ಶಿಕ್ಷಣದಿಂದ ಪರಿವರ್ತಿತರಾದ ಹಿಂದುಳಿದ ಸಮುದಾಯ: ಸಿ.ಎಸ್‌. ಹೆಗಡೆ

| Published : Feb 13 2024, 12:56 AM IST

ಸಾರಾಂಶ

ನಾಡಿನ ಗುಡ್ಡಗಾಡು ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಹಿಂದುಳಿದ ಸಮುದಾಯದ ಜನರು ಶಿಕ್ಷಣದಿಂದ ಪರಿವರ್ತಿತರಾಗಿದ್ದಾರೆ.

ಯಲ್ಲಾಪುರ:

ನಾಡಿನ ಗುಡ್ಡಗಾಡು ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಹಿಂದುಳಿದ ಸಮುದಾಯದ ಜನರು ಶಿಕ್ಷಣದಿಂದ ಪರಿವರ್ತಿತರಾಗಿ, ಸತ್ಪ್ರಜೆಗಳಾಗಿ ಅಮೂಲ್ಯ ಕೊಡುಗೆ ನೀಡುವಂತಾಗಿದೆ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಸಿ.ಎಸ್.ಹೆಗಡೆ ಹೇಳಿದರು.ತಾಲೂಕಿನ ಗಡಿಭಾಗದ ಚಿಪಗೇರಿಯ ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ೩೫ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದ ಅನುದಾನ ಪಡೆಯದ ವನವಾಸಿ ಕಲ್ಯಾಣವು ಸೇವಾಧರ್ಮದ ಏಕೈಕ ಉದ್ದೇಶದಿಂದ ಕಾರ್ಯ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಸಂಸ್ಕಾರ ಪೂರ್ಣ ಶಿಕ್ಷಣ ನೀಡಲು ಆದ್ಯತೆ ನೀಡಿದೆ ಎಂದರು.ವನವಾಸಿ ಕಲ್ಯಾಣದ ಯಾದಗಿರಿಯ ಪ್ರಾಂತ ಸಹಕಾರ್ಯದರ್ಶಿ ಗಂಗಾಧರ ನಾಯ್ಕ ತಿಂಥಣಿ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ವನವಾಸಿಗಳು ನೀಡಿದ ಕೊಡುಗೆ ಮಹತ್ತರವಾದುದು. ಇಂತಹ ಮುಗ್ಧ ಬುಡಕಟ್ಟು ಜನಾಂಗಗಳ ಜನರನ್ನು ಮತಾಂತರಗೊಳಿಸುವ ದುಷ್ಟಕಾರ್ಯ ವಿರೋಧಿಸಿ, ಸಮುದಾಯದ ಜನರಿಗೆ ಸಂಸ್ಕೃತಿ, ಶಿಕ್ಷಣದ ಮಾರ್ಗದರ್ಶನ ಮಾಡುವ ಉದ್ದೇಶದಿಂದಲೇ ವನವಾಸಿ ಕಲ್ಯಾಣ ಕಾರ್ಯ ಪ್ರಾರಂಭಿಸಿತು. ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಆರಂಭಗೊಂಡ ಚಿಪಗೇರಿಯ ವನವಾಸಿ ವಿದ್ಯಾರ್ಥಿನಿಲಯದ ಗುರಿಯೂ ಇದೇ ಆಗಿದ್ದು, ಈ ವರೆಗಿನ ಬೆಳವಣಿಗೆ ಶ್ಲಾಘನೀಯ ಎಂದರು. ದೇಶದ ೫೪ ಸಾವಿರ ಗ್ರಾಮಗಳ ಸಂಪರ್ಕದಲ್ಲಿರುವ ವನವಾಸಿ ಕಲ್ಯಾಣವು, ರಾಜ್ಯದ ೧೮ ಜಿಲ್ಲೆಗಳಲ್ಲಿ ೩೬೦ ಪ್ರಕಲ್ಪ ನಡೆಸುತ್ತಿದೆಯಲ್ಲದೇ, ಗ್ರಾಮವಿಕಾಸ ಕೇಂದ್ರ ನಡೆಸುತ್ತಿದೆ ಎಂದು ವಿವರಿಸಿದರು.ಪ್ರಾಧ್ಯಾಪಕಿ ಪ್ರೇಮಾ ವಿಜಯಕುಮಾರ ಮಾತನಾಡಿ, ವನವಾಸಿಗಳು ಬದುಕಿನ ಸ್ವಾವಲಂಬನೆಯನ್ನು ಆರಂಭದಿಂದಲೂ ಅರಿತಿರುವುದು ಅಚ್ಚರಿಯ ಸಂಗತಿ. ಇಂತಹ ಹಿಂದುಳಿದ ಜನಾಂಗಗಳ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕಾಗಿದೆ ಎಂದರು.ನಿವೃತ್ತ ಬ್ಯಾಂಕ್‌ ಅಧಿಕಾರಿ ಎಸ್.ಎಂ. ಭಟ್ಟ ಉಪಾಧ್ಯ ಮಾತನಾಡಿದರು. ವಕೀಲ ಕುಂದರಗಿ ಗ್ರಾಪಂ ವ್ಯಾಪ್ತಿಯ ಬಿಬ್ಬನಹಳ್ಳಿಯ ನಿವಾಸಿ ಕಾಂಚನಾ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಿಲಯ ಸಮಿತಿ ಉಪಾಧ್ಯಕ್ಷ ಸಗ್ಗು ಡೋಯಿಪುಡೆ, ವನವಾಸಿ ಕಲ್ಯಾಣದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಜೋರೆ, ಜಿಲ್ಲಾ ಸಮಿತಿ ಸದಸ್ಯ ಎಂ.ಕೆ. ಹೆಗಡೆ, ಸಮಿತಿ ಅಧ್ಯಕ್ಷ ರಮೇಶ ರಾವ್‌, ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ, ನಿಲಯದ ವ್ಯವಸ್ಥಾಪಕ ವಿ.ಎನ್. ಭಟ್ಟ, ಶಿವಪ್ರಸಾದ ಭಟ್ಟ, ನೇತ್ರಾ, ಮೌನ ಇದ್ದರು. ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.