ಹದಗೆಟ್ಟ ರಸ್ತೆ, ಬೈಪಾಸ್‌ನಲ್ಲೇ ಸಂಚರಿಸುವ ಬಸ್‌ಗಳು!

| Published : Jul 15 2025, 01:07 AM IST

ಸಾರಾಂಶ

ಬಳ್ಳಾರಿ, ಧಾರವಾಡದಿಂದ ಕೊಪ್ಪಳಕ್ಕೆ ಪ್ರಯಾಣಿಸುವ ಪ್ರಯಾಣಿಕರು ತಡರಾತ್ರಿ ಬಂದರೆ ನಿರ್ವಾಹಕರು ಕೊಪ್ಪಳಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾರೆ. ಪ್ರಶ್ನಿಸಿದರೆ ಗದಗ ಇಳಿದುಕೊಳ್ಳಿ ಅಥವಾ ಹೊಸಪೇಟೆಯಲ್ಲಿ ಇಳಿದುಕೊಂಡು ಬೇರೆ ಬಸ್‌ಗೆ ಹೋಗಿ ಎನ್ನುತ್ತಾರೆ. ಅಷ್ಟಕ್ಕೂ ಕೊಪ್ಪಳದಲ್ಲಿ ಇಳಿಯಬೇಕು ಎನ್ನುವುದಾದರೆ ಬೈಪಾಸ್‌ನಲ್ಲಿಯೇ ಇಳಿದುಕೊಳ್ಳಿ ಎಂದು ಹೇಳುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ವರವಾಗುವ ಬದಲು ಕೊಪ್ಪಳ ನಗರದ ಬೈಪಾಸ್ ಮುಳುವಾಗಿ ಪರಿಗಣಿಮಿಸಿದೆ. ಅದರಲ್ಲೂ ತಡರಾತ್ರಿ ಪ್ರಯಾಣಿಕರ ಪಾಲಿಗೆ ಸಂಕಷ್ಟ ತಂದೊಡ್ಡಿದೆ.

ಕೊಪ್ಪಳ ಮಾರ್ಗವಾಗಿ ಚಲಿಸುವ ಬಸ್‌ಗಳು ತಡರಾತ್ರಿ ಆಗುತ್ತಿದ್ದಂತೆ ಊರೊಳಗೆ (ಕೊಪ್ಪಳದೊಳಕ್ಕೆ) ಬರದೆ ಬೈಪಾಸ್‌ನಲ್ಲಿಯೇ ಚಲಿಸುತ್ತಿವೆ. ನಗರಕ್ಕೆ ಬರುವ ಪ್ರಯಾಣಿಕರಿದ್ದರೆ ಬೈಪಾಸ್‌ನಲ್ಲಿಯೇ ತಡರಾತ್ರಿ ಕೆಳಗಿಳಿಸಿರುವ ಪ್ರಕರಣಗಳು ನಡೆದಿವೆ. ಇದೆಲ್ಲವೂ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತಿಳಿದಿದ್ದರೂ ಯಾರೂ ಕ್ರಮಕೈಗೊಳ್ಳದೆ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಳ್ಳಾರಿ, ಧಾರವಾಡದಿಂದ ಕೊಪ್ಪಳಕ್ಕೆ ಪ್ರಯಾಣಿಸುವ ಪ್ರಯಾಣಿಕರು ತಡರಾತ್ರಿ ಬಂದರೆ ನಿರ್ವಾಹಕರು ಕೊಪ್ಪಳಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾರೆ. ಪ್ರಶ್ನಿಸಿದರೆ ಗದಗ ಇಳಿದುಕೊಳ್ಳಿ ಅಥವಾ ಹೊಸಪೇಟೆಯಲ್ಲಿ ಇಳಿದುಕೊಂಡು ಬೇರೆ ಬಸ್‌ಗೆ ಹೋಗಿ ಎನ್ನುತ್ತಾರೆ. ಅಷ್ಟಕ್ಕೂ ಕೊಪ್ಪಳದಲ್ಲಿ ಇಳಿಯಬೇಕು ಎನ್ನುವುದಾದರೆ ಬೈಪಾಸ್‌ನಲ್ಲಿಯೇ ಇಳಿದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಇದರಿಂದ ತಡರಾತ್ರಿ ಕೊಪ್ಪಳಕ್ಕೆ ಬರಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

ಬಸ್‌ ಬಂದಿಲ್ಲ:

ವಿವಿಧೆಡೆಯಿಂದ ಕೊಪ್ಪಳಕ್ಕೆರಾತ್ರಿ 11 ಗಂಟೆಗೆ ಬಸ್‌ಗಳು ಆಗಮಿಸಿ ತೆರಳುವ ಕುರಿತು ನಿಲ್ದಾಣದ ನೋಂದಣಿ ಪುಸ್ತಕದಲ್ಲಿ ಮಾಹಿತಿ ಇದೆ. ಆದರೆ, ಬಹುತೇಕ ಬಸ್‌ಗಳು ಇಲ್ಲಿಗೆ ಬಂದಿಲ್ಲವೆಂದು ನಮೂದಿಸಲಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ಸಿಬ್ಬಂದಿ ಮಾಹಿತಿ ನೀಡುವುದೇ ಇಲ್ಲ. ಮೇಲಾಧಿಕಾರಿಗಳು ಪರಿಶೀಲನೆ ವೇಳೆ ಇದನ್ನು ನೋಡುವುದಿಲ್ಲವೇ ಅಥವಾ ನೋಡಿದರೆ ಕ್ರಮಕೈಗೊಳ್ಳುತ್ತಿಲ್ಲವೇ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಈ ರೀತಿಯ ಕಳ್ಳಾಟ ನಡೆಯುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಯಾತನೆ ಪಡಬೇಕಾಗಿದೆ.

ಹದಗೆಟ್ಟ ರಸ್ತೆ:

ಹೆದ್ದಾರಿಯಿಂದ ನಗರದೊಳಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗಾಗಿಯೇ ಬೈಪಾಸ್‌ನಲ್ಲಿಯೇ ಬಸ್‌ಗಳು ಸಂಚರಿಸುತ್ತಿವೆ. ಕೆಲವೊಂದು ಬಸ್‌ಗಳು ಹಗಲಿನಲ್ಲೂ ಬೈಪಾಸ್‌ನಲ್ಲಿ ಸಂಚರಿಸುತ್ತಿವೆ ಎಂದು ಆರೋಪ ಕೇಳಿ ಬಂದಿವೆ.ಬಸ್ ನಿಲ್ದಾಣದಲ್ಲಿ ವಾಸ್ತವ್ಯ

ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದಾರೆ. ಅದರಲ್ಲೂ ದೇವಸ್ಥಾನ ಸೇರಿದಂತೆ ಮೊದಲಾದೆಡೆ ತೆರಳಿದವರು ರಾತ್ರಿ ಬರುತ್ತಾರೆ. ಕೊಪ್ಪಳ ಬಸ್‌ ನಿಲ್ದಾಣಕ್ಕೆ ತಡರಾತ್ರಿ ಬಸ್‌ ಬರದೇ ಇರುವುದರಿಂದ ಬೇರೆ ನಿಲ್ದಾಣದಲ್ಲಿ ತಂಗಿ ಬೆಳಗ್ಗೆ ಕೊಪ್ಪಳಕ್ಕೆ ಬರುತ್ತಿದ್ದಾರೆ. ಆದರೆ, ನಿರ್ವಾಹಕರು ಮಾತ್ರ ಪ್ರಯಾಣಿಕರು ಇಲ್ಲದೆ ಇರುವುದರಿಂದ ನಗರದೊಳಗೆ ಬರುವುದಿಲ್ಲವೆಂದು ಹೇಳುತ್ತಿದ್ದಾರೆ.

ಬಸ್‌ಗಳು ನಿಲ್ದಾಣಕ್ಕೆ ಬರದೇ ಇರುವುದು ಸಮಸ್ಯೆ ಗಂಭೀರವಾಗಿದ್ದು, ಇದನ್ನು ಸರಿಪಡಿಸುವ ದಿಸೆಯಲ್ಲಿ ಅಧಿಕಾರಿಗಳಿಂದ ವಿವರಣೆ ಕೇಳಲಾಗುವುದು. ಕೊಪ್ಪಳ ನಗರದೊಳಕ್ಕೆ ಬರದೆ ಈ ವರೆಗೆ ಎಷ್ಟು ಬಸ್‌ ಬೈಪಾಸ್‌ನಲ್ಲಿ ತೆರಳಿವೆ ಎನ್ನುವ ಮಾಹಿತಿ ಪಡೆದು ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು.

ರೆಡ್ಡಿ ಶ್ರೀನಿವಾಸ ಜಿಲ್ಲಾಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಪ್ಪಳಮಹಿಳೆ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದೆ. ಆದರೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಪ್ಪಿನಿಂದ ಮಹಿಳಾ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿದೆ.

ಜ್ಯೋತಿ ಗೊಂಡಬಾಳ ತಾಲೂಕು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಪ್ಪಳ