ಚೀನಾದ ನಿಂಗೊದಲ್ಲಿ ಭಾನುವಾರ ಸಂಜೆ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ನಂ.1 ಕುಲ್ಲಾವುತ್ ವಿಟಿಕ್ಸರ್ನ್ ಅವರನ್ನು ಸೋಲಿಸಿ ಉಡುಪಿ ಕಾರ್ಕಳ ತಾಲೂಕಿನ ಸಾಣೂರು ಮೂಲದ ಆಯುಷ್ ಶೆಟ್ಟಿ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ಚೀನಾದ ಶಿ ಯುಖಿ ವಿರುದ್ಧ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.

ಕಾರ್ಕಳ: ಚೀನಾದ ನಿಂಗೊದಲ್ಲಿ ಭಾನುವಾರ ಸಂಜೆ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ನಂ.1 ಕುಲ್ಲಾವುತ್ ವಿಟಿಕ್ಸರ್ನ್ ಅವರನ್ನು ಸೋಲಿಸಿ ಉಡುಪಿ ಕಾರ್ಕಳ ತಾಲೂಕಿನ ಸಾಣೂರು ಮೂಲದ ಆಯುಷ್ ಶೆಟ್ಟಿ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ಚೀನಾದ ಶಿ ಯುಖಿ ವಿರುದ್ಧ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರಿನ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರಾದ ಆಯುಷ್ ಶೆಟ್ಟಿ ತಮ್ಮ ಶ್ರಮ, ಸಮರ್ಪಣೆ ಮತ್ತು ಕ್ರೀಡಾ ನಿಷ್ಠೆಯಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 2005ರ ಮೇ 3ರಂದು ಜನಿಸಿದ ಇವರ ತಂದೆ ರಾಮ್ ಪ್ರಕಾಶ್ ಶೆಟ್ಟಿ ಮತ್ತು ತಾಯಿ ಶಾಲ್ಮಲಿ ಶೆಟ್ಟಿ. ತಂದೆಯ ಪ್ರೇರಣೆಯಿಂದ 8ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆರಂಭಿಸಿ, ಮನೆಯ ಹಿತ್ತಲಲ್ಲೇ ತಮ್ಮ ಕ್ರೀಡಾ ಪಯಣ ಆರಂಭಿಸಿದರು.

ಕಾರ್ಕಳ ತಾಲೂಕು ಸಾಣೂರಿನ ಪ್ರಕೃತಿ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು, ಕಾರ್ಕಳದ ಜಾನ್ ಸ್ಪೋರ್ಟ್ ಅಕಾಡೆಮಿ ಹಾಗೂ ಮಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಉತ್ತಮ ತರಬೇತಿಗಾಗಿ 12ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡರು. ಅಲ್ಲಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಸಾಗರ್ ಚೋಪ್ರಾ ಮಾರ್ಗದರ್ಶನದಲ್ಲಿ ತಮ್ಮ ಕೌಶಲ್ಯವನ್ನು ಮತ್ತಷ್ಟು ಬೆಳಸಿಕೊಂಡರು. ಪ್ರಸ್ತುತ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ವಿಜ್ಞಾನದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.6 ಅಡಿ 4 ಇಂಚು ಎತ್ತರ ಹೊಂದಿರುವ ಆಯುಷ್ ತಮ್ಮ ಶಕ್ತಿಶಾಲಿ ಸ್ಮ್ಯಾಶ್‌ಗಳ ಮೂಲಕ ಗಮನ ಸೆಳೆದಿದ್ದಾರೆ. 2023ರ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ದೇಶದ ಹೆಮ್ಮೆ ಹೆಚ್ಚಿಸಿದರು. ಜೊತೆಗೆ 2025ರ ಯುಎಸ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಬ್ರಿಯಾನ್ ಯಾಂಗ್ ಅವರನ್ನು ಸೋಲಿಸಿ ತಮ್ಮ ಮೊದಲ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದಿದ್ದಾರೆ.