ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಧುಮಾಲರನ್ನು ಬಂಧಿಸಿ

| Published : Oct 24 2025, 01:00 AM IST

ಸಾರಾಂಶ

ರಾಮನಗರ: ವಸತಿ ನಿಲಯದಲ್ಲಿ ಅಡುಗೆ ಕೆಲಸ ಮಾಡುವ ಮಂಜುಳಾ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಧುಮಾಲ, ವಾರ್ಡನ್ ಸಾಕಮ್ಮ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸಬೇಕು ಹಾಗೂ ಡಿವೈಎಸ್ಪಿ ರಮೇಶ್ ಅವರನ್ನು ವರ್ಗಾವಣೆ ಮಾಡುವಂತೆ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜು ಒತ್ತಾಯಿಸಿದರು.

ರಾಮನಗರ: ವಸತಿ ನಿಲಯದಲ್ಲಿ ಅಡುಗೆ ಕೆಲಸ ಮಾಡುವ ಮಂಜುಳಾ ಮೇಲೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಧುಮಾಲ, ವಾರ್ಡನ್ ಸಾಕಮ್ಮ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸಬೇಕು ಹಾಗೂ ಡಿವೈಎಸ್ಪಿ ರಮೇಶ್ ಅವರನ್ನು ವರ್ಗಾವಣೆ ಮಾಡುವಂತೆ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕುಂಬಾಪುರ ಬಳಿಯಿರುವ ಮಾದರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮಂಜುಳಾ ಅಡುಗೆ ಕೆಲಸ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮಂಜುಳಾ ಅವರ ಮೇಲೆ ತಾಲೂಕು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಮಧುಮಾಲ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಹಲ್ಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಜಿಲ್ಲೆಗೆ ಮತ್ತು ಅಧಿಕಾರಿ ವರ್ಗಕ್ಕೆ ಕಳಂಕ ತಂದಂತಾಗಿದೆ ಎಂದರು.

ಕಳೆದ ಐದು ವರ್ಷಗಳಿಂದ ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಅಕ್ಕಿ ಕಳ್ಳತನದ ಪ್ರಕರಣದಲ್ಲಿ ಅಮಾನತ್ತುಗೊಂಡಿದ್ದ ಮಧುಮಾಲಾ ಅವರು ಕಲ್ಯಾಣಾಧಿಕಾರಿಯಾಗಿ ಬಂದ ನಂತರ ಸಮಸ್ಯೆ ಎದುರಾಗಿದೆ. ದಲಿತ ವರ್ಗಕ್ಕೆ ಸೇರಿರುವ ಕಾರಣ ಅಡುಗೆ ಮಾಡಿಸಬಾರದು ಎಂಬುದು ಅವರ ಉದ್ದೇಶವಾಗಿದೆ ಎಂದು ದೂರಿದರು.

ಡಿಸಿಆರ್‌ಇ ಪೊಲೀಸ್ ಠಾಣೆಗೆ ಮಂಜುಳಾ ನೀಡಿದ ದೂರನ್ನು ದಾಖಲಿಸಲು ಅಧಿಕಾರಿಗಳು ಹಿಂದೇಟು ಹಾಕಿದರು. ಕೊನೆಗೆ ಸಂಘಟನೆಗಳ ಒತ್ತಡಕ್ಕೆ ಮಣಿದು ಮಧುಮಾಲಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇಲಧಿಕಾರಿಯಾಗಿ ಜಾತಿನಿಂದನೆ ತಾರತಮ್ಯ ಮಾಡುವುದು ಕಾನೂನು ಅಪರಾಧ. ಆದ್ದರಿಂದ ಎಸ್ಸಿ/ಎಸ್ಸಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುವುವುದರಿಂದ ಕೂಡಲೇ ಮಧುಮಾಲ ಅವರನ್ನು ಬಂಧಿಸಿ, ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಡಿಸಿಆರ್‌ಇ ಪೋಲಿಸ್ ಠಾಣೆಗೆ ಬರುವ ದೂರುಗಳಿಗೆ ಡಿವೈಎಸ್ಪಿ ಸಿ.ಎನ್. ರಮೇಶ್ ಸರಿಯಾಗಿ ಸ್ಪಂದಿಸುತ್ತಿಲ್ಲ. ಠಾಣೆಗೆ ಬರುವ ಬಹುತೇಕ ದೂರುಗಳನ್ನು ಆಮಿಷಗಳಿಂದ ಇಲ್ಲವೆ ಬೆದರಿಕೆ ಗಳಿಂದ ರಾಜಿಸಂಧಾನ ಮಾಡಿಸಿ, ದೂರುದಾರರನ್ನು ಅಲೆದಾಡಿಸುತ್ತಿದ್ದಾರೆ. ಪೋಲಿಸ್ ಠಾಣೆಯ ಸಿ.ಎನ್.ರಮೇಶ್‌ ಅವರನ್ನು ವರ್ಗಾವಣೆ ಮಾಡಬೇಕು. ಆ ಸ್ಥಾನಕ್ಕೆ ದಕ್ಷ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ದೂರುದಾರರಾದ ಮಂಜುಳಾ ಮಾತನಾಡಿ, ನಾನು ಹಾಸ್ಟೆಲ್‌ನಲ್ಲಿ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನನಗೆ ಕಪಾಳ ಮೋಕ್ಷ ಮಾಡಿ ಕೆಲಸಕ್ಕೆ ಬರದಂತೆ ಧಮಕಿ ಹಾಕಿದ್ದಾರೆ. ಪೊಲೀಸ್ ಠಾಣೆ, ಎಸ್ಪಿ ಹಾಗೂ ಡೀಸಿ ಬಳಿ ಹೋದರೂ ನನಗೆ ನ್ಯಾಯ ಸಿಗಲಿಲ್ಲ. ನನ್ನನ್ನು ಏಕಾಏಕಿ ಕೆಲಸದಿಂದ ತೆಗೆದಿರುವುದರಿಂದ ಸಮಸ್ಯೆಯಾಗಿದೆ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿಕೊಡಿ ಎಂದು ಅವಲತ್ತುಕೊಂಡರು.

ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಜೆ.ಆಲ್ಬರ್ಟ್ ಮನೋರಾಜ್ ಮಾತನಾಡಿ, ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಮಂಜುಳಾ ಅವರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿರುವುದು ಕಂಡು ಬರುತ್ತಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಅಧಿಕಾರಿ ವಿರುದ್ಧ ಎಫ್‌ಐಆರ್ ಆಗಿದ್ದರು, ಅವರನ್ನು ಇದುವರೆಗೂ ಬಂಧಿಸಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ದಕ್ಷ ತನಿಖಾಧಿಕಾರಿಯನ್ನು ನೇಮಿಸಿ ಪಾರ್ದರ್ಶಕವಾಗಿ ತನಿಖೆ ಮಾಡಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಮೂಲಕ ಮಹಿಳೆಗೆ ನ್ಯಾಯ ಕೊಡಿಸಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಭೀಮಸೇನೆ ರಾಜ್ಯಾಧ್ಯಕ್ಷೆ ಪದ್ಮಾವತಿ, ಬಿಎಸ್ಪಿ ಜಿಲ್ಲಾಧ್ಯಕ್ಷ ರಾಜ್‌ಮೌರ್ಯ, ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಜಿಲ್ಲಾಧ್ಯಕ್ಷ ವೆಂಕಟೇಶ್, ಅರ್ಪಿತಾ ಮತ್ತಿತರರಿದ್ದರು.

23ಕೆಆರ್ ಎಂಎನ್ 2.ಜೆಪಿಜಿ

ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.