ಕೋಟಿ ಖರ್ಚಾದರೂ ಕಳಪೆ ಕಾಮಗಾರಿ!

| Published : Jun 27 2024, 01:00 AM IST

ಸಾರಾಂಶ

ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಲಾಗಿದೆ. ಆದರೆ, ಮಾಡಿದ ಕಾಮಗಾರಿಗಳು ಕಳಪೆ ಮಟ್ಟ ಹಾಗೂ ಅರ್ಧಮರ್ಧವಾಗಿ ಮಾಡಿದ್ದರಿಂದ ಕಾಮಗಾರಿಗಳು ಕೆಲವೇ ತಿಂಗಳಲ್ಲಿ ತಮ್ಮ ನಿಜ ರೂಪ ದರ್ಶನ ಮಾಡುತ್ತಿವೆ. ಹೀಗಾಗಿ ಕೋಟಿ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಲಾಗಿದೆ. ಆದರೆ, ಮಾಡಿದ ಕಾಮಗಾರಿಗಳು ಕಳಪೆ ಮಟ್ಟ ಹಾಗೂ ಅರ್ಧಮರ್ಧವಾಗಿ ಮಾಡಿದ್ದರಿಂದ ಕಾಮಗಾರಿಗಳು ಕೆಲವೇ ತಿಂಗಳಲ್ಲಿ ತಮ್ಮ ನಿಜ ರೂಪ ದರ್ಶನ ಮಾಡುತ್ತಿವೆ. ಹೀಗಾಗಿ ಕೋಟಿ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಹೌದು, ನಗರೋತ್ಥಾನ ಯೋಜನೆ ಅಡಿಯಲ್ಲಿ ₹8.50 ಕೋಟಿ ಅನುದಾನ ಬಂದರೂ ಅಧಿಕಾರಿಗಳ ಇಚ್ಚಾಸಕ್ತಿ ಕೊರತೆಯಿಂದ ಇನ್ನೂ ಅರ್ಧ ಕಾಮಗಾರಿಗಳಿಗೆ ಟೆಂಡರ್‌ ಕರೆದಿಲ್ಲ. ಈಗಾಗಲೇ ನಗರೋತ್ಥಾನ ಯೋಜನೆ ಹಂತ ನಾಲ್ಕರಲ್ಲಿ ಸಿಸಿ ರಸ್ತೆ, ಚರಂಡಿ, ಹೈಮಾಸ್ಟ್‌ ದೀಪ, ಸಮುದಾಯ ಭವನ ದುರಸ್ತಿ ಸೇರಿದಂತೆ ಹಲವು ಕಾಮಗಾರಿಗಳು ಕೈಗೊಳ್ಳಲಾಗಿದೆ. ಆದರೆ ಕಾಮಗಾರಿಗಳು ಕಳಪೆಮಟ್ಟದಿಂದ ಕೂಡಿದ್ದು, ಕಾಮಗಾರಿ ಪೂರ್ಣಗೊಂಡ ನಾಲ್ಕು ತಿಂಗಳಲ್ಲಿಯೇ ಸಿಸಿ ರಸ್ತೆಗಳು ಬಿರುಕು ಬಿಟ್ಟಿವೆ. ಅಕ್ಕಮಹಾದೇವಿ ನಗರದ ಸಿಸಿ ರಸ್ತೆಯಂತೂ ಕಿತ್ತಿಹೋಗಿದೆ.

ಹೈಮಾಸ್ಟ್‌ ದೀಪ ಅಳವಡಿಕೆಯೂ ಕಳಪೆ:

