ಸಾರಾಂಶ
ಶಂಕರ ಕುದರಿಮನಿ
ಕನ್ನಡಪ್ರಭ ವಾರ್ತೆ ಬಾದಾಮಿಪ್ರಕೃತಿ ಮಡಿಲಲ್ಲಿ ಹುದುಗಿ, ಸೃಷ್ಠಿ ಸೌಂದರ್ಯವನ್ನೆಲ್ಲ ತನ್ನಲ್ಲಿ ಇಟ್ಟುಕೊಂಡು ಮನಶಾಂತಿ ಅರಸಿ ತನ್ನೊಡಲಿಗೆ ಬಂದವರ ಕಷ್ಟಗಳನ್ನೆಲ್ಲ ದೂರ ಮಾಡುವ ಚಾಲುಕ್ಯರ ಕುಲದೇವತೆ, ಆದಿಶಕ್ತಿ ಅವತಾರ ಬಾದಾಮಿ ಬನಶಂಕರಿ ದೇವಿ ಮಹಾರಥೋತ್ಸವ ಇಂದು ಅದ್ಧೂರಿಯಾಗಿ ಜರುಗಲಿದೆ.ಬಾದಾಮಿಯಿಂದ ಕೇವಲ 4 ಕಿ.ಮೀ ಅಂತರದಲ್ಲಿರುವ ಬನಶಂಕರಿ ದೇವಾಲಯ ಕರ್ನಾಟಕದಲ್ಲಿಯೇ ಸುಪ್ರಸಿದ್ಧ ದೇವಾಲಯ. ಇಂತಹ ಐತಿಹಾಸಿಕ ದೇವಿ ಜಾತ್ರಗೆ ಆಗಮಿಸುವ ಭಕ್ತರು ಅಷ್ಟೇ ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
ಜ.13 ಸೋಮವಾರ ಗೋಧೂಳಿ ಸಮಯದಲ್ಲಿ ಮಹಾರಥೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಹಣ್ಣು ಸಮರ್ಪಿಸುವದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. 17ರಂದು ಕಳಶಾರೋಹಣ ಜರುಗಲಿದೆ. ಅರ್ಚಕ ಪೂಜಾರ ಮನೆತನದವರು ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ. ಇಂದಿನಿಂದ ಒಂದು ತಿಂಗಳ ಕಾಲ ಜರುಗುವ ಜಾತ್ರೆಯ ಸವಿಯೇ ವಿಶಿಷ್ಟವಾದುದು.ಹಿನ್ನೆಲೆ:
ತಿಲಕಾರಣ್ಯದಲ್ಲಿ ದುರ್ಗರಕ್ತ ಮತ್ತು ಧೂಮ್ರಾಕ್ಷರೆಂಬ ಹೆಸರಿನ ಕ್ರೂರ ರಾಕ್ಷಸರು ಸರ್ವರಿಗೂ ಬಾಧೆ ಕೊಡುತ್ತ ದೇವಲೋಕಕ್ಕೂ ದಾಳಿಯನ್ನಿಟ್ಟರು. ಅವರ ಉಪಟಳ ತಾಳಲಾರದ ದೇವತೆಗಳು ದೇವಿ ಆದಿಶಕ್ತಿ ಮೊರೆಹೋದರು. ಆಗ ದೇವಿ ಅವರ ಸಹಕಾರಕ್ಕೆ ಉಗ್ರ ರೂಪತಾಳಿ ತಿಲಕಾರಣ್ಯಕ್ಕೆ ಬಂದು ಆ ಇಬ್ಬರೂ ರಾಕ್ಷಸರನ್ನು ಸಂಹರಿಸಿ ಉಗ್ರಳಾಗಿಯೇ ಅಲ್ಲಿಯೇ ನೆಲಸಿದಳು.ದೇವಿ ಉಗ್ರ ರೂಪ ಶಾಂತಳಾಗಿಸಲು ದೇವತೆಗಳು ದೇವಿ ಭಕ್ತನಾದ ತ್ರಿದಂಡ ಮುನಿ ಬಳಿ ಬಂದರು. ಮುನಿಯ ಭಕ್ತಿಗೆ ಒಲಿದ ದೇವಿ, ಶಾಂತ ಸ್ವರೂಪಳಾಗಿ ಬನಶಂಕರಿಯಲ್ಲಿ ನೆಲೆ ನಿಂತಿರುವ ಬಗ್ಗೆ ಪುರಾಣದಲ್ಲಿ ತಿಳಿದು ಬರುತ್ತದೆ. ವನದಲ್ಲಿ ನೆಲೆ ನಿಂತಿದ್ದರಿಂದ ಮತ್ತು ಸರ್ವರಿಗೂ ಸಂತೋಷವನ್ನುಂಟು ಮಾಡಿದ್ದರಿಂದ ಬನಶಂಕರಿ ಎಂದು ಕರೆಯಿಸಿಕೊಂಡಳು. ಘೋರವಾದ ಬರಗಾಲ ನಿರ್ಮಿತವಾದಾಗ ತನ್ನ ದೇಹದಿಂದಲೇ ಶಾಖ (ತರಕಾರಿ)ಗಳನ್ನು ಉತ್ಪನ್ನ ಮಾಡಿ ಜನರನ್ನು ಸಲಹಿದ್ದರಿಂದ ಶಾಖಾಂಬರಿ ಎಂತಲೂ ಪ್ರಸಿದ್ಧಿಯಾದಳು.
ದೇವಿ ಜಾತ್ರಾ ಮಹೋತ್ಸವವು ತನ್ನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ರಾಜ್ಯ ಹೊರ ರಾಜ್ಯಗಳ ಕೋಟ್ಯಾಧಿ ಭಕ್ತರನ್ನು ಹೊಂದಿರುವ ಬಹು ದೊಡ್ಡ ಉತ್ಸವವಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿಯೇ ಅತ್ಯಂತ ದೊಡ್ಡದು ಎನಿಸಿಕೊಂಡ ಬನಶಂಕರಿ ದೇವಿ ಜಾತ್ರೆ ವಿಶಿಷ್ಟವಾದುದು. ನಮ್ಮ ಪರಂಪರೆಯನ್ನು ಬಿಂಬಿಸುವ ಸಾಲಿಗೆ ಸೇರಿದ್ದು. ತಿಂಗಳ ಕಾಲ ಜರುಗುವ ಈ ಜಾತ್ರೆ ನಡೆದಷ್ಟು ದಿನ ಬೇರ್ಯಾವ ಜಾತ್ರೆಯೂ ನಡೆಯಲಿಕ್ಕಿಲ್ಲ.ಬನಶಂಕರಿ ಜಾತ್ರೆಯು ನೂರಾರು ಕಲಾವಿದರು ಮತ್ತು ಸಾವಿರಾರು ವ್ಯಾಪಾರಸ್ಥರಿಗೆ ಆರ್ಥಿಕ ಶಕ್ತಿ ಒದಗಿಸಿ ಮುಂದಿನ ಜೀವನಕ್ಕೆ ಭದ್ರತೆ ನೀಡುತ್ತದೆ. ಈ ಜಾತ್ರೆಯೊಂದರಲ್ಲಿಯೇ ಎಲ್ಲ ಮೂಲಗಳಿಂದ ಕೋಟ್ಯಂತರ ರುಪಾಯಿ ವ್ಯಾಪಾರ ವಹಿವಾಟು ನಡೆದ ಬೃಹತ್ ಜಾತ್ರೆಗಳಲ್ಲೊಂದು ಎಂದು ಗುರುತಿಸಿಕೊಂಡಿದೆ. ಭಕ್ತಿ-ಭಾವಗಳ ಸಂಗಮದ ಜೊತೆಗೆ ಮನರಂಜನೆಗೂ ಇಲ್ಲಿ ಹೆಚ್ಚಿನ ಅವಕಾಶ ಉಂಟು. ಈ ಎರಡರಿಂದಾಗಿ ಎಲ್ಲ ವಯೋಮಾನದ ಜನರನ್ನು ತನ್ನತ್ತ ಸೆಳೆದುಕೊಂಡು ರಾಜ್ಯದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ ಈ ಜಾತ್ರೆ.
ರಥೋತ್ಸವ:ಕೋಟ್ಯಾಧಿ ಭಕ್ತರ ಆರಾಧ್ಯ ದೇವತೆ ಬನಶಂಕರಿ ರಥೋತ್ಸವಕ್ಕೆ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಳಿಬಂಡಿಮೂಲಕ ತಲತಲಾಂತರದಿಂದ ಗೌಡರ ಮನೆತನದಿಂದ ಹಗ್ಗದೊಂದಿಗೆ ಮಹಾರಥೋತ್ಸವಕ್ಕೆ ಆಗಮಿಸುತ್ತಾರೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪೂಜಾ ಕೈಂಕರ್ಯಗಳನ್ನು ಪೂಜಾರ ಮನೆತನದವರಿಂದ ನೇರವೆರಲಿದೆ.
ಕಲಾವಿದರ ತಂಡ:ಹಿಂದೊಮ್ಮೆ ನಾಟಕ ರತ್ನ ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಕಂದಗಲ್ಲ ಹಣಮಂತರಾಯ, ಚಿತ್ತರಗಿ ಗಂಗಾಧರ ಶಾಸ್ತ್ರಿ, ಡಾ:ರಾಜಕುಮಾರ ಹಾಸ್ಯ ಕಲಾವಿದ ನರಸಿಂಹರಾಜು, ಸೇರಿದಂತೆ ಮುಂತಾದವರು ಈ ಜಾತ್ರೆಯಲ್ಲಿ ಬಂದು ನಾಟಕವನ್ನಾಡಿ ಹೋಗಿರುವುದು ಒಂದು ವಿಶೇಷ. ಇವರ ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳನ್ನು ಹಿರಿಯರು ಇಂದಿಗೂ ಮೆಲಕು ಹಾಕುತ್ತಾರೆ.
ಚಲನ ಚಿತ್ರ ನಟ, ನಟಿಯರು ಅನೇಕ ದಾರಾವಾಹಿ ಕಲಾವಿದರು ಸೇರಿದಂತೆ ಕಿರು ತೆರೆಯ ನಟ ನಟಿಯರು ಬಂದು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರೊಂದಿಗೆ ಇದೀಗ ರಂಗಭೂಮಿ ಕಲಾವಿದರು ಪ್ರತಿವರ್ಷ ಜಾತ್ರೆಯಲ್ಲಿ ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ.ಭಕ್ತರಿಗೆ ವಿವಿಧ ಮೂಲಸೌಕರ್ಯ:
ಜಗನ್ಮಾತೆ ಶ್ರೀ ಬನಶಂಕರಿ ದೇವಸ್ಥಾನಕ್ಕೆ ವರ್ಷವಿಡಿ ಆಗಮಿಸುವ ಭಕ್ತಾಧಿಗಳ ಅನಕೂಲಕ್ಕಾಗಿ ಮತ್ತು ಜಾತ್ರಾ ಮಹೋತ್ಸವದ ಯಾತ್ರಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ದೇವಸ್ಥಾನ ಟ್ರಸ್ಟ್ ಕಮಿಟಿ ಕೈಗೆತ್ತಿಕೊಂಡಿದೆ.ಮಹಿಳೆಯರ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನ ಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ನೀರಿನ ವ್ಯವಸ್ಥೆಗಾಗಿ ಬೋರವೆಲ್ ಕೊರೆಯಿಸಿ ಪೈಪಲೈನ್ ಅಳವಡಿಸಲಾಗಿದೆ. ಇದರ ಪಕ್ಕದಲ್ಲಿಯೇ ಮೂರು ಎಕರೆ ಜಾಗೆ ಖರೀದಿಸಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಭಕ್ತಾಧಿಗಳಿಗೆ ನಿತ್ಯ ಅನ್ನದಾನದ ದಾಸಹೋ ಜರಗುತ್ತದೆ. ಇದಕ್ಕಾಗಿ ಲಕ್ಷಾಂತರ ರು. ವೆಚ್ಚದಲ್ಲಿ ಆಹಾರ ತಯಾರಿಸುವ ಆಧುನಿಕ ಯಂತ್ರಗಳ ಮೂಲಕ ಭಕ್ತಾಧಿಗಳ ಅನಕೂಲಕ್ಕೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುವ ವಿಶ್ವಾಸವನ್ನು ಕಮಿಟಿ ವ್ಯಕ್ತಪಡಿಸಿದೆ.