ಸಾರಾಂಶ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ಸ್ವಯತ್ತ ವಿವಿ) ಇದರ ಮುಖ್ಯ ನಿರ್ವಹಣಾ ಅಧಿಕಾರಿ (ಸಿಓಓ)ಯಾಗಿ ಡಾ. ರವಿರಾಜ ಎನ್. ಸೀತಾರಾಮ್ ನೇಮಕಗೊಂಡಿದ್ದಾರೆ. ಮಾಹೆಯ ಯೋಜನೆ ಮತ್ತು ಉಸ್ತುವಾರಿ ನಿರ್ದೇಶಕರಾಗಿದ್ದ ಅವರು ಜು.1ರಂದು ಸಿಓಓ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಂಡಿಯಾ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಎಂದು ಪುರಸ್ಕೃತ, ಬಹುಶಿಸ್ತೀಯ ವಿಶ್ವವಿದ್ಯಾನಿಲಯವಾಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ಸ್ವಯತ್ತ ವಿವಿ) ಇದರ ಮುಖ್ಯ ನಿರ್ವಹಣಾ ಅಧಿಕಾರಿ (ಸಿಓಓ)ಯಾಗಿ ಡಾ. ರವಿರಾಜ ಎನ್. ಸೀತಾರಾಮ್ ನೇಮಕಗೊಂಡಿದ್ದಾರೆ.ಮಾಹೆಯ ಯೋಜನೆ ಮತ್ತು ಉಸ್ತುವಾರಿ ನಿರ್ದೇಶಕರಾಗಿದ್ದ ಅವರು ಜು.1ರಂದು ಸಿಓಓ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಮಾಹೆಯ ಶೈಕ್ಷಣಿಕೇತರ ಕ್ರಿಯಾತ್ಮಕ ವಿಭಾಗಗಳಾದ ಸಾಮಾನ್ಯ ಸೇವೆಗಳು, ಖರೀದಿ, ಯೋಜನೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ, ಮಾನವ ಸಂಪನ್ಮೂಲಗಳು, ಕಾನೂನು, ಕಾರ್ಪೊರೇಟ್ ಸಂಬಂಧಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಹಾಸ್ಟೆಲ್‌ಗಳು ಮತ್ತು ಕ್ಯಾಂಪಸ್ ಸುರಕ್ಷತೆ, ಸಾರ್ವಜನಿಕರ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಾರೆ.
ಜೈವಿಕ ವಿಜ್ಞಾನದಲ್ಲಿ ಎಂ.ಎಸ್ಸಿ. ಮತ್ತು ಸೂಕ್ಷ್ಮಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅವರು, ಕಾರ್ಯಾಚರಣೆ ನಿರ್ವಹಣೆಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಕೆನಡಾದ ಮೌಂಟ್ ಆಲಿಸನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಆಲ್ಬರ್ಟ್ ಐನ್‌ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್, ಮಾಂಟೆಫಿಯೋರ್ ವೈದ್ಯಕೀಯ ಕೇಂದ್ರ ಮತ್ತು ಆಲ್ಬರ್ಟ್ ಐನ್‌ಸ್ಟೈನ್ ಕ್ಯಾನ್ಸರ್ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.2020ರಲ್ಲಿ ಕಾರ್ಪೊರೇಟ್ ಸಂಬಂಧಗಳ ಸ್ಥಾಪಕ ನಿರ್ದೇಶಕರಾಗಿ ಮಾಹೆ ಮಣಿಪಾಲಕ್ಕೆ ಸೇರಿ, ಮಣಿಪಾಲ್ ಸೆಂಟರ್ ಫಾರ್ ಬಯೋಥೆರಪ್ಯೂಟಿಕ್ಸ್ ರಿಸರ್ಚ್‌ನಲ್ಲಿ ಪ್ರೊಫೆಸರ್ ಮತ್ತು ಸಂಯೋಜಕರಾಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ ಎಂ.ಸಿ.ಬಿ.ಆರ್. ಕೇಂದ್ರವು ಭಾರತದ ಪ್ರಮುಖ ಸಂಶೋಧನಾ ಕೇಂದ್ರವಾಗಿ ಹೊರಹೊಮ್ಮಿದೆ. ಮಾರ್ಚ್ 2023ರಲ್ಲಿ, ಅವರು ಯೋಜನೆ ಮತ್ತು ಮಾನಿಟರಿಂಗ್ ವಿಭಾಗದಲ್ಲಿ ನಿರ್ದೇಶಕರಾಗಿ ನೇಮಕಗೊಂಡಿದ್ದರು.