ವಿವಿಧ ವಾರ್ಡ್‌ಗಳಲ್ಲಿ ಕೈಗೊಂಡಿರುವ ಹೈಮಾಸ್ಟ್‌ ದೀಪ ಅಳವಡಿಸುವ ಕಾಮಗಾರಿಯಲ್ಲಿ ಕಳಪೆ ಹೈಮಾಸ್‌ ಕಂಬ ಅಳವಡಿಸಲಾಗಿದೆ. ಗಾಳಿ ಬಿಟ್ಟರೆ ಹೈಮಾಸ್‌ ಕಂಬಗಳು ಅಲ್ಲಾಡಿ ಮುರಿದು ಬೀಳುವಂತಿವೆ. ಹೈಮಾಸ್ಟ್‌ ದೀಪಗಳಿಗೆ ಟೈಮರ್ ಅಳವಡಿಸಬೇಕು ಎಂಬ ನಿಯಮ ಇದ್ದರೂ, ಯಾವುದೇ ಹೈಮಾಸ್ಟ್‌ ದೀಪಗಳಿಗೆ(ಕಂಬಗಳಿಗೆ) ಟೈಮರ್‌ ಅಳವಡಿಸಿರುವುದಿಲ್ಲ. ಅಂದಾಜು ವೆಚ್ಚಕ್ಕೆ ಅನುಗುಣವಾಗಿ ಕಾಮಗಾರಿ ನಡೆದಿರುವುದಿಲ್ಲ. ಹೀಗಾಗಿ ಸಿಸಿ ರಸ್ತೆಗಳು ಬಿರುಕು ಬಿಟ್ಟಿವೆ. ಹೈಮಾಸ್ ದೀಪಗಳು ಗಾಳಿ ಬಿಟ್ಟರೆ ಅಲ್ಲಾಡುತ್ತಿವೆ.

ಮನವಿಗೂ ಪ್ರಯೋಜನ ಆಗಿಲ್ಲ:

ಹೈಮಾಸ್ಟ್‌ ದೀಪ ಹಾಗೂ ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಪುರಸಭೆ ಕೆಲ ಸದಸ್ಯರು ವಿಜಯಪುರ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ಆಗಿರುವುದಿಲ್ಲ. ಹೀಗಾಗಿ ನಗರೋತ್ಥಾನ ನಾಲ್ಕನೇ ಹಂತದ ಕಾಮಗಾರಿಗಳಿಗೆ ಬಂದಿರುವ ಅನುದಾನ ಸಮರ್ಪಕ ಅಭಿವೃದ್ಧಿ ಕಾಣದೇ,ಅನುದಾನ ಹರೋಹರ ಎನ್ನುವಂತಾಗಿದೆ.

16 ಕಾಮಗಾರಿಗಳಿಗೆ ಅನುಮೋದನೆ:

2022ರಂದು ಸರ್ಕಾರ ವಿಜಯಪುರ ಜಿಲ್ಲೆಯ ಇಂಡಿ ಪುರಸಭೆಯ ಮೊತ್ತ ₹10 ಕೋಟಿ ಕ್ರಿಯಾಯೋಜನೆಯ ಕಾಮಗಾರಿಗಳಿಗೆ ಪೌರಾಡಳಿತ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಸಮಿತಿ ಸಭೆಯಲ್ಲಿ ಘಟನೋತ್ತರ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಪುರಸಭೆಯ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 16 ಕಾಮಗಾರಿಗಳನ್ನೊಳಗೊಂಡ ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದೆ. ಆದರೆ ಇಲ್ಲಿಯವರೆಗೆ ಅರ್ಧದಷ್ಟು ಕಾಮಗಾರಿಗಳಿಗೆ ಟೆಂಡರ್‌ ಕರೆದು ಕಾಮಗಾರಿಗಳು ಆರಂಭಿಸಿರುವುದಿಲ್ಲ. ಆದರೆ, 2022ರಲ್ಲಿ ಅನುಮೋದನೆಗೊಂಡ ಕಾಮಗಾರಿಗಳು ಇಲ್ಲಿಯವರೆಗೆ ಪೂರ್ಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಕಾಮಗಾರಿಗಳು ಇಲ್ಲಿಯವರೆಗೆ ಪ್ರಾರಂಭವಾಗಿರುವುದಿಲ್ಲ.

ಗುಂಡಿ ಮುಚ್ಚಿಲ್ಲ:

ಅಕ್ಕಮಹಾದೇವಿ ನಗರಕ್ಕೆ ಹೋಗುವ ರಸ್ತೆಗೆ ನಿರ್ಮಾಣ ಮಾಡಿದ ಸಿಸಿ ರಸ್ತೆಯ ಮಧ್ಯದಲ್ಲಿಯೆ ಒಳಚರಂಡಿ ಗುಂಡಿಗೆ ಅಳವಡಿಸಿದ ಮುಚ್ಚಳಿಕೆ ಸಿಸಿ ರಸ್ತೆ ಮಾಡುವಾಗ ಗುಂಡಿಗೆ ಬಿದ್ದಿದೆ. ಇಲ್ಲಿಯವರೆಗೆ ಗುಂಡಿಗೆ ಮುಚ್ಚಳಿಕೆ ಹಾಕಿರುವುದಿಲ್ಲ. ರಾತ್ರಿ ಕತ್ತಲೆಯಲ್ಲಿ ಈ ಸಿಸಿ ರಸ್ತೆ ಮೇಲೆ ಅಪರಿಚಿತರು ಹಾದು ಹೋದರೆ ಗುಂಡಿಯಲ್ಲಿ ಬೀಳುವುದು ಗ್ಯಾರಂಟಿ. ಹಲವು ಜನ ಬೈಕ್‌ ಸವಾರರು ಗುಂಡಿಯಲ್ಲಿ ಬಿದ್ದ ಉದಾಹರಣೆ ಇವೆ.

ಜನರಿಗೆ ಮೂಲ ಸೌಕರ್ಯಗಳು ಒದಗಬೇಕು. ಪಟ್ಟಣ ಅಭಿವೃದ್ಧಿ ಹೊಂದಬೇಕು ಎಂಬ ಸದುದ್ದೇಶದಿಂದ ನಗರೋತ್ಥಾನ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆ ಕೋಟ್ಯಂತರ ರುಪಾಯಿ ಅನುದಾನ ಕೂಡಾ ದೊರೆತಿದೆ. ಆದರೆ, ಗುತ್ತಿಗೆದಾರರು, ಅಧಿಕಾರಿಗಳ ಒಳ ಒಪ್ಪಂದವೂ, ನಿರಾಸಕ್ತಿಯೋ, ಬೇಜಬಾವ್ದಾರಿಯಿಂದಲೂ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ. ಹೀಗಾಗಿ ಕೋಟ್ಯಂತರ ರುಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

---

ಬಾಕ್ಸ್‌

ಅರ್ಧ ಕೋಟಿ ಖರ್ಚಾದ್ರು ಕಳಪೆ ಕಾಮಗಾರಿ

ಪುರಸಭೆಯ ವಾರ್ಡ್‌ 18ರಲ್ಲಿ ಬರುವ ಅಕ್ಕಮಹಾದೇವಿ ನಗರಕ್ಕೆ ಹೋಗುವ ರಸ್ತೆಗೆ ₹50 ಲಕ್ಷಗಳ ಕ್ರಿಯಾಯೋಜನೆಯಲ್ಲಿ ಸಿಸಿ ರಸ್ತೆ ಕಾಮಗಾರಿ ಅಳವಡಿಸಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡು 4 ತಿಂಗಳಾಗಿರುವುದಿಲ್ಲ. ಈಗಾಗಲೇ ಸಿಸಿ ರಸ್ತೆ ಎಲ್ಲೆಂದರೆ ಬಿರುಕು ಬಿಟ್ಟಿದೆ. ಅಕ್ಕಮಹಾದೇವಿ ನಗರದ ಬಳಿ ಸಿಸಿ ರಸ್ತೆ ಕಿತ್ತಿಹೋಗಿದೆ. ಈ ಯೋಜನೆ ಅನುಷ್ಠಾನಕ್ಕೆ ಥರ್ಡ್‌ ಪಾರ್ಟಿ ಪರಿಶೀಲನೆ ಆಗಬೇಕು ಎಂಬ ನಿಯಮ ಇದೆ. ಆದರೆ ಥರ್ಡ್‌ ಪಾರ್ಟಿ ಹೇಗೆ ಪರಿಶೀಲನೆ ಮಾಡಿದ್ದಾರೆ ಎಂಬ ಪ್ರಶ್ನೆ ಪಟ್ಟಣದ ನಾಗರಿಕರನ್ನು ಕಾಡುತ್ತಿದೆ. ಪಟ್ಟಣದಲ್ಲಿ ₹8.50 ಕೋಟಿ ವೆಚ್ಚದಲ್ಲಿ ನಡೆದ ನಗರೋತ್ಥಾನ ಕಾಮಗಾರಿ ಗುಣಮಟ್ಟ ತನಿಖೆಯಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

---

ಸಭೆ ಕರೆದು ಅಧಿಕಾರಿಗಳ ತರಾಟೆಗೆ

ನಗರೋತ್ಥಾನ ಕಾಮಗಾರಿಗಳು ಕಳಪೆ ಹಾಗೂ ಇನ್ನು ಮುಗಿಯದೇ ಇರುವ ಕಾರಣಕ್ಕೆ ಈಗಾಗಲೇ ಶಾಸಕ ಯಶವಂತರರಾಯಗೌಡ ಪಾಟೀಲ ಅವರು ಅಧಿಕಾರಿಗಳ ಸಭೆ ಕರೆದು ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮಗಾರಿಗಳು ಶೀಘ್ರ, ಗುಣಮಟ್ಟದಿಂದ ಕೂಡಿರಬೇಕು ಎಂದು ತಾಕೀತು ಮಾಡಿದ್ದಾರೆ.

----

ಕೋಟ್‌

ನಗರೋತ್ಥಾನ 4 ಹಂತದಲ್ಲಿ ವಾರ್ಡ್‌ 6ರಲ್ಲಿ ಹೈಮಾಸ್ಟ್‌ ದೀಪ ₹4 ಲಕ್ಷಗಳಲ್ಲಿ ಅಳವಡಿಸಲಾಗಿದೆ. ಗುತ್ತಿಗೆದಾರರು ಅದು ಕಳಪೆ ಗುಣಮಟ್ಟದ ಹೈಮಾಸ್ಟ್‌ ದೀಪ ಅಳವಡಿಸಿದ್ದಾರೆ. ಗಾಳಿ ಬಿಟ್ಟರೆ ಅಲ್ಲಾಡುವ ಸಾದಾ ಕಬ್ಬಿಣದ ಕಂಬ ಬಳಕೆ ಮಾಡಲಾಗಿದೆ. ಹೆಚ್ಚು ವೊಲ್ಟೇಜ್‌ ಇರುವ ಗುಣಮಟ್ಟದ ದೀಪಗಳು ಹೈಮಾಸ್ಟ್‌ಗೆ ಅಳವಡಿಸಿರುವುದಿಲ್ಲ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ನಗರಾಭಿವೃದ್ದಿಕೋಶದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

-ಶೈಲಜಾ ಶ್ರೀಶೈಲ ಪೂಜಾರಿ, ಪುರಸಭೆ ಸದಸ್ಯೆ ವಾರ್ಡ್‌ 6.

---

ವಾರ್ಡ್‌-18 ರಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಕ್ಕಮಹಾದೇವಿ ನಗರಕ್ಕೆ ಹೋಗುವ ರಸ್ತೆಗೆ ಸಿಸಿ ರಸ್ತೆ ಅಳವಡಿಸಲು ₹50 ಲಕ್ಷ ಅನುದಾನ ಇಡಲಾಗಿದೆ. ಆದರೆ ಟೆಂಡರ್‌ ಪಡೆದುಕೊಂಡ ಗುತ್ತಿಗೆದಾರರೇ ಬೇರೆ. ಅವರಿಂದ ಪರ್ಸೆಂಟೇಜ್‌ ಪಡೆದುಕೊಂಡು ಇನ್ನೊಬ್ಬರು ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಇವರಿಂದ ಮತ್ತೊಬ್ಬ ಗುತ್ತಿಗೆದಾರ ಗುತ್ತಿಗೆ ಪಡೆದುಕೊಂಡಿದ್ದಾರೆ. ಒಂದು ಕೆಲಸಕ್ಕೆ ಮೂರು ಜನ ಗುತ್ತಿಗೆದಾರರು ಇದ್ದಾರೆ. ಹೀಗಾಗಿ ಸಿಸಿ ರಸ್ತೆ ಸಂಪೂರ್ಣ ಕಳಪೆಯಾಗಿದೆ.

-ವಿಜಯಕುಮಾರ ಮೂರಮನ, ಪುರಸಭೆ ಸದಸ್ಯ ವಾರ್ಡ್‌-18.

---

ನಗರೋತ್ಥಾನ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಯನ್ನು ಪರಸಭೆಯ ಎಂಜಿನೀಯರ್‌ ಅವರ ಜೊತೆ ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಕಳಪೆ ಕಾಮಗಾರಿ ಆಗಿವೆ ಎಂದು ದೃಢಪಟ್ಟರೇ ಅಂತವರ ಬಿಲ್‌ ತಡೆ ಹಿಡಿಯಲಾಗುತ್ತದೆ. -ಮಹಾಂತೇಶ ಹಂಗರಗಿ, ಪುರಸಭೆ ಮುಖ್ಯಾಧಿಕಾರಿ, ಇಂಡಿ.