ಸಾರಾಂಶ
ದಾಸರಹಳ್ಳಿ : ಬಾಗಲಗುಂಟೆ ಕೆರೆ ಹಿಂಭಾಗದ ಬೈರವೇಶ್ವರ ನಗರ, ಅಂದಾನಪ್ಪ ಲೇಔಟ್ ನಿವಾಸಿಗಳಿಗೆ ಜಲಮಂಡಳಿ ಮತ್ತು ಬಿಬಿಎಂಪಿ ಕೊರೆಸಿದ ಬೋರ್‌ವೆಲ್‌ನಿಂದ ನೀರೂ ಇಲ್ಲ. ಇತ್ತ ಕಾವೇರಿ ನೀರೂ ಕೈಕೊಟ್ಟಿದೆ. ಇದರಿಂದಾಗಿ 100ಕ್ಕೂ ಅಧಿಕ ಮನೆಗಳು ನೀರಿನ ಸಮಸ್ಯೆ ಎದುರಿಸುತ್ತಿವೆ.
ಈ ಎರಡು ಲೇಔಟ್‌ಗಳಲ್ಲಿ ಬೋರ್‌ವೆಲ್ ಸೌಲಭ್ಯವಿಲ್ಲ. 8ನೇ ಮೈಲಿ ಸಮೀಪದಲ್ಲಿ ಉಂಟಾಗಿರುವ ಪೈಪ್‌ಲೈನ್ ಸಮಸ್ಯೆಯಿಂದ ಕಾವೇರಿ ನೀರು ಪೂರೈಕೆಯೂ ಸ್ಥಗಿತಗೊಂಡಿದೆ. ಹೀಗಾಗಿ ನೀರಿನ ಸಮಸ್ಯೆ ತಲೆದೋರಿದೆ.
ನೀರಿನ ಕೊರತೆಯಿಂದಾಗಿ ಟ್ಯಾಂಕರ್ ನೀರನ್ನು ಆಶ್ರಯಿಸಬೇಕಿದೆ. ಆದರೆ, ದುಬಾರಿ ದರ ನೀಡಿ ನೀರು ತರಿಸಲು ಆಗದೇ ತತ್ತರಿಸಿದ್ದೇವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆ ಬಾಡಿಗೆ ಕಟ್ಟಬೇಕು. ಜೊತೆಗೆ ಟ್ಯಾಂಕರ್ ನೀರಿಗಾಗಿ ತಿಂಗಳಿಗೆ ₹2,000 ಎತ್ತಿಡಬೇಕು. ಸಾಮಾನ್ಯ ಜನರಿಗೆ ಇದು ದುಬಾರಿ. ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆಗೆ ಬೇಗ ಪರಿಹಾರ ಒದಗಿಸಬೇಕು ಎಂದು ಖಾಸಗಿ ಸಂಸ್ಥೆಯ ಕಾರ್ಮಿಕ ಬಾಣಗೆರೆ ವಿಶ್ವನಾಥ್ ನಾಯಕ ಆಗ್ರಹಿಸಿದರು.
‘ಸುಮಾರು ನಾಲ್ಕು ತಿಂಗಳಿನಿಂದ ಈ ಪ್ರದೇಶದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಳ್ಳವರು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಇಲ್ಲದವರು ಉಚಿತ ನೀರಿಗಾಗಿ ಕಾಯುತ್ತ ಕುಳಿತುಕೊಳ್ಳುವಂತಾಗಿದೆ. ಕಾವೇರಿ ನೀರನ್ನಾದರೂ ಸರಿಯಾಗಿ ಬಿಟ್ಟಿದ್ದರೆ ಸುಧಾರಿಸಬಹುದಿತ್ತು ಎಂದು ಗೃಹಿಣಿ ಪವಿತ್ರಾ ಬೇಸರ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಜಲಮಂಡಳಿ ವಿಫಲವಾಗಿದೆ. ಮಳೆಗಾಲ ಆರಂಭವಾದರೂ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿ ಬಿ.ಎಂ.ಜಗದೀಶ್ ಎಚ್ಚರಿಕೆ ನೀಡಿದರು.
ನೀರಿನ ಸಮಸ್ಯೆಯ ಕಾರಣದಿಂದಾಗಿ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿನ ತರಗತಿಗಳಿಗೆ, ಪರೀಕ್ಷೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.ಬೇಸಿಗೆ ಕಾಲ ಪ್ರಾರಂಭವಾದಗಿನಿಂದ ನೀರಿನ ಸಮಸ್ಯೆ ಸಾಕಷ್ಟಾಗಿದೆ. ಕಾವೇರಿ 5ನೇ ಹಂತ ಕೂಡ ವಿಳಂಬವಾಗಿದೆ. ಅನುದಾನ ಕೇಳಿದರೆ ರಾಜ್ಯ ಸರ್ಕಾರ ನೀಡುತ್ತಿಲ್ಲ. ಬೋರ್‌ವೆಲ್ ಕೊರೆಸಲು ನೀಡಿದ್ದ ಅನುದಾನವನ್ನೂ ಸರ್ಕಾರ ವಾಪಸ್ ಪಡೆದುಕೊಂಡಿದೆ.
-ಎಸ್.ಮುನಿರಾಜು, ಶಾಸಕ.