು ಪ್ರವಾಹ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಚಿವರಿಬ್ಬರು ಮಾತನಾಡಿದರು.
ಪದೇ ಪದೇ ನೆಟೆ ರೋಗಕ್ಕೆ ತುತ್ತಾಗಿ ರೈತರು ಭಾರಿ ಹಾನಿಗೆ ಕಾರಣವಾಗುತ್ತಿರುವ ಟಿಎಸ್ 3 ಆರ್ ತೊಗರಿ ಬೀಜ ಬಿತ್ತನೆಯಾಗದಂತೆ ನಿಗಾ ಇಡುವಲ್ಲಿ ಹಾಗೂ ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ವಿಚಾರದಲ್ಲಿ ಇಲ್ಲಿನ ಕೃಷಿ ಇಲಾಖೆ ಸಂಪೂರ್ಣ ಎಡವಿದೆ. ಈ ಬಾರಿ ಮತ್ತೆ ಶೇ. 60ರಷ್ಟು ಟಿಎಸ್ 3 ಆರ್ ಬೀಜವೇ ಭೂಮಿ ಸೇರುವ ಆತಂಕದ ವಿಷಯ ಸಭೆಯಲ್ಲಿ ವಿಸ್ತೃತ ಚರ್ಚೆಗೆ ಗ್ರಾಸವಾಯಿತು.ಹದವಾಗಿ ಮಳೆ ಸುರಿದಿದ್ದು ಶೇ.30ರಷ್ಟು ಬಿತ್ತನೆಯಾಗಿದೆ. ಜಿಲ್ಲಾದ್ಯಂತ ಏಕಕಾಲಕ್ಕ ಬಿತ್ತನೆ ಸಾಗಿದೆ ಎಂದು ಕೃಷಿ ಅಧಿಕಾರಿ ಸಮದ್ ಪಟೇಲರ ವಿವರಣೆಯ ಮಧ್ಯದಲ್ಲೇ ತೊಗರಿ ತಳಿ ವಿಚಾರವಾಗಿ ಪ್ರಸ್ತಾಪಿಸಿದ ಡಾ. ಶರಣಪ್ರಕಾಶ ಪಾಟೀಲರು ಬೀಜ ಬದಲಿ ಅಭಿಯಾನಕ್ಕೆ ಹಿನ್ನೆಡೆಯಾಗಿರುವ ಸಂಗತಿ ಅರಿತು ಅಸಮಾಧಾನ ಹೊರಹಾಕಿದರು.
ತೊಗರಿ ಬಿತ್ತನೆಯ ಹೊಸ ತಳಿಗಳ ಬಗ್ಗೆ ವಿವರಿಸುತ್ತ ಅಧಿಕಾರಿಗಳು ಶೇ.30ರಷ್ಟು ಹೊಸ 811, 852 ತೊಗರಿ ತಳಿಗಳು ರೈತರಲ್ಲಿಗೆ ತಲುಪಿಸಿರುವ ವಿಚಾರ ಸಚಿವರ ಗಮನ ಸೆಳೆಯಿತು.ಈ ಬಗ್ಗೆ ಕಳವಳ ಹೊರಹಾಕಿದ ಸಚಿವ ಡಾ. ಶರಣಪಕಾಶ ಪಾಟೀಲ್, ನೆಟೆ ರೋಗದಿಂದಗಿ ರೈತರ ಪಾಲಿನ ಸಿಂಹಸ್ವಪ್ನವಾಗಿರುವ ಟಿಎಸ್ 3 ಆರ್ ಬೀಜ ರೈತರಿಂದ ದೂರವಾಗಿಸಿ ಹೊಸ ತಳಿಗಳಿಗೆ ಬೆಂಬಲಿಸುವಂತೆ ಅರಿವು ಮೂಡಿಸುವ ಕೆಲಸ ಇಲಾಖೆ ನಿರೀಕ್ಷೆಯಂತೆ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ರೈತರಲ್ಲಿ ಇನ್ನೂ ಟಿಎಸ್ 3 ಆರ್ ತಳಿ ಬೀಜಗಲಿವೆ. ಬದಲಿ ಮಾಡಲಾಗುತ್ತಿಲ್ಲವೆಂದ ಅಧಿಕಾರಿಗಳ ವಿವರಣೆಗೆ ಗರಂ ಆದ ಸಚಿವರು ಮೊದಲು ಆ ಕೆಲಸ ಮಾಡಿರಿ, ಬೀಜ ಬದಲಿಸಿ ಹೊಸ ತಳಿ ಬಳಕೆಯಾದಲ್ಲಿ ನೆಟೆ ರೋಗದ ಸಮಸ್ಯೆ ನಿಲ್ಲುತ್ತದೆ ಎಂದರು.ಕಳೆದ ವರ್ಷ ಕಲಬುರಗಿ, ಚಿತ್ತಾಪುರ, ಕಾಳಗಿ ತಾಲೂಕಿನಲ್ಲಿ ಕಳಪೆ ಬೀಜ ವಿತರಣೆಯಾಗಿದ್ದರಿಂದ ರೈತರು ತಮ್ಮ ಬೆಳೆ ಹಾನಿ ಮಾಡಿಕೊಂಡಿದ್ದಾರೆ ಇದು ಪುನರಾವರ್ತನೆಯಾಗಬಾರದು ಎಂದು ಸಚಿವದ್ವಯರು ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಳೆದ ವರ್ಷದಲ್ಲಿ ಬೆಳೆ ವಿಮೆ, ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ತೊಗರಿ ನೆಟೆ ರೋಗ ಪ್ರಕರಣದಲ್ಲಿ ಒಟ್ಟಾರೆ 697.34 ಕೋಟಿ ರೂ. ಪರಿಹಾರ ರೈತರಿಗೆ ಸಿಕ್ಕಿದೆ. ಕಳೆದ ಬಾರಿ 1.62 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದರು, ಈ ಸಲ 2.50 ಲಕ್ಷಕ್ಕೆ ಹೆಚ್ಚಿಸಲು ಗುರಿ ಹೊಂದಿದ್ದು, ಇದೂವರೆಗೆ 15 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷವಾಗಿ ಡಿಎಪಿ ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಆರ್.ಎಸ್.ಕೆ. ಕೇಂದ್ರದಲ್ಲಿ ಡಿ.ಎ.ಪಿ. ದಾಸ್ತಾನಿಕರಿಸಬೇಕು. ಕಳಪೆ, ನಕಲಿ ಬೀಜ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.
ತೋಟಗಾರಿಕೆ ಇಲಾಖೆ ಚರ್ಚೆ ವೇಳೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ತೋಟಗಾರಿಕೆ ಬೆಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ತೋಟಗಾರಿಕೆ ಬೆಳೆ ವಿಸ್ತೀರ್ಣ ಹೆಚ್ಚಿಸಬೇಕು ಎಂದರು.ರೈತರ ಆತ್ಮಹತ್ಯೆಗೆ ಕಳವಳ, ಪರಿಹಾರ ವಿಳಂಬ ಸಲ್ಲದು:
ಸಭೆಯಲ್ಲಿ ರೈತರ ಆತ್ಮಹತ್ಯೆ ಚರ್ಚೆ ಸಂದರ್ಭದಲ್ಲಿ ಇನ್ನು 5 ಪ್ರಕರಣ ಪರಿಹಾರ ನೀಡಲು ಬಾಕಿ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹೇಳಿದಾಗ, ಸಚಿವ ಪ್ರಿಯಾಂಕ್ ಖರ್ಗೆ ಆತ್ಮಹತ್ಯೆಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಾ, ಇಂತಹ ಪ್ರಕರಣದಲ್ಲಿ ಪರಿಹಾರ ವಿಳಂಬ ಸಲ್ಲದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.ಸಭೆಯಲ್ಲಿ ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆಗಳು- ಈ ಸಲ ಅತಿವೃಷ್ಟಿಗೆ ಬೆಳೆ ಹಾನಿ ಸಾಧ್ಯತೆ ಇದ್ದು, ಹಾನಿ ತಡೆಗೆ ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ
- ಹೆಚ್ಚು ಮಳೆಗೆ ಆಗಬಹುದಾದ ಹಾನಿ ತಪ್ಪಿಸಲು ಬಸಿಗಾಲುವೆ ನಿರ್ಮಾಣಕ್ಕೆ ಸೂಚಿಸಿರಿ- ಬೆಳೆ ವಿಮೆ ಮಾಡಿಸಲು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು.
- ಪರವಾನಗಿ ಇಲ್ಲದೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿದಲ್ಲಿ ಖಡಕ್ ಕ್ರಮ ಕೈಗೊಳ್ಳಿ- ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕೃಷಿ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಿ
- ಕ್ರಮ ಕೈಗೊಳ್ಳದಿದ್ರೆ ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರನ್ನೆ ಇದಕ್ಕೆ ಹೊಣೆ ಮಾಡಲಾಗುವುದು- ತಾಲೂಕು ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿ ಎಂದು ಡಿ.ಸಿ ಬಿ.ಫೌಜಿಯಾ ತರನ್ನುಮ್ ಸೂಚನೆ