ರಾಜ್ಯದಲ್ಲಿ ಜಾರಿ ಮಾಡುವ ದಿಸೆಯಲ್ಲಿ ಪ್ರಯತ್ನ ನಡೆಸಿದ್ದು, ಇರುವ ತೊಡಕನ್ನು ನಿವಾರಣೆ ಮಾಡಿ ಜಾರಿ ಮಾಡುವಂತೆ ಒತ್ತಡ
ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಹಿಂದುಳಿದ ವರ್ಗವೇ ಬೆನ್ನೆಲಬು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸ ಹೇಳಿದ್ದಾರೆ.
ಕೊಪ್ಪಳ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಅನೇಕ ಯೋಜನೆ ಜಾರಿ ಮಾಡಿದೆ.ಹಿಂದುಳಿದ ವರ್ಗಗಳ ಆಯೋಗದ ವರದಿ ಜಾರಿ ಮಾಡುವಲ್ಲಿ ವಿಳಂಬವಾಗಿರುವುದಕ್ಕೆ ಪ್ರಮುಖವಾಗಿರುವ ಕಾರಣ ಮೀಸಲಾತಿಯ ಪ್ರಮಾಣ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡದೆ ಇರುವುದು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಆಟವಾಡುತ್ತಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಜಾರಿ ಮಾಡುವ ದಿಸೆಯಲ್ಲಿ ಪ್ರಯತ್ನ ನಡೆಸಿದ್ದು, ಇರುವ ತೊಡಕನ್ನು ನಿವಾರಣೆ ಮಾಡಿ ಜಾರಿ ಮಾಡುವಂತೆ ಒತ್ತಡ ಹಾಕುವುದಾಗಿ ಹೇಳಿದರು.
2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವ ದಿಸೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಪಕ್ಷದ ಹಿಂದುಳಿದ ವರ್ಗಗಳ ಸಂಘಟನೆ ಮಾಡಲಾಗುವುದು ಎಂದರು.ದೇಶದಲ್ಲಿ ನೀಟ್ ಪರೀಕ್ಷೆಯ ವೇಳೆ ಪದೇ ಪದೆ ಸಮಸ್ಯೆಯಾಗುತ್ತಿದೆ.ಇದರಿಂದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಇಟಿ ನಡೆಸುವಾಗ ಆಗದೆ ಇರುವ ಸಮಸ್ಯೆ ನೀಟ್ ವೇಳೆಯಲ್ಲಿ ಯಾಕೆ ಆಗುತ್ತಿದೆ ಎಂದು ಕಿಡಿಕಾರಿದರು. ನೀಟ್ ಪರೀಕ್ಷೆಯ ಬದಲಿಗೆ ಈ ಹಿಂದಿನಂತೆ ಸಿಇಟಿ ಮೂಲಕವೇ ವೈದ್ಯಕೀಯ ಸೀಟ್ ಹಂಚಿಕೆಯಾಗುವಂತೆ ಆಗಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಪ್ರಕ್ರಿಯೇ ನಡೆದಿಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಠಿಯಾಗಿದೆ. ಈ ಕುರಿತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.ಪಕ್ಷದ ಕೆಲ ನಾಯಕರು ಈ ಕುರಿತು ಹೇಳಿಕೆ ನೀಡಿದ್ದರೇ ಅದು ಅವರ ವೈಯಕ್ತಿಕ ಹೇಳಿಕೆಯಾಗುತ್ತದೆಯೇ ಹೊರತು ಅದು ಪಕ್ಷದ ಹೇಳಿಕೆಯಾಗುವುದಿಲ್ಲ. ಅದೇನೆ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಯಂಕಣ್ಣ ಯರಾಶಿ, ಹನುಮಂತಗೌಡ, ಕೃಷ್ಣಾ ಇಟ್ಟಂಗಿ, ಜ್ಯೋತಿ ಗೊಂಡಬಾಳ ಸೇರಿದಂತೆ ಅನೇಕರು ಇದ್ದರು